ಮಂಗಳೂರು: ಪ್ರಧಾನಿ ಮೋದಿ ಸಮಾವೇಶಕ್ಕೆ ಬರುವವರಿಗೆ ವಾಹನಗಳ ಪಾರ್ಕಿಂಗ್ ಮಾಹಿತಿ
ಮಂಗಳೂರು,ಆಗಸ್ಟ್, 31: ಸರ್ಕಾರದ ಅಧಿಕೃತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಸೆಪ್ಟೆಂಬರ್ 2ರಂದು ಮಂಗಳೂರಿಗೆ ಆಗಮಿಸುತ್ತಿದ್ದಾರೆ. ಹೆಚ್ಚಿನ ಭದ್ರತೆಯ ಹಿನ್ನೆಲೆಯಲ್ಲಿ ಮತ್ತು ಜನರಿಗೆ ಸಮಸ್ಯೆ ಆಗದಂತೆ ಮಂಗಳೂರು ನಗರದಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ಅಲ್ಲದೆ ವಿವಿಧೆಡೆಗಳಿಂದ ಸಮಾವೇಶಕ್ಕೆ ಆಗಮಿಸುವ ವಾಹನಗಳಿಗೂ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಸೆಪ್ಟೆಂಬರ್ 2ರಂದು ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಕೂಳೂರು ಜಂಕ್ಷನ್‌ನಿಂದ ಕೊಟ್ಟಾರ ಜಂಕ್ಷನ್‌ವರೆಗೆ ಸಾಮಾನ್ಯ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಉಳಿದಂತೆ ಮಂಗಳೂರು ನಗರದ 9 ಕಡೆಗಳಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ. ನಂತೂರು ಸರ್ಕಲ್‌ನಿಂದ ಆಗಮಿಸುವ ವಾಹನಗಳು ಬಿಕರ್ನಕಟ್ಟೆ-ಕೈಕಂಬ ಜಂಕ್ಷನ್ ಬಳಸಲು ಸೂಚನೆ ನೀಡಲಾಗಿದೆ. ಉಡುಪಿಗೆ ತೆರಳಲು ಬಿಕರ್ನಕಟ್ಟೆ ಮೂಲಕ ವಾಮಂಜೂರು, ಗುರುಪುರ, ಮೂಡುಬಿದಿರೆ, ಕಾರ್ಕಳ ರಸ್ತೆಯನ್ನು ಬಳಸಬೇಕು. ಮೈಸೂರು, ಮಡಿಕೇರಿಗೆ ತೆರಳಲು ಬಿಕರ್ನಕಟ್ಟೆ- ಪಡೀಲ್-ಪುತ್ತೂರು-ಸುಳ್ಯ ಮಾರ್ಗದ ರಸ್ತೆಯನ್ನು ಬಳಸಬೇಕು. ಬೆಂಗಳೂರಿಗೆ ತೆರಳುವವರು ಬಿಕರ್ನಕಟ್ಟೆ-ಪಡೀಲ್, ಬಿ.ಸಿ.ರೋಡ್-ಉಪ್ಪಿನಂಗಡಿ ರಸ್ತೆ ಮಾರ್ಗವನ್ನು ಬಳಸಬೇಕು.

ಯಾವ್ಯಾವ ಮಾರ್ಗಗಳಲ್ಲಿ ಮಂಗಳೂರಿಗೆ ಬರಬಹುದು?
ಕಾಸರಗೋಡು ಕಡೆಗೆ ಹೋಗುವವರು ಬಿಕರ್ನಕಟ್ಟೆ-ಪಡೀಲ್, ಪಂಪ್ ವೆಲ್-ತೊಕ್ಕೊಟ್ಟು ರಸ್ತೆ ಮೂಲಕ ಹೋಗಬಹುದು. ಅದೇ ರೀತಿ ಪೊರ್ಕೋಡಿ ಜಂಕ್ಷನ್‌ನಿಂದ ಜೋಕಟ್ಟೆ-ಕಾನಾ, ಸುರತ್ಕಲ್ ಹಾಗೂ ಏರ್ ಪೋರ್ಟ್‌ನಿಂದ ಕೈಕಂಬ-ಗುರುಪುರ ಮೂಲಕ ಮಂಗಳೂರಿಗೆ ತೆರಳಬಹುದು. ಮುಲ್ಕಿ ಜಂಕ್ಷನ್‌ನಿಂದ ಕಿನ್ನಿಗೋಳಿ-ಕಟೀಲು, ಬಜಪೆ-ಕೈಕಂಬ ಮೂಲಕ ಮಂಗಳೂರಿಗೆ ಬರಬಹುದು. ಹಳೆಯಂಗಡಿಯಿಂದ ಪಕ್ಷಿಕೆರೆ-ಕಿನ್ನಿಗೋಳಿ, ಏರ್‌ಪೋರ್ಟ್ ರಸ್ತೆ ಮೂಲಕ ಬರಲು ಅವಕಾಶವಿದೆ. ಲೇಡಿಹಿಲ್, ಪಿವಿಎಸ್-ಬಂಟ್ಸ್ ಹಾಸ್ಟೆಲ್ ಮೂಲಕ ಪಂಪ್ ವೆಲ್‌ಗೆ ವಾಹನ ಸಂಚಾರ ಇದೆ. ಅಲ್ಲದೆ ಪ್ರಧಾನಿ ಅವರ ಕಾರ್ಯಕ್ರಮಕ್ಕೆ ಆಗಮಿಸುವ ವಾಹನಗಳ ಪಾರ್ಕಿಂಗ್‌ಗೆ ಪೊಲೀಸ್ ಇಲಾಖೆ 15 ಕಡೆಗಳಲ್ಲಿ ಸ್ಥಳ ಗುರುತಿಸಿದೆ.

