• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಸ್ಮಯಗಳ ಆಗರ ನೆಲ್ಲಿತೀರ್ಥ ಗುಹಾಲಯದ ವಿಶೇಷತೆ ಏನೆಂದು ಬಲ್ಲಿರಾ?

|

ಮಂಗಳೂರು, ಅಕ್ಟೋಬರ್. 24: ಜನ್ಮದಿಂದ ಅಂತ್ಯದವರೆಗಿನ 18 ಅವಸ್ಥೆಗಳನ್ನು ಪರಿಚಯಿಸಿ ಶಿವಲಿಂಗದ ದರ್ಶನಕ್ಕೆ ಅವಕಾಶ ಕಲ್ಪಿಸುವ ಶ್ರೀ ಕ್ಷೇತ್ರ ನೆಲ್ಲಿ ತೀರ್ಥ. ಕೇವಲ 6 ತಿಂಗಳು ಮಾತ್ರ ತೆರೆದಿರುವ ಈ ಗುಹಾಲಯ ಅಕ್ಟೋಬರ್ 17 ರಂದು ಭಕ್ತರಿಗಾಗಿ ತೆರೆದುಕೊಂಡಿದೆ.

ಅಂದಹಾಗೆ ನೆಲ್ಲಿತೀರ್ಥದ ಶ್ರೀ ಸೋಮನಾಥೇಶ್ವರ ಗುಹಾಲಯದಲ್ಲಿ ಕಳೆದ ಬುಧವಾರ ಅಂದರೆ ಅಕ್ಟೋಬರ್ 17 ರಂದು ಪವಿತ್ರ ತೀರ್ಥಸ್ನಾನದ ಪ್ರಾರಂಭೋತ್ಸವ ನಡೆಯಿತು. ಅಂದು ತುಲಾ ಸಂಕ್ರಮಣದಂದು ಶ್ರೀ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ತೀರ್ಥ ಸ್ನಾನಕ್ಕೆ ಚಾಲನೆ ನೀಡಲಾಯಿತು.

ದಕ್ಷಿಣಕನ್ನಡ ಜಿಲ್ಲೆ ತನ್ನದೇ ಆದ ವೈಶಿಷ್ಠ್ಯ ಪೂರ್ಣ ವಿಶೇಷತೆಗಳಿಂದ ವಿಶ್ವದ ಗಮನ ಸೆಳೆದಿದೆ. ಅದರಲ್ಲಿ ನೆಲ್ಲಿತೀರ್ಥವೂ ಒಂದು. ಮಂಗಳೂರಿನಿಂದ ಉತ್ತರಾಭಿಮುಖವಾಗಿ 35 ಕಿಲೋಮೀಟರ್ ಅಂತರದಲ್ಲಿ ಕ್ರಮಿಸಿ ಬಜಪೆ ಎಂಬಲ್ಲಿ 5 ಕಿಲೋಮೀಟರ್ ಅಂತರದಲ್ಲಿ ದುರ್ಗಮಯವಾದ ಕಾನನದ ಮಧ್ಯೆ ಸಾಗಿದರೆ ಗೋಚರಿಸುತ್ತದೆ ನೆಲ್ಲಿತೀರ್ಥದ ಶ್ರೀ ಸೋಮನಾಥೇಶ್ವರ ಗುಹಾಲಯ.

ಇಲ್ಲಿ ವಿಶೇಷ ಪೂಜೆ, ಸೀಯಾಳಾಭಿಷೇಕ, ತೀರ್ಥಸ್ನಾನ ನಡೆಯುತ್ತದೆಯಾದರೂ ಈ ಕ್ಷೇತ್ರಕ್ಕೆ ಬರುವ ಭಕ್ತಾಧಿಗಳಿಗೆ ಕೈ ಬೀಸಿ ಕರೆಯುವುದು ಇಲ್ಲಿಯ ವಿಸ್ಮಯ ಗುಹಾಲಯ. ವರ್ಷದಲ್ಲಿ ಕೇವಲ 6 ತಿಂಗಳು ಮಾತ್ರ ಈ ಗುಹಾಲಯಕ್ಕೆ ಪ್ರವೇಶ ಇರುತ್ತದೆ.

