ಸುಳ್ಯ: ಎಸ್.ಅಂಗಾರರ ಹುಟ್ಟೂರಿನಲ್ಲೇ ಮತದಾನ ಬಹಿಷ್ಕಾರಕ್ಕೆ ಮುಂದಾದ ಜನ, ಏಕೆ?: ಇಲ್ಲಿದೆ ವಿವರ
ಮಂಗಳೂರು, ಏಪ್ರಿಲ್, 11: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಹಲವೆಡೆ ಜನರು ಇದೇ ಸರಿಯಾದ ಸಮಯ ಎಂದು ಕ್ಷೇತ್ರದ ಕಾಮಗಾರಿಗಳನ್ನು ಸಂಪೂರ್ಣ ಮಾಡುವವರೆಗೂ ನಾವು ಯಾರಿಗೂ ಮತ ಹಾಕುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ. ಇದೇ ರೀತಿಯಲ್ಲಿ ಇದೀಗ ಸಚಿವ ಎಸ್.ಅಂಗಾರ ಅವರ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಬಹಿಷ್ಕಾರದ ಕೂಗು ಜೋರಾಗಿ ಕೇಳಿಬಂದಿದೆ.
ಸಚಿವ ಎಸ್.ಅಂಗಾರ ಅವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದಿಂದ ಆರು ಬಾರಿ ಶಾಸಕರಾಗಿ ಸೋಲಿಲ್ಲದ ಸರದಾರ ಎಂದು ಗುರುತಿಸಿಕೊಂಡಿದ್ದಾರೆ. ಆದರೆ ಈ ಬಾರಿ ಅಂಗಾರ ಅವರ ಕ್ಷೇತ್ರದ ಹೆಚ್ಚು 40ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಮತದಾರರು ಮತದಾನ ಬಹಿಷ್ಕಾರ ಮಾಡಿದ್ದಾರೆ.

ಮತದಾನ ಬಹಿಷ್ಕಾರದ ಕೂಗು
ಸುಳ್ಯ ಶಾಸಕ ಎಸ್.ಅಂಗಾರ ಅವರ ಹುಟ್ಟೂರಿನಲ್ಲೇ ಮತದಾನ ಬಹಿಷ್ಕಾರದ ಕೂಗು ಎದ್ದಿದೆ. ಸುಳ್ಯದ ಅರಂತೋಡು ಗ್ರಾಮದ ಅರಮನೆಗಯ ಮತ್ತಿತರ ಆಸುಪಾಸಿನ ಪರಿಶಿಷ್ಟ ಜಾತಿಯ ಕೇರಿಗಳಲ್ಲೇ ಮತದಾನ ಬಹಿಷ್ಕರಿಸುವುದಾಗಿ ಮನೆ ಮನೆಗಳಲ್ಲಿ ಬ್ಯಾನರ್, ಭಿತ್ತಿಪತ್ರಗಳನ್ನು ಅಂಟಿಸಲಾಗಿದೆ.
ಅರಮನೆಗಯ ಅನ್ನುವ ಪ್ರದೇಶ ಅಂಗಾರ ಅವರ ಸ್ವಂತ ಊರಾಗಿದೆ. ಆದರೆ, ಈ ಊರಿನಲ್ಲೇ ನಡುವೆ ಹರಿಯುವ ಹೊಳೆಗೆ ಸೇತುವೆ ಇಲ್ಲ. ಸೇತುವೆ ಆಗಬೇಕೆಂದು ಪರಿಸರದ ನಿವಾಸಿಗಳು 30 ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಲೇ ಬಂದಿದ್ದಾರೆ. ಆದರೂ ಕ್ಷೇತ್ರದ ನಾಯಕರು ಎನಿಸಿಕೊಂಡವರು ಜನರಿಗೆ ಭರವಸೆ ನೀಡಿದ್ದು ಬಿಟ್ಟರೆ, ಇದುವರೆಗೂ ಯಾವುದೇ ಬೇಡಿಕೆಯನ್ನು ಈಡೇರಿಸಿಲ್ಲ.