ಪಾರ್ಕಿಂಗ್ ಸ್ಥಳ ಗುರುತಿಸಿದ ಪೊಲೀಸ್ ಇಲಾಖೆ
1) ಡೆಲ್ಟಾ ಗ್ರೌಂಡ್‌ನಲ್ಲಿ ಪೊಲೀಸ್ ಪಾಸ್ ಪಡೆದ ವಿವಿಐಪಿ 300 ಕಾರುಗಳ ಪಾರ್ಕಿಂಗ್ ವ್ಯವಸ್ಥೆ.
2) ಸೋಮಯಾಜಿ ಮೈದಾನ ಕೂಳೂರಿನಲ್ಲಿ ಪೊಲೀಸ್ ಪಾಸ್ ಪಡೆದ 500 ವಿಐಪಿ ಕಾರುಗಳ ಪಾರ್ಕಿಂಗ್ ವ್ಯವಸ್ಥೆ.
3) ತಣ್ಣೀರು ಬಾವಿ ರಸ್ತೆ ಹಾಗೂ ಪಣಂಬೂರಿನಲ್ಲಿ ಉಡುಪಿ, ಸುರತ್ಕಲ್, ಕಾವೂರು ಕಡೆಯಿಂದ ಬರುವ ವಾಹನಗಳು, 1,500 ಬಸ್‌ಗಳು, 500 ಕಾರುಗಳ ನಿಲುಗಡೆಗೆ ವ್ಯವಸ್ಥೆ.
4) ಎನ್ಎಂಪಿಎ ಮೈದಾನ ಪಣಂಬೂರಿನಲ್ಲಿ ಬಜಪೆ, ಕಾವೂರು ಹಾಗೂ ಉಡುಪಿ ವಾಹನಗಳು, 200 ಬಸ್‌ಗಳು, 600 ಬೈರ್‌ಗಳ ನಿಲುಗಡೆಗೆ ವ್ಯವಸ್ಥೆ.
5) ಪಣಂಬೂರಿನ ಎಂಎಸ್‌ಇಝಡ್ ರಸ್ತೆಯಲ್ಲಿ ಉಡುಪಿ, ಸುರತ್ಕಲ್ ಕಡೆಯ 1000 ಲಘು ವಾಹನಗಳ ನಿಲುಗಡೆಗೆ ವ್ಯವಸ್ಥೆ.
6) ಕೂಳೂರು ಪಂಜಿಮೊಗರಿನ ಎ.ಜೆ.ಶೆಟ್ಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪೊಲೀಸ್ ಪಾಸ್ ಪಡೆದ 100 ವಿಐಪಿ ಕಾರುಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.
7) ಗೋಲ್ಡ್ ಪಿಂಚ್ ಮೈದಾನದ ಪೂರ್ವ ಭಾಗದ ಅಮೆಜಾನ್ ಗೋಡಾನ್ ಹತ್ತಿರದಲ್ಲಿ ಎಲ್ಲಾ ಭಾಗದ 2,000 ಕಾರುಗಳು ಮತ್ತು 3,000 ಬೈಕ್‌ಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.
8) ಎ.ಜೆ. ಆಸ್ಪತ್ರೆ ಬಳಿಯ ಕುಂಟಿಕಾನದಿಂದ ಕಾವೂರು ಜಂಕ್ಷನ್: ಬೆಳ್ತಂಗಡಿ ಹಾಗೂ ಕಾಸರಗೋಡು ಕಡೆಯ350 ಬಸ್‌ಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.
