ಪೋಲೀಸರ ಮೇಲೆ ಹಲ್ಲೆಗೆ ಮುಂದಾದ್ರೆ ಓಪನ್ ಫೈರಿಂಗ್ - ಐಜಿಪಿ ಆರ್ಡರ್
ಮಂಗಳೂರು, ಜುಲೈ 9: ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಅವರ ಶವಯಾತ್ರೆಯ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ ರೋಡ್, ಕೈಕಂಬದಲ್ಲಿ ನಡೆದ ಕಲ್ಲು ತೂರಾಟ ಪ್ರಕರಣ ಪೂರ್ವನಿಯೋಜಿತ ಕೃತ್ಯ ಎಂದು ಎಸ್‍ಪಿ ಸುಧೀರ್ ರೆಡ್ಡಿ ಹೇಳಿದ್ದಾರೆ.
ಈ ವೇಳೆ 'ಒನ್ಇಂಡಿಯಾ ಕನ್ನಡ'ದ ಜೊತೆಗೆ ಮಾತನಾಡಿದ ಅವರು, ಪೋಲೀಸರ ಮೇಲೆ ಹಲ್ಲೆಗೆ ಮುಂದಾದ್ರೆ ಓಪನ್ ಫೈರ್ ಮಾಡಲು ಪಶ್ಚಿಮ ವಲಯ ಐಜಿಪಿ ಪಿ. ಹರಿಶೇಖರನ್ ಸೂಚನೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ಕಲ್ಲು ತೂರಾಟ ಪ್ರಕರಣ ಸಂಬಂಧ ಬಂಧಿತರ ಸಂಖ್ಯೆ 13 ಕ್ಕೆ ಏರಿಕೆಯಾಗಿದೆ. ಕಳೆದ ರಾತ್ರಿ ಮತ್ತೆ ಮೂರು ಜನರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ಈಗ ಜಿಲ್ಲೆಯಲ್ಲಿ 1300 ಪೊಲೀಸರಿಂದ ಬಂದೋಬಸ್ತ್ ಇದೆ. ಪೊಲೀಸರು ರಾತ್ರಿ ಹಗಲು ಗಸ್ತಿನಲ್ಲಿದ್ದಾರೆ. ಸ್ಥಳದಲ್ಲಿ 1 ಕೆಎಸ್‍ಆರ್‍ಪಿ, ನಾಲ್ಕೈದು ಜೀಪ್ ಗಳಲ್ಲಿ ಪೊಲೀಸರು ಮೊಕ್ಕಾಂ ಹೂಡಿದ್ದಾರೆ. ಸದ್ಯಕ್ಕೆ ಮಂಗಳೂರು ಸಹಜ ಸ್ಥಿತಿಯತ್ತ ಮರಳುತ್ತಿದೆ ಎಂದು ಎಸ್‍ಪಿ ಸುಧೀರ್ ರೆಡ್ಡಿ ತಿಳಿಸಿದರು.
ಬಿ.ಸಿ ರೋಡ್, ಕೈಕಂಬ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್.ಪಿ ಮತ್ತು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಬಿ.ಸಿ ರೋಡ್ ಪೊಲೀಸ್ ಠಾಣೆಯಲ್ಲಿ ಮುಂದಿನ ತೀರ್ಮಾನಗಳ ಬಗ್ಗೆ ಸಮಾಲೋಚನೆ ನಡೆಯಲಿದೆ ಎಂದರು.
ಇದೊಂದು ಪೂರ್ವ ನಿಯೋಜಿತ ಕೃತ್ಯ. ಹೊರ ರಾಜ್ಯಗಳಿಂದ ಬಂದವರಿಂದ ಈ ದುಷ್ಕೃತ್ಯ ನಡೆದಿದೆ. ಗಲಾಟೆ ಎಬ್ಬಿಸಿದವರಲ್ಲಿ ಹೊರ ರಾಜ್ಯದ 3 ಮಂದಿ ಇದ್ದಾರೆ. ಸ್ಥಳೀಯರು ಅವರಿಗೆ ಸಹಕಾರ ಕೊಟ್ಟಿದ್ದಾರೆ. ಸ್ಥಳದಲ್ಲಿ ಉದ್ರಿಕ್ತರ ಗುಂಪು ಗಲಾಟೆ ಮಾಡಿದ್ದಲ್ಲ. ದುಷ್ಕರ್ಮಿಗಳ ಗುಂಪು ಸೇರಿಕೊಂಡು ಕಾನೂನು ಭಂಜಿಸಿದ್ದಾರೆ ಎಂದು ಮಾಹಿತಿ ನೀಡಿದರು.












Click it and Unblock the Notifications