ಕೆಲವು ಸಂದರ್ಭ, ಕಾರಣಗಳಿಗಾಗಿ ಈ ದೇವಾಲಯಗಳಲ್ಲಿ ಪುರುಷರಿಗೆ ಪ್ರವೇಶವಿಲ್ಲ

ಕ್ಷೇತ್ರದ ಕೆರೆಯಲ್ಲಿ ಮಿಂದು ದೇವರಲ್ಲಿ ಸಂಕಲ್ಪ ಮಾಡಿಯೇ ಗುಹೆ ಪ್ರವೇಶಿಸಬೇಕು. ಮಂದ ದೀಪದ ಬೆಳಕಿನಲ್ಲಿ ಗುಹೆಯನ್ನು ಪ್ರವೇಶಿಸುವ ಆ ಅನುಭವವೇ ರೋಮಾಂಚನ. ಮುಂದೆ ಓದಿ...

 ರೋಗರುಜಿನಗಳೆಲ್ಲಾ ಗುಣವಾಗುತ್ತದೆ

ರೋಗರುಜಿನಗಳೆಲ್ಲಾ ಗುಣವಾಗುತ್ತದೆ

ನೆಲ್ಲಿತೀರ್ಥದ ಸೋಮನಾಥೇಶ್ವರ ಗುಹಾಲಯಕ್ಕೆ ಹೋಗಬೇಕೆಂದರೆ ಸುಮಾರು 150 ಮೀಟರ್ ತೆವಳಿ, ಮಲಗಿ, ಮಂಡಿಯೂರಿ ಅತಿ ಕಿರಿದಾದ ಜಾಗದಿಂದ ತೆರಳಬೇಕು . ಇದು ಮನುಷ್ಯನ ಜನನದಿಂದ ಅಂತ್ಯದವರೆಗಿನ 18 ಅವಸ್ಥೆಗಳನ್ನು ಸೂಚಿಸುತ್ತದೆ. ತಾಯಿಯ ಹೊಟ್ಟೆಯಲ್ಲಿನ ಗರ್ಭಾವಸ್ಥೆಯ ಶಿಶುವಿನ ರೀತಿ ಕುಳಿತು ಗುಹೆಯಲ್ಲಿ ಇಳಿಯಬೇಕು.

ಕೋಲಾರದ ಬೆಗ್ಗಲಿ ಹೊಸಳ್ಳಿ ಗ್ರಾಮದ ಚೌಡೇಶ್ವರಿ ದೇವಿಯ ಮಹಿಮೆ ಬಗ್ಗೆ ನಿಮಗೆಷ್ಟು ಗೊತ್ತು

ವಸುಂಧರೆಯ ಗರ್ಭವನ್ನು ಪ್ರವೇಶಿಸಿದಂತೆ ಶಿಶುವಿನ ಜನನದ ವಿವಿಧ ಬೆಳವಣಿಗೆಯ ಹಂತದ ರೀತಿಯಲ್ಲಿ ಹೊಟ್ಟೆ ಎಳೆಯುವುದರಿಂದ ಕುಕ್ಕುರು ಗಾಲು, ಅಂಬೆಗಾಲು ಇಡುವವರೆಗೆ ನಾನಾ ರೀತಿಯ ಅವಸ್ಥೆಗಳ ಅನುಭವ ಭಕ್ತಾಧಿಗಳಿಗೆ ಇಲ್ಲಿ ಆಗುತ್ತದೆ.

ಗುಹೆಯೊಳಗೆ ಪ್ರವೇಶಿಸುತ್ತಿದ್ದಂತೆ ವಿಶಾಲವಾದ ಜಾಗ ಗೋಚರಿಸಿ, ಗುಹೆಯ ಒಂದು ಭಾಗದಲ್ಲಿ ಉದ್ಭವ ಈಶ್ವರ ಲಿಂಗದ ದರ್ಶನವಾಗುತ್ತದೆ. ಆದರೆ ಇದೆಲ್ಲಾ ಕೇವಲ ದೀಪದ ಬೆಳಕಿನಲ್ಲಿ.