9) ಕೆಪಿಟಿ ಮೈದಾನದಲ್ಲಿ ಮೂಡುಬಿದಿರೆ, ಮುಲ್ಕಿ ತಾಲೂಕಿನ 200 ಬಸ್‌ಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.
10) ವ್ಯಾಸ ನಗರ ಮೈದಾನದಲ್ಲಿ ಪುತ್ತೂರು ಮತ್ತು ಸುಳ್ಯ ತಾಲೂಕಿನ 50 ಬಸ್‌ಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.
11) ಪದುವಾ ಮೈದಾನದಲ್ಲಿ ಪುತ್ತೂರು ಮತ್ತು ಸುಳ್ಯ ತಾಲೂಕಿನ 250 ಬಸ್‌ಗಳ ನಿಲುಗಡೆಗೆ ವ್ಯವಸ್ಥೆ.
12) ಕರಾವಳಿ ಉತ್ಸವ ಮೈದಾನದಲ್ಲಿ ಮಂಗಳೂರು ನಗರ ವ್ಯಾಪ್ತಿಯಿಂದ ಆಗಮಿಸುವ 250 ಬಸ್‌ಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
13) ಉರ್ವ ಮಾರುಕಟ್ಟೆ ಮೈದಾನದಲ್ಲಿ ಉಳ್ಳಾಲ ತಾಲ್ಲೂಕು ವ್ಯಾಪ್ತಿಯಿಂದ ಬರುವ 100 ಬಸ್‌ಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.
14) ಲೇಡಿಹಿಲ್ ಪೊಂಪೈ ಚರ್ಚ್ ಬಳಿ ಉಳ್ಳಾಲ ತಾಲ್ಲೂಕು ವ್ಯಾಪ್ತಿಯಿಂದ ಬರುವ 100 ಬಸ್‌ಗಳ ನಿಲುಗಡೆಗೆ ವ್ಯವಸ್ಥೆ.
15) ಉರ್ವಸ್ಟೋರ್ ಮೈದಾನದಿಂದ ಇನ್ಫೋಸಿಸ್ ಹಿಂಭಾಗದ ಕುಂಟಿಕಾನ ರಸ್ತೆಯವರೆಗೆ ಬಂಟ್ವಾಳ ತಾಲ್ಲೂಕು ವ್ಯಾಪ್ತಿಯಿಂದ ಬರುವ 300 ಬಸ್‌ಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ಕಾರ್ಯಕ್ರಮಕ್ಕೆ ಲಕ್ಷಾಂತರ ಕಾರ್ಯಕರ್ತರ ಆಗಮನ
ಬಳಿಕ ರಸ್ತೆ ಮಾರ್ಗವಾಗಿ ಬಂಗ್ರ ಕೂಳೂರಿನ ಗೋಲ್ಡ್ ಪಿಂಚ್ ಸಿಟಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಅವರು ಲಕ್ಷಾಂತರ ಕಾರ್ಯಕರ್ತರು, ಫಲಾನುಭವಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಎಂಟು ವಿಧಾನಸಭಾ ಕ್ಷೇತ್ರದಿಂದ ಲಕ್ಷಾಂತರ ಮಂದಿ ಕಾರ್ಯಕರ್ತರು ಬರಲಿದ್ದಾರೆ. ಈಗಾಗಲೇ 1,461 ಬಸ್, 200 ಟೆಂಪೋ ಟ್ರಾವೆಲ್‌ಗಳನ್ನು ಬುಕ್ಕಿಂಗ್ ಮಾಡಲಾಗಿದೆ. ಜಿಲ್ಲಾಡಳಿತ 70 ಸಾವಿರಕ್ಕೂ ಅಧಿಕ ಮಂದಿ ಫಲಾನುಭವಿಗಳನ್ನು ಗುರುತಿಸಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದೆ.

ಕಾರ್ಯಕ್ರಮ ಪ್ರಾರಂಭವಾಗುವ ಸಮಯ
ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ ಸೇರಿದಂತೆ ಬಿಜೆಪಿ ನಾಯಕರು ಭಾಗವಹಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಯವರೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ಕಾರ್ಯಕ್ರಮದ ಶೇಕಡಾ 80% ಪೂರ್ವ ಸಿದ್ಧತೆ ಆಗಿದೆ. ಕಾರ್ಯಕರ್ತರು ಮಧ್ಯಾಹ್ನ 11:30ರ ಒಳಗಡೆ ಸಮಾವೇಶ ನಡೆಯುವ ಸ್ಥಳಕ್ಕೆ ಆಗಮಿಸಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ ಸೂಚನೆ ನೀಡಿದ್ದಾರೆ.












Click it and Unblock the Notifications