ಪಿಲಿಕುಳ ಜೈವಿಕ ಉದ್ಯಾನವನಕ್ಕೆ ವಿಶೇಷ ವಿದೇಶಿ ಪ್ರಾಣಿಗಳ ಆಗಮನ
ಮಂಗಳೂರು ಡಿಸೆಂಬರ್ 21: ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿಗಳ ಆಗಮನವಾಗಿದೆ. ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಕೇಂದ್ರ ಮೃಗಾಲಯ ಪ್ರಾಧಿಕಾರದ ಅನುಮತಿಯಂತೆ ಗುಜರಾತ್ ಗ್ರೀನ್ ಮೃಗಾಲಯದಿಂದ ಈ ಹೊಸ ಅತಿಥಿಗಳ ಆಗಮನವಾಗಿದೆ.
ಮಧ್ಯ ಮತ್ತು ದಕ್ಷಿಣ ಅಮೆರಿಕಾ, ಬ್ರೆಜಿಲ್, ಅರ್ಜೆಂಟೈನಾ, ಆಫ್ರಿಕಾ ಹೈ ಆಸ್ಟ್ರೇಲಿಯಗಳಲ್ಲಿ ಕಾಣಸಿಗುವ ಸಣ್ಣ ಜಾತಿಯ ಅಳಿಲು ಕಪಿ, ಮರ‍್ಮೊಸೆಟ್, ಕೆಂಪು ಕೈಯ ಟೆಮಾರಿನ, ಮಾರ ಮಾರ, ಬೃಹತ್ ಗಾತ್ರದ ನೀಲಿ ಬಂಗಾರದ ಮಕಾವು, ಮಿಲಿಟರಿ ಮಕಾವು, ಗಾಲಾ ಕೋಕಟು, ಹಸಿರು ಟೊರೆಕೊ ಮತ್ತು ವಿವಿಧ ಜಾತಿಯ ವಿದೇಶದ ಪಕ್ಷಿಗಳನ್ನು ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ತರಲಾಗಿದೆ. ಪಿಲಿಕುಳದಲ್ಲಿ ಹೆಚ್ಚುವರಿಯಾಗಿದ್ದ ಹುಲಿಗಳು, ಚಿರತೆಗಳು, ಕಾಡುನಾಯಿಗಳು ಮತ್ತು ವಿವಿಧ ಜಾತಿಯ ಉರಗಗಳನ್ನು ಅಲ್ಲಿಗೆ ನೀಡಲಾಗಿದೆ.
ಇನ್ನು ಹಲವು ವಿದೇಶಿ ಪ್ರಾಣಿಗಳನ್ನು ಉಚಿತವಾಗಿ ಕೊಡಲಾಗುವುದೆಂದು ಗ್ರೀನ್ ಮೃಗಾಲಯದ ಅಧಿಕಾರಿಗಳು ಆಶ್ವಾಸನೆ ನೀಡಿದ್ದಾರೆ. ಹೊಸದಾಗಿ ಆಗಮಿಸಿರುವ ಪಾಣಿಗಳನ್ನು ಆರೋಗ್ಯ ಪರಿಶೀಲನೆಗೆ ಮತ್ತು ಇಲ್ಲಿಯ ವಾತಾವರಣಕ್ಕೆ ಒಗ್ಗುವ ತನಕ ಕ್ವಾರೆಂಟೈನ್ ನಲ್ಲಿ ಇಡಲಾಗಿದೆ. ಪಕ್ಷಿಗಳು ವೀಕ್ಷಣೆಗೆ ಮುಕ್ತವಾಗಿದೆ.

ಪ್ರಾಣಿಗಳು ಕ್ವಾರೆಂಟೈನ್ ಅವಧಿ ಮುಗಿದ ತಕ್ಷಣ ಸಾರ್ವಜನಿಕರ ವೀಕ್ಷಣೆಗೆ ಇಡಲಾಗುತ್ತದೆ. ಮೃಗಾಲಯದ ವೈದ್ಯಾಧಿಕಾರಗಳು, ಬಯೋಲೋಜಿಸ್ಟ್ ಗಳು ಮತ್ತು ಪ್ರಾಣಿಪರಿಪಾಲಕರು ಪ್ರಾಣಿಗಳ ಆರೋಗ್ಯದ ಮೇಲೆ ನಿಗಾವಹಿಸುತ್ತಿದ್ದಾರೆ ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಎಚ್ ಜೆ ಭಂಡಾರಿ ಹೇಳಿದ್ದಾರೆ.

ಗ್ರೀನ್ ಮೃಗಾಲಯ ಮತ್ತು ರೆಸ್ಕ್ಯೂ ಸೆಂಟರ್ ನ ಮಾತೃ ಸಂಸ್ಥೆ ರಿಲಯನ್ಸ್ ಫೌಂಡೇಶನ್, ಪಿಲಿಕುಳ ಮೃಗಾಲಯಕ್ಕೆ ಆಗಮಿಸಿರುವ ಹೊಸ ಪ್ರಾಣಿಗಳ ಆವರಣ ರಚನೆಗೆ ಹಾಗೂ ಅಭಿವೃದ್ಧಿಗೆ 1 ಕೋಟಿ ರೂಪಾಯಿ ದೇಣಿಗೆ ನೀಡಿದೆ ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಎಚ್. ಜಯಪ್ರಕಾಶ್ ಭಂಡಾರಿ ತಿಳಿಸಿದ್ದಾರೆ.












Click it and Unblock the Notifications