ಉದ್ಭವ ಲಿಂಗದ ದರ್ಶನದೊಂದಿಗೆ ಉದ್ಭವಗಂಗೆಯಿಂದಲೇ ಭಕ್ತರು ಲಿಂಗಕ್ಕೆ ಅಭಿಷೇಕ ಮಾಡುವ ಅವಕಾಶ ಇಲ್ಲಿದೆ. ಅದಲ್ಲದೇ ಗುಹೆಯಲ್ಲಿ ಜಾಬಾಲಿ ಮಹರ್ಷಿ ತಪಸ್ಸಿಗೆ ಕುಳಿತ ಸ್ಥಳವಿದ್ದು, ಶಿವಲಿಂಗಕ್ಕೆ ಪೂಜೆಗೈದು, ತೀರ್ಥ ಸ್ನಾನ ಮಾಡಿದರೆ ರೋಗರುಜಿನಗಳೆಲ್ಲಾ ಗುಣವಾಗುತ್ತದೆ. ಇಷ್ಟಾರ್ಥಗಳು ಸಿದ್ದಿಸುತ್ತದೆ ಎನ್ನುವುದು ಈ ಕ್ಷೇತ್ರದ ಮಹಾತ್ಮೆ.

 ಸುಂದರ ಸರೋವರ ಸೃಷ್ಟಿಸಿದೆ

ಸುಂದರ ಸರೋವರ ಸೃಷ್ಟಿಸಿದೆ

ಈಗ ಇರುವ ಸೋಮನಾಥ ದೇವಾಲಯವು ಗತಕಾಲದ ಕುರುಹಾಗಿ ಉಳಿದು ನಿಂತಿದೆ. ಗರ್ಭಗುಡಿಯಲ್ಲಿರುವ ಶಿವಲಿಂಗವು ಶುದ್ಧ ಸಾಲಿಗ್ರಾಮ ಶಿಲೆಯಾಗಿದ್ದು, ಅರ್ಧ ನಾರೀಶ್ವರವಾಗಿ ಸ್ಪಟಿಕದಂತೆ ಹೊಳೆಯುತ್ತಿದೆ. ಹಿಂದೆ ಪುತ್ತಿಗೆಯ ಚೌಟರ ಆಳ್ವಿಕೆಗೆ ಒಳಪಟ್ಟ ಈ ದೇವಾಲಯವು ಗತ ಸ್ಮರಣೀಯ ಕೆಲವು ಕುರುಹುಗಳನ್ನು ಮಾತ್ರ ಒದಗಿಸುತ್ತದೆ.

ಅವುಗಳಲ್ಲಿ ಮುಖ್ಯವಾದವು ಅರಸು ಮಂಚ, ಅರಸು ಮಂಟಪ ಹಾಗೂ ಕ್ಷೇತ್ರ ಪಾಲ ಕಟ್ಟೆಯ ಎದುರು ಇರುವ ಜಿನ ವಿಗ್ರಹ. ಗುಹಾಲಯದಲ್ಲಿ ಈಶ್ವರ ಲಿಂಗ ಆಳೆತ್ತರದಲ್ಲಿದೆ. ಲಿಂಗವನ್ನು ಸುತ್ತುವರಿದು ಎರಡು ಕವಲುಗಳಾಗಿ ಧುಮುಕುವ ತೀರ್ಥಧಾರೆ ಇಲ್ಲಿ ಒಂದು ಸುಂದರ ಸರೋವರವನ್ನು ಸೃಷ್ಟಿಸಿದೆ.

ಹೊಸ ದಾಖಲೆ ಬರೆದ ತಿರುಪತಿ ತಿಮ್ಮಪ್ಪನ ದೇವಾಲಯ

 ಸಣ್ಣ ಸಣ್ಣ ಹಲವಾರು ಗುಹೆಗಳು

ಸಣ್ಣ ಸಣ್ಣ ಹಲವಾರು ಗುಹೆಗಳು

ಗುಹಾಲಯದಲ್ಲಿರುವ ಚಿಕ್ಕ ಸರೋವರದಲ್ಲಿ ಸೊಂಟಮಟ್ಟದ ನೀರು ನಿಲ್ಲುತ್ತದೆ. ಸರೋವರದ ಸುತ್ತಲೂ ಇರುವ ಬಣ್ಣ ಬಣ್ಣದ ವಿವಿಧ ಆಕಾರದ ಕಲ್ಲುಗಳ ಭಕ್ತಾದಿಗಳ ಪ್ರವಾಸಿಗರ ಕೈಯೇರಿ ಮನೆ ಸೇರುತ್ತವೆ. ಅರ್ಚಕರು ಲಿಂಗಕ್ಕೆ ಪೂಜೆ ಸಲ್ಲಿಸಿದ ಆ ನಂತರ ಭಕ್ತಾಧಿಗಳು ಸರದಿಯಂತೆ ತಂಡವಾಗಿ ತೀರ್ಥ ಅಬ್ಬಿಗೆ ತಲೆ ಕೊಡಲು ಆರಂಭಿಸುತ್ತಾರೆ ಇದು ರೂಢಿ. ತೀರ್ಥ ಸ್ನಾನದ ಅನುಭವವಂತೂ ಅವರ್ಣನೀಯ.

ಯಾವುದೇ ಭಯವಿಲ್ಲದ ಸುಸಜ್ಜಿತ , ಸಮೃದ್ಧ ಗುಹಾಲಯವಿದು. ಈ ಗುಹಾಲಯ ಪ್ರವೇಶ, ತೀರ್ಥ ಸ್ನಾನಕ್ಕೆ 500ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಆದರೆ ಈವರೆಗೆ ಯಾವುದೇ ಅವಘಡ ಸಂಭವಿಸಿದ ದಾಖಲೆಗಳಿಲ್ಲ. ಇಲ್ಲಿರುವ ಲಿಂಗ ಅತ್ಯಂತ ಸುಂದರ. ಇದು ಯಾರು ಸ್ಥಾಪಿಸಿದ್ದಲ್ಲ ಉದ್ಭವ ಲಿಂಗ ಎಂದು ಹೇಳಲಾಗಿದೆ.

ನಿಸರ್ಗ ದೇವತೆಯ ಗರ್ಭಸಂಜಾತ ಶಂಕರ ನೀತ ಎಂದು ಕರೆಯಲಾಗುತ್ತದೆ. ಗುಹೆಯ ಅರ್ಧ ಭಾಗದಲ್ಲಿ ಘಲಕ್ಕೆ ಜಾಬಾಲಿ ಮಹರ್ಷಿ ತಪಸ್ಸಿಗೆ ಕುಳಿತಿದ್ದ ಚಿಕ್ಕ ಚೊಕ್ಕ ಸ್ಥಳವಿದೆ. ಭಕ್ತಾಧಿಗಳು ಈ ಪೀಠಕ್ಕೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಗುಹೆಯ ಒಳಭಾಗದಲ್ಲಿ ಸಣ್ಣ ಸಣ್ಣ ಹಲವಾರು ಗುಹೆಗಳು ಕಾಣಿಸುತ್ತವೆ.

