'ಓಂ' ಸಿನಿಮಾ ರೀತಿ ಪ್ರೀತಿಗಾಗಿ ಕಾಡಿ ಜೈಲು ಸೇರಿದ ಮಂಗಳೂರು ರೌಡಿ!
ಮಂಗಳೂರು, ಜೂನ್ 02; ಮಂಗಳೂರಿನಲ್ಲಿ ಇನ್ನೂ ಮೀಸೆ ಚಿಗುರದ ಯುವಕರ ತಂಡ ತಲ್ವಾರ್ ಹಿಡಿದು ಈಗ ಜೈಲು ಸೇರಿದೆ. ಲವ್ ಎಂಬ ಮಾಯಾಜಾಲದಲ್ಲಿ ಸಿಲುಕಿದ ಯುವಕ ಥೇಟ್ 'ಓಂ' ಸಿನಿಮಾ ರೀತಿಯಲ್ಲೇ ತಲ್ವಾರ್ ಹಿಡಿದು ಪ್ರೀತಿ ಪಡೆಯಲು ಮುಂದಾಗಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಮಂಗಳೂರಿನ ವಿವಿಧ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಿಕೊಂಡು ರೌಡಿಶೀಟರ್ ಆಗಿರುವ ಬಂಟ್ವಾಳದ ಬಾರೆಕ್ಕಾಡು ನಿವಾಸಿ ಹೇಮಂತ್ ಶಕ್ತಿನಗರದ ಯುವತಿಯನ್ನು ಪ್ರೀತಿ ಮಾಡುತ್ತಿದ್ದ. ಇದು ಏಕಮುಖ ಪ್ರೀತಿಯಾಗಿತ್ತು.
ರೌಡಿಸಂ ಮಾಡುತ್ತಾ, ಪುಂಡ ಪೋಕರಿಗಳ ಸಹವಾಸ ಮಾಡಿ ಕಿಡಿಗೇಡಿಯಾಗಿ ಬೆಳೆದಿದ್ದ ಹೇಮಂತ್ ಹಲವು ಬಾರಿ ಯುವತಿಗೆ ತನ್ನ ಪ್ರೇಮ ನಿವೇದನೆಯನ್ನು ಮಾಡಿದ್ದ. ಆದರೆ ಯುವತಿ ಮಾತ್ರ ಖಡಕ್ ಆಗಿಯೇ ಉತ್ತರಿಸಿ ನಿರಾಕರಿಸಿದ್ದಳು.

ಆದರೆ ಮತ್ತೆ ಮತ್ತೆ ಹೇಮಂತ್ ಕಾಡಿದ್ದರಿಂದ ಯುವತಿ ತನ್ನ ಅಣ್ಣಂದಿರಿಗೆ ಈ ಬಗ್ಗೆ ಹೇಳಿದ್ದಳು. ಹೇಮಂತ್‌ಗೆ ಕರೆ ಮಾಡಿದ ಯುವತಿಯ ಅಣ್ಣಂದಿರು ತಂಗಿ ಸಹವಾಸಕ್ಕೆ ಬಂದರೆ ಜಾಗೃತೆ ಅಂತಾ ಎಚ್ಚರಿಕೆ ನೀಡಿದ್ದರು.
ಮಾತಿಗೆ ಮಾತು ಬೆಳೆದು ಪರಸ್ಪರ ವಾಚಮಗೋಚರವಾಗಿ ಬೈದಾಡಿಕೊಂಡಿದ್ದರು. ಇದರಿಂದ ಕೋಪಗೊಂಡ ಹೇಮಂತ್ ಯುವತಿಯ ಮನೆಗೆ ನುಗ್ಗಲು ಪ್ಲಾನ್ ಮಾಡಿದ್ದ. ಇದಕ್ಕಾಗಿ ತನ್ನ ಸಹಚರರನ್ನೂ ರೆಡಿ ಮಾಡಿಕೊಂಡಿದ್ದ.
ಮೇ 30ರಂದು ಮಂಗಳೂರಿನ ಶಕ್ತಿನಗರದಲ್ಲಿರುವ ಯುವತಿಯ ಮನೆಗೆ ನುಗ್ಗಿದ ಹೇಮಂತ್ ಸಹಿತ ಏಳೆಂಟು ಪುಡಿ ರೌಡಿಗಳ ತಂಡ ಯುವತಿಯ ಅಣ್ಣಂದಿರ ಬಗ್ಗೆ ವಿಚಾರಿಸಿದೆ. ಅವರು ಮನೆಯಲ್ಲಿಲ್ಲ ಅಂತಾ ಹೇಳಿದ್ದೆ ತಡ ಇಡೀ ಮನೆಯನ್ನು ಪುಡಿಗೈಯಲು ಆರಂಭಿಸಿದೆ.
ಮನೆಯಲ್ಲಿದ್ದ ವಯಸ್ಸಾದವರನ್ನು ಬಿಡದೆ ಎಲ್ಲರಿಗೂ ಥಳಿಸಿ ಹೋಗಿದೆ. ಈ ಬಗ್ಗೆ ಯುವತಿ ಮನೆಯವರಯ ಮಂಗಳೂರು ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ತನಿಖೆ ಆರಂಭಿಸಿದ ಪೋಲೀಸರು ದಾಂಧಲೆ ನಡೆಸಿದ್ದ ಪಾಗಲ್ ಪ್ರೇಮಿ ಹೇಮಂತ್ (22), ರೌಡಿಶೀಟರ್ ರಂಜಿತ್ (28), ಉರ್ವ ಸ್ಟೋರ್ ನಿವಾಸಿ ಅವಿನಾಶ್ (23), ಕೊಟ್ಟಾರ ಚೌಕಿಯ ಪ್ರಜ್ವಲ್(24), ಕೋಡಿಬೆಂಗ್ರೆ ನಿವಾಸಿ ದೀಕ್ಷಿತ್ (21), ಉರ್ವಾ ಸ್ಟೋರಿನ ಧನುಷ್ (19), ಕುಂಜತ್ ಬೈಲಿನ ಯತಿರಾಜ್ (23) ಬಂಧಿಸಿದ್ದಾರೆ.
ಸದ್ಯ ಆರೋಪಿಗಳ ಹೆಡೆಮುರಿ ಕಟ್ಟಿ ನ್ಯಾಯಾಲಯಕ್ಕೆ ಹಾಜರುಪಡಿಸಿಲಾಗಿದೆ. ಇನ್ನು ಬಂಧಿತರೆಲ್ಲೆರಿಗೂ ಕ್ರೈಂ ಹಿಸ್ಟರಿ ಉಳ್ಳವರು ಎಂದು ತಿಳಿದುಬಂದಿದೆ. ಗ್ಯಾಂಗ್ ನಲ್ಲಿರುವ ಉಳಿದ ಆರೋಪಿಗಳಿಗಾಗಿ ಖಾಕಿ ಪಡೆ ಹುಡುಕಾಟ ಮುಂದುವರೆಸಿದೆ.












Click it and Unblock the Notifications