ಕುಕ್ಕೆ ಸುಬ್ರಹ್ಮಣ್ಯ ವಿವಾದ ಪರಿಹರಿಸಲು ಮುಂದಾದ ಪೇಜಾವರ ಶ್ರೀ
ಮಂಗಳೂರು, ಜೂನ್ 06: ದಕ್ಷಿಣ ಭಾರತದ ಪ್ರಸಿದ್ಧ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಂಪುಟ ನರಸಿಂಹ ಮಠ ಹಾಗು ಸುಬ್ರಹ್ಮಣ್ಯ ದೇವಾಲಯದ ನಡುವಿನ ವಿವಾದ ತಾರಕಕ್ಕೇರಿದೆ. ಸರ್ಪ ಸಂಸ್ಕಾರ ವಿಚಾರದಲ್ಲಿ ಭುಗಿಲೆದ್ದಿರುವ ವಿವಾದಕ್ಕೆ ತೆರೆ ಎಳೆಯಲು ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಮುಂದಾಗಿದ್ದಾರೆ.
ವಿವಾದಕ್ಕೆ ತೆರೆ ಎಳೆಯುವ ಹಿನ್ನೆಲೆಯಲ್ಲಿ ಪೇಜಾವರ ಶ್ರೀ ನಾಳೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಲಿದ್ದಾರೆ ಎಂದು ಹೇಳಲಾಗಿದೆ. ಸರ್ಪ ಸಂಸ್ಕಾರ ವಿಚಾರದಲ್ಲಿ ಮಠ -ದೇಗುಲದ ನಡುವೆ ತಲೆದೋರಿರುವ ವಿವಾದವನ್ನು ಪೇಜಾವರ ಶ್ರೀ ಮಾತುಕತೆ ಮೂಲಕ ಪರಿಹರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ದೇವಸ್ಥಾನ ಮತ್ತು ಮಠದ ನಡುವೆ ಸೌಹಾರ್ದ ವಾತಾವರಣ ಮೂಡಿಸಲು ಪೇಜಾವರ ಶ್ರೀಗಳು ಮಧ್ಯ ಪ್ರವೇಶಿಸಬೇಕು ಎನ್ನುವ ಒತ್ತಾಯ ಈ ಹಿಂದಿನಿಂದಲೂ ಕೇಳಿಬರುತ್ತಿತ್ತು. ಈ ಹಿನ್ನೆಲೆಯಲ್ಲಿ ನಾಳೆ ಜೂನ್ 7ರ ಶ್ರೀಗಳ ಕುಕ್ಕೆ ಕ್ಷೇತ್ರ ಭೇಟಿ ಬಹಳಷ್ಟು ಮಹತ್ವ ಪಡೆದುಕೊಂಡಿದೆ. ಅವರ ಭೇಟಿಯನ್ನು ಸುಬ್ರಹ್ಮಣ್ಯ ಮಠ ಖಚಿತಪಡಿಸಿದೆ.

ಈ ನಡುವೆ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಸಂಪುಟ ನರಸಿಂಹ ಮಠದ ಪಾವಿತ್ರ್ಯಕ್ಕೆ ಧಕ್ಕೆ ತರುವ ಷಡ್ಯಂತ್ರ ನಡೆಯುತ್ತಿದೆ. 3 ದಿನಗಳ ಹಿಂದೆ ದೇವಸ್ಥಾನ ಮತ್ತು ಮಠದ ನಡುವೆ ಸಂಘರ್ಷ ಸೃಷ್ಟಿಸಲು ಯತ್ನಿಸಿದ ಘಟನೆ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಮಗ್ರ ತನಿಖೆ ನಡೆಸಬೇಕು ಎಂದು ವಿಶ್ವಹಿಂದೂ ಪರಿಷತ್ ಒತ್ತಾಯಿಸಿದೆ.












Click it and Unblock the Notifications