ಹೊಳೆಗೆ ಸೇತುವೆ ಇಲ್ಲದೆ ಜನರ ಪರದಾಟ
ಹೊಳೆಗೆ ಸೇತುವೆ ಇಲ್ಲದ ಪರಿಣಾಮ ಇಲ್ಲಿನ ಜನರು ಪ್ರತಿ ವರ್ಷ ಮಳೆಗಾಲದಲ್ಲಿ ಸಂಕಷ್ಟ ಅನುಭವಿಸುತ್ತಲೇ ಬಂದಿದ್ದಾರೆ. ಈ ಪ್ರದೇಶದಿಂದ ಅರಂತೋಡು ಪೇಟೆಗೆ ಸಾಗಲು 5 ಕಿಲೋ ಮೀಟರ್ ಸುತ್ತು ಬಳಸಿ ಹೋಗಬೇಕು. ಹೊಳೆಯನ್ನು ದಾಟಲಾಗದೇ ಜನರು, ಶಾಲೆಗೆ ಹೋಗುವ ಮಕ್ಕಳು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಆರು ಬಾರಿ ಶಾಸಕನಾಗಿ ಆಯ್ಕೆಯಾದ ಎಸ್.ಅಂಗಾರ ಕ್ಷೇತ್ರದಲ್ಲಿ ಚುನಾವಣೆ ಬಹಿಷ್ಕಾರದ ಕೂಗು ಎದ್ದಿದ್ದು, ಇದು ಕರಾವಳಿ ಬಿಜೆಪಿಗೆ ಮತ್ತಷ್ಟು ತಲೆನೋವಾಗಿದೆ. ಮನೆ ಮನೆಗೆ ಬಹಿಷ್ಕಾರದ ನೋಟೀಸ್ ಅನ್ನು ಗ್ರಾಮಸ್ಥರು ಅಂಟಿಸಿದ್ದು, ಸುಳ್ಯ ಎಂಬ ಬಿಜೆಪಿಯ ಭದ್ರಕೋಟೆಯಲ್ಲಿ ಇದೀಗ ನಡುಕ ಆರಂಭವಾಗಿದೆ.
ಅರಗಮನೆಯ ಪ್ರದೇಶದಲ್ಲಿ ಹೊಳೆಗೆ ಅಡ್ಡಲಾಗಿ ಗ್ರಾಮಸ್ಥರೇ ತಾತ್ಕಾಲಿಕವಾಗಿ ಅಡಿಕೆ ಮರದ ಸಲಾಕೆಯನ್ನು ಮಾಡಿಕೊಂಡಿದ್ದಾರೆ. ಮಳೆಗಾಲದಲ್ಲಿ ಇಲ್ಲಿನ ಜನರು ಜೀವವನ್ನು ಕೈಯಲ್ಲಿ ಹಿಡಿದು ಸಾಗಬೇಕಾದ ಅನಿವಾರ್ಯತೆ ಇದೆ. ಕೇವಲ ಅರಮನೆಗಯ ಮಾತ್ರವಲ್ಲದೇ ಸುಳ್ಯ ಭಾಗದ ಹಲವು ಕುಗ್ರಾಮಗಳಲ್ಲಿ ಸೇತುವೆಯ ಸಮಸ್ಯೆಯಿದ್ದು, ಎಸ್.ಅಂಗಾರ ಕಳೆದ 30 ವರ್ಷಗಳಿಂದ ಯಾವುದೇ ಸಮಸ್ಯೆಯನ್ನು ಬಗೆಹರಿಸಿಲ್ಲ ಎಂದು ಇಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಮನ ಸೆಳೆದ ಮತದಾನ ಬಹಿಷ್ಕಾರದ ಬ್ಯಾನರ್‌ಗಳು
ರಾಜ್ಯ ವಿಧಾನಸಭೆ ಚುನಾವಣೆ ಕಣ ರಂಗೇರಿದ್ದು, ಕೆಲವು ಕ್ಷೇತ್ರಗಳಲ್ಲಿ ರಾಜಕಾರಣಿಗಳು ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲವೆಂದು ಜನರು ಮತದಾನ ಬಹಿಷ್ಕರಿಸುವುದನ್ನು ನೋಡಿದ್ದೇವೆ. ಇದೀಗ ಜನಪ್ರತಿನಿಧಿಗಳ ಪೊಳ್ಳು ಭರವಸೆಗೆ ಬೇಸತ್ತ ವ್ಯಕ್ತಿಯೋರ್ವರು ಮನೆಯ ಗೇಟ್‌ಗೆ ರಾಜಕಾರಣಿಗಳಿಗೆ ಪ್ರವೇಶ ನಿಷೇಧ ಎಂಬ ಬ್ಯಾನರ್ ಅನ್ನು ಅಳವಡಿಸಿದ ಘಟನೆ ಸುಳ್ಯದ ಅಜ್ಜಾವರದಲ್ಲಿ ನಡೆದಿದೆ.
ಸುಳ್ಯ ತಾಲೂಕಿನಾದ್ಯಂತ ನಾನಾ ಭಾಗಗಳಲ್ಲಿ ಸಾರ್ವಜನಿಕರು ಮತದಾನ ಬಹಿಷ್ಕಾರದ ಬ್ಯಾನರ್‌ಗಳನ್ನು ಅಳವಡಿಸಿದ್ದಾರೆ. ಹೀಗೆ ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಸಿರುವುದು ಸುಳ್ಯ ತಾಲೂಕಿನಲ್ಲಿ ಸಂಚಲನ ಮೂಡಿಸಿದೆ. ಹೀಗೆ ಮತದಾರರೋರ್ವರು ಯಾವುದೇ ರಾಜಕಾರಣಿಗಳಿಗೆ ನಮ್ಮ ಮನೆಯ ಗೇಟಿನೊಳಗೆ ಪ್ರವೇಶವಿಲ್ಲ ಎಂಬ ಫಲಕವನ್ನು ಅಳವಡಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಸುಳ್ಯ ತಾಲೂಕಿನ ಅಜ್ಜಾವರ ಮುಂಡೋಳಿ ಮೂಲೆಯ ಗೋಪಾಲಕೃಷ್ಣ ಮನೆಯವರು ಈ ಭಾಗದ ರಸ್ತೆ ನಿರ್ಮಾಣ ಸಂದರ್ಭದಲ್ಲಿ ತಮ್ಮ ಕೃಷಿ ಭೂಮಿಯಿಂದ ಮಣ್ಣನ್ನು ನೀಡಿರುತ್ತಾರೆ. ಆದರೆ ರಸ್ತೆಗೆ ಸುರಿಯುವ ಮಣ್ಣು ಮಳೆಗಾಲದಲ್ಲಿ ವಾಪಸ್ ಬಂದು ಮೋರಿಯಲ್ಲಿ ಸಿಕ್ಕಿ ಕೊಳ್ಳುತ್ತಿದ್ದು, ಈ ಭಾಗದಲ್ಲಿ ಹರಿದು ಬರುವ ನೀರೆಲ್ಲಾ ಕೊನೆಗೆ ಕೃಷಿ ಭೂಮಿಯಲ್ಲಿ ತುಂಬಿಕೊಳ್ಳುತ್ತಿದೆ. ಇದನ್ನು ಸರಿಪಡಿಸಿಕೊಡುವಂತೆ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದರೂ ಇದುವರೆಗೆ ಯಾವುದೇ ಪ್ರಯೋಜನಾ ಇಲ್ಲದಂತಾಗಿದೆ.












Click it and Unblock the Notifications