'ಡೆಡ್' ಆಗಲಿದ್ದ ಓಮ್ನಿ ಆ್ಯಂಬುಲೆನ್ಸ್ ಗಳಿಗೆ ಆಕ್ಸಿಜನ್!
ಮಂಗಳೂರು, ಜೂನ್ 13: ರಾಜ್ಯದಲ್ಲಿ ಓಡುತ್ತಿರುವ ೫ ಸಾವಿರ ಓಮ್ನಿ ಅಂಬ್ಯುಲೆನ್ಸ್ ಗಳು ಮತ್ತೆ ರಸ್ತೆಗೆ ಇಳಿಯುವ ಸ್ವಾತಂತ್ರವನ್ನು ದಕ್ಕಿಸಿಕೊಂಡಿವೆ.
ಕಳೆದ ತಿಂಗಳು ಓಮ್ನಿ ಆ್ಯಂಬುಲೆನ್ಸ್ ಗಳನ್ನು ನಿಷೇಧಿಸಿ ಹೊರಡಿಸಿದ್ದ ಸಾರಿಗೆ ಆಯುಕ್ತರ ಆದೇಶವನ್ನು ಹಿಂಪಡೆಯಲಾಗಿದ್ದು, ಓಮ್ನಿ ಆ್ಯಂಬುಲೆನ್ಸ್ ಗಳು ಮತ್ತೆ ರಸ್ತೆಗೆ ಇಳಿಯಲು ಅನುಕೂಲವಾಗಿದೆ. ಹೊಸ ಆದೇಶದಂತೆ, ಈ ಆ್ಯಂಬುಲೆನ್ಸ್ ಗಳ ಅರ್ಹತಾ ಪತ್ರ ನವೀಕರಣ ಸುಗಮವಾಗಿ ಸಾಗಲಿದೆ.

ಆದರೆ, ಹೊಸ ಆದೇಶ ಕೇವಲ ಒಂದು ವರ್ಷದವರೆಗೆ ಅಸ್ತಿತ್ವದಲ್ಲಿದ್ದು, ಮುಂದಿನ ವರ್ಷ ಈ ಆ್ಯಂಬುಲೆನ್ಸ್ ಗಳ ಅರ್ಹತಾ ಪ್ರಮಾಣ ಪತ್ರದ ಮರು ನವೀಕರಣ ಆನಂತರ ನಿರ್ಧಾರವಾಗಲಿದೆ. ಸದ್ಯಕ್ಕೆ ಸರ್ಕಾರದಿಂದ ಮುಂದಿನ ಆದೇಶ ಬರುವವರೆಗೂ ಈ ಆ್ಯಂಬುಲೆನ್ಸ್ ಗಳು ನಿರಾತಂಕವಾಗಿ ಓಡಾಡಬಹುದಾಗಿದೆ. ಆದರೂ, ಈಗ ಜಾರಿಗೊಂಡಿರುವ ಆದೇಶದಲ್ಲಿ, ಹೊಸ ಓಮ್ನಿ ಆ್ಯಂಬುಲೆನ್ಸ್ ಗಳ ನೊಂದಣಿಯನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಈ ಹಿಂದೆ ಸಾರಿಗೆ ಇಲಾಖೆ ಆಯುಕ್ತರು ಓಮ್ನಿ ಅಂಬ್ಯುಲೆನ್ಸ್ ಗಳಿಗೆ ಅರ್ಹತಾ ಪ್ರಮಾಣ ಪತ್ರ ಹಾಗೂ ನೊಂದಣಿಯನ್ನು ಕೂಡ ಮಾಡಬಾರದು ಎನ್ನುವ ಆದೇಶವನ್ನು ಹೊರಡಿಸಿದ್ದರು.
ಕಳೆದ ತಿಂಗಳ 10ರಂದು ಓಮ್ನಿ ಅಂಬ್ಯುಲೆನ್ಸ್ ಗಳು ರೋಗಿಗಳನ್ನು ಸಾಗಿಸಲು ಅನರ್ಹವಾಗಿದೆ. ಈ ಕುರಿತು ಅರೋಗ್ಯ ಸಚಿವರು ಪತ್ರದ ಮೂಲಕ ಸಾರಿಗೆ ಇಲಾಖೆಯನ್ನು ವಿನಂತಿಸಿ ಓಮ್ನಿ ಆಂಬುಲೆನ್ಸ್ ಗಳನ್ನು ನಿಷೇದ ಹಾಕಬೇಕು ಎಂದು ವಿನಂತಿಸಿಕೊಂಡಿದ್ದರು. ಇದಕ್ಕೆ ಸ್ಪಂದಿಸಿದ್ದ ಸಾರಿಗೆ ಇಲಾಖೆ ಆಯುಕ್ತರು ಆದೇಶ ಹೊರಡಿಸಿ ಓಮ್ನಿ ಆ್ಯಂಬುಲೆನ್ಸ್ ಗಳಿಗೆ ಅರ್ಹತಾ ಸರ್ಟಿಫಿಕೇಟ್ ನೀಡಿಕೆ ಹಾಗೂ ನೊಂದಾವಣಿ ಪ್ರಕ್ರಿಯೆಗಳನ್ನು ಸಂಪೂರ್ಣ ರದ್ದು ಮಾಡಿದ್ದರು.
ಆದರೆ, ಇದಕ್ಕೆ ತೀವ್ರ ಆಕ್ಷೇಪಗಳು ಎದುರಾದ ಹಿನ್ನೆಲೆಯಲ್ಲಿ ಸಾರಿಗೆ ಆಯುಕ್ತರು ಈ ಆದೇಶವನ್ನು ಪರಿಷ್ಕರಿಸಿ ಹೊಸ ಆದೇಶವನ್ನು ನೀಡಿದ್ದಾರೆ. ಅದರ ಪ್ರಕಾರ, ಹಳೆಯ ಓಮ್ನಿ ಅಂಬ್ಯುಲೆನ್ಸ್ ಗಳಿಗೆ ಅರ್ಹತಾ ಪ್ರಮಾಣ ಪಾತ್ರ ನೀಡಲು ಅವಕಾಶವಿದೆ.
ಅಲ್ಲದೆ, ಈಗಾಗಲೇ ನೊಂದಣಿಯಾಗಿರುವ ಓಮ್ನಿ ಆಂಬುಲೆನ್ಸ್ ಗಳ ಅರ್ಹತಾ ಪತ್ರವನ್ನು ನವೀಕರಣಕ್ಕೂ ಯಾವುದೇ ಅಡ್ಡಿಯಿಲ್ಲ. ಹೀಗಾಗಿ, ಕಳೆದೊಂದು ತಿಂಗಳಿನಿಂದ ಬೇಗುದಿಯಲ್ಲಿದ್ದ ಓಮ್ನಿ ಆ್ಯಂಬುಲೆನ್ಸ್ ಗಳ ಮಾಲೀಕರು ಈಗ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಪ್ರತಿಕ್ರಿಯೆಗಳು
ಕರಾವಳಿಯಲ್ಲಿಯೇ ಸರಿಸುಮಾರು ೨೦೦ ರಷ್ಟು ಓಮ್ನಿ ಅಂಬ್ಯುಲೆನ್ಸ್ ಗಳು ಇವೆ. ಇವೆಲ್ಲವೂ ಇನ್ನೂ ಮುಂದೆ ರಸ್ತೆಗೆ ಇಳಿಯುವ ಅವಕಾಶ ಸಿಕ್ಕಿದೆ. ಈ ಅರ್ಹತಾ ಪತ್ರ ಈ ವರ್ಷಕ್ಕೆ ಮಾತ್ರ ಸೀಮಿತವಾಗಿರಲಿದೆ. ಈ ಕಾರಣದಿಂದ ಈ ಬರಿ ಮಾತ್ರ ಅರ್ಹತಾ ಪತ್ರವನ್ನು ನೀಡಲಾಗುವುದು - ಜಿ.ಎಸ್. ಹೆಗ್ಡೆ, ಆರ್ ಟಿಒ ಅಧಿಕಾರಿ
ಇಂದು ಅರ್ಹತಾ ಪಾತ್ರವನ್ನು ಮಾಡಿಸಲು ಆರ್ ಟಿ ಓ ಕಚೇರಿಗೆ ಹೋದಾಗ ಅಂಬ್ಯುಲೆನ್ಸ್ ಗಳು ಮತ್ತೆ ರಸ್ತೆಗೆ ಇಳಿಯುವ ಸ್ವಾತಂತ್ರವನ್ನು ದಕ್ಕಿಸಿಕೊಂಡಿದೆ ಎಂಬ ಸುದ್ದಿ ಕೇಳಿ ತುಂಬಾ ಸಂತಸ ಉಂಟಾಯಿತು.
- ಗಂಗಾಧರ್, ಓಮ್ನಿ ಅಂಬ್ಯುಲೆನ್ಸ್ ಚಾಲಕ
ಎಲ್ಲೆಡೆ ಟೆಂಪೋ ಟ್ರಾವೆಲ್ಲರ್ ಅಥವಾ ಟಾಟಾ ಮಿನಿ ಟ್ರಾವೆಲ್ಲರ್ ಮಾದರಿಯ ಆ್ಯಂಬುಲೆನ್ಸ್ ಹೋಗುವಂತಹ ರಸ್ತೆಗಳು ಕಡಿಮೆ ಇದೆ. ನಗರದ ಒಳ ರಸ್ತೆಗಳಲ್ಲಿ ಇಂತಹ ಓಮ್ನಿ ಆಂಬುಲೆನ್ಸ್ ಗಳೇ ಹೋಗ ಬೇಕಾದ ಪರಿಸ್ಥಿತಿ ಇದೆ, ಸರ್ಕಾರ ಮತ್ತೆ ಹಳೆ ಓಮ್ನಿ ಅಂಬ್ಯುಲೆನ್ಸ್ ಗೆ ಗ್ರೀನ್ ಸಿಗ್ನಲ್ ಸಿಕ್ಕಿರುವುದು ನಿಜಕ್ಕೂ ಸಂತೋಷ.
- ಯೋಗೀಶ್ ಶೆಟ್ಟಿ, ವೆನ್ಲಾಕ್ ಆಸ್ಪತ್ರೆಯ ರೋಗಿ












Click it and Unblock the Notifications