 ಗುಹಾಲಯಕ್ಕೂ ಕಟೀಲು ಕ್ಷೇತ್ರಕ್ಕೂ ಅನನ್ಯ ಸಂಬಂಧ

ಗುಹಾಲಯಕ್ಕೂ ಕಟೀಲು ಕ್ಷೇತ್ರಕ್ಕೂ ಅನನ್ಯ ಸಂಬಂಧ

ಕಲಿಯುಗದ ಆದಿಭಾಗದಲ್ಲಿ ಕಾಲ ಧರ್ಮಕ್ಕನುಸಾರವಾಗಿ ಅಧರ್ಮವೂ ಎಲ್ಲೆಲ್ಲೂ ತಾಂಡವವಾಡತೊಡಗಿತ್ತು. ಪರಶುರಾಮ ಕ್ಷೇತ್ರದಲ್ಲಿ ಅನೀತಿ, ಅತ್ಯಾಚಾರಗಳು ಕೊಲೆ ಸುಲಿಗೆ ಹೆಚ್ಚಾಗಿ ಜನಸಾಮಾನ್ಯರ ಬದುಕು ದುಸ್ತರವಾಗ ತೊಡಗಿತ್ತು.

ಈ ಹಿನ್ನಲೆಯಲ್ಲಿ ಲೋಕ ಕ್ಷೇಮಕ್ಕೆ ನಿರಂತರ ಶ್ರಮಿಸುತಿದ್ದ ನಾರದರ ಆಣತಿಯಂತೆ ಮಹಾವಿಷ್ಣು ಹಾಗೂ ಪರಮೇಶ್ವರ ಇಬ್ಬರು ಸಮಾಲೋಚಿಸಿ ಧರ್ಮ ಸ್ಥಾಪನೆಗೆ ನಿರ್ಧರಿಸುತ್ತಾರೆ. ಫಲ್ಗುಣಿ ನದಿಯ ಉತ್ತರಕ್ಕೆ ಹಾಗೂ ನಂದಿನಿ ನದಿಯ ಪೂರ್ವಕ್ಕೆ ಇರುವ ಪರುಶುರಾಮ ಕ್ಷೇತ್ರಕ್ಕೆ ಒಳಪಟ್ಟ ಪ್ರದೇಶದಲ್ಲಿ ಧರ್ಮವನ್ನು ಸ್ಥಾಪಿಸಿ, ಶಾಂತಿಯನ್ನು ನೆಲೆಗೊಳಿಸಲು ತನ್ನ ಕಿಂಕರ ವಾಸುಕಿಯ ನೇತೃತ್ವದಲ್ಲಿ ಪರಶಿವನ ಗಣಗಳಾದ ರಕ್ತೇಶ್ವರಿ, ಕ್ಷೇತ್ರಪಾಲ, ನಂದಿಗೋಡ, ವಾರಾಹಿ ಬರ್ಬರಕ ಪಾಶಾನಮೂರ್ತಿ ಅವರನ್ನು ಭೂಲೋಕಕ್ಕೆ ಕಳುಹಿಸುತ್ತಾರೆ.

ಆದರೆ ಕಾಲ ಕ್ರಮೇಣ ಇವರಲ್ಲಿ ಅಹಂಕಾರ ತಲೆದೂರಿ, ಈಶ್ವರಿನಿಗಿಂತಲೂ ತಾವು ಶ್ರೇಷ್ಠರು ಎಂಬ ದುರಂಹಕಾರದಿಂದ ಮರೆಯುತ್ತಾರೆ.

ಇನ್ನೊಂದೆಡೆ ಅರುಣಾಸುರನ ದೌರ್ಜನ್ಯ ಮೀತಿ ಮೀರಿದಾಗ ನಾರದರ ಆಣತಿಯಂತೆ ಕಾಶಿಯಿಂದ ಮಹರ್ಷ ಜಾಬಾಲಿ ಈ ಕ್ಷೇತ್ರಕ್ಕೆ ಬರುತ್ತಾರೆ. ಅರುಣಾಸುರನ ಸಂಹಾರ ತ್ರಿಮೂರ್ತಿಗಳಿಂದ ಸಾಧ್ಯವಾಗದಾಗ ಆದಿಶಕ್ತಿಯನ್ನು ಒಲಿಸಿಕೊಳ್ಳಲು ಈ ಪ್ರದೇಶದಲ್ಲಿರುವ ವಿಸ್ಮಯ ಗುಹೆ ಪ್ರವೇಶಿಸಿ ಕಠೋರ ತಪಸ್ಸಿಗೆ ಕುಳಿತು ಬಿಡುತ್ತಾರೆ.

ಈ ಸಂದರ್ಭದಲ್ಲಿ ಅಂಹಕಾರದಿಂದ ಮೈಮರೆತಿದ್ದ ಗಣಾಧಿಗಳ ಮನಪರಿವರ್ತನೆಗೊಂಡು ಜಾಬಾಲಿಯ ತಪಸ್ಸಿಗೆ ಭಂಗ ಬರದಂತೆ ಗುಹೆಯ ಸುತ್ತಲೂ ಕಾಯುತ್ತಾರೆ.

ಜಾಬಾಲಿ ಮಹರ್ಷಿಯ ತಪಸ್ಸಿಗೆ ಒಲಿದ ಆದಿಶಕ್ತಿಯು ನಂದಿನಿಯ ಕಟಿ ಪ್ರದೇಶದಲ್ಲಿ ಬೃಹತ್ ಬಂಡೆಯೊಳಗಿನಿಂದ ಭ್ರಮರೀ ರೂಪದಲ್ಲಿ ಆವತರಿಸಿ ಅರುಣಾಸುರ ಹಾಗೂ ಸಮಸ್ತ ರಾಕ್ಷಸ ಸಮೂಹವನ್ನು ನಾಶಮಾಡಿ ದುರ್ಗಾಪರಮೇಶ್ವರಿಯಾಗಿ ರಾರಾಜಿಸುತ್ತಾಳೆ. ಈ ಹಿನ್ನಲೆಯಲ್ಲಿ ನೆಲ್ಲಿ ತೀರ್ಥ ಗುಹಾಲಯಕ್ಕೂ ಹಾಗೂ ಕಟೀಲು ಶ್ರೀದುರ್ಗಾಪರಮೇಶ್ವರಿ ಕ್ಷೇತ್ರಕ್ಕೂ ಅನನ್ಯ ಸಂಬಂಧ.

 ನೆಲ್ಲಿತೀರ್ಥದ ವೈಶಿಷ್ಟ್ಯ

ನೆಲ್ಲಿತೀರ್ಥದ ವೈಶಿಷ್ಟ್ಯ

ಗುಹೆಯೊಳಗೆ ತೇಗ ಗಂಧದ ಉಂಡೆಯಂತಹ ಕೆಂಪಗಿನ ಮಣ್ಣಿನ ರಾಶಿ. ಇಲ್ಲಿ ಬರುವವರೆಲ್ಲರಿಗೂ ಇದುವೇ ಗಂಧ ಪ್ರಸಾದ. ತೀರ್ಥ ಸ್ನಾನದ ಬಳಿಕ ಹಣೆಗೆ ಹಚ್ಚಿಕೊಳ್ಳುವುದಲ್ಲದೆ ಮನೆಗೂ ಕೊಂಡೊಯ್ಯುತ್ತಾರೆ ಭಕ್ತರು. ಗುಹಾಲಯದ ಒಳ ಮೆಲ್ಬಾಗವನ್ನು ಕಂಡರೆ ವೈವಿದ್ಯಮಯ ಚಿತ್ತಾರಗಳು, ಚಿತ್ತಾಕರ್ಷಕವಾಗಿ ಮೂಕವಿಸ್ಮಿತರನ್ನಾಗಿಸುತ್ತದೆ.

ಗುಹಾಲಯದಲ್ಲಿ ಒಮ್ಮೆಯೇ ನೂರಾರು ಜನ ನಿಂತು ಕೊಳ್ಳುವ ಅವಕಾಶವಿದೆ. ಪ್ರಕೃತಿಯ ಆರಾಧಕರು ಪ್ರಕೃತಿಯ ವಿಸ್ಮಯದಲ್ಲಿಯೇ ಆತ್ಮಲಿಂಗದ ದರ್ಶನ ಈ ನೆಲ್ಲಿತೀರ್ಥದ ವೈಶಿಷ್ಟ್ಯ

English summary
Nellithirtha Somanatheshwara cