ಸುರತ್ಕಲ್ ಟೋಲ್ ಗೇಟ್ ಸುಂಕ ವಿಧಿಸುವುದಕ್ಕೆ ಸ್ಥಳೀಯರ ಆಕ್ರೋಶ
ಮಂಗಳೂರು, ಜುಲೈ 15: ಮಂಗಳೂರು ಹೊರವಲಯದ ಸುರತ್ಕಲ್ ನ ತಾತ್ಕಾಲಿಕ ಟೋಲ್ ಕೇಂದ್ರದಲ್ಲಿ ಸ್ಥಳೀಯ ವಾಹನಗಳಿಗೆ ಸುಂಕ ವಿಧಿಸುತ್ತಿರುವ ಕ್ರಮಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಜುಲೈ 16ರಿಂದ ಸ್ಥಳೀಯ ಖಾಸಗಿ ವಾಹನಗಳಿಗೆ ಸುಂಕ ವಿಧಿಸುವ ಹೆದ್ದಾರಿ ಪ್ರಾಧಿಕಾರದ ತೀರ್ಮಾನಕ್ಕೆ ತಡೆ ವಿಧಿಸಬೇಕು ಎಂದು ಒತ್ತಾಯಿಸಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಒತ್ತಾಯಿಸಿದೆ. ಈ ಹಿನ್ನೆಲೆಯಲ್ಲಿ ನಿಯೋಗವೊಂದು ಸೋಮವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರನ್ನು ಭೇಟಿ ಮಾಡಿ, ಮನವಿ ಸಲ್ಲಿಸಿತು.
ಟೋಲ್ ಗೇಟ್ ಶಾಶ್ವತವಾಗಿ ಮುಚ್ಚುವ ತೀರ್ಮಾನ ಜಾರಿಯಾಗಬೇಕು, ಯಾವುದೇ ಕಾರಣಕ್ಕೂ ಜುಲೈ 16ರಿಂದ ಟೋಲ್ ಸಂಗ್ರಹಕ್ಕೆ ಅವಕಾಶ ನೀಡಬಾರದು. ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಭೆ ನಡೆಸಬೇಕು, ಅಲ್ಲಿಯವರಗೆ ಯಥಾಸ್ಥಿತಿ ಮುಂದುವರಿಸಬೇಕು ಎಂದು ನಿಯೋಗ ಆಗ್ರಹಿಸಿದೆ.

ಜನರ ಆಗ್ರಹವನ್ನು ಮೀರಿ ಸುಂಕ ಸಂಗ್ರಹಿಸಲು ಮುಂದಾದರೆ ಹೋರಾಟ ಸಮಿತಿ ಅದನ್ನು ತಡೆಯಲಿದೆ. ಹೋರಾಟ ಸಮಿತಿಯ ನೇತೃತ್ವದಲ್ಲಿ ಮಂಗಳವಾರ ಪಕ್ಷಾತೀತವಾಗಿ ಸಂಘಟನೆ ಪ್ರಮುಖರು, ನಾಗರಿಕರ ಬೆಂಬಲದೊಂದಿಗೆ ಟೋಲ್ ಗೇಟ್ ಮುಂಭಾಗ ಸೇರಿ ಪ್ರತಿಭಟನೆ ನಡೆಸುವ ಬಗ್ಗೆ ಸಮಿತಿ ಎಚ್ಚರಿಸಿದೆ.
ಈ ಸಂದರ್ಭದಲ್ಲಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ, ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ಮತ್ತಿತರರು ಇದ್ದರು.












Click it and Unblock the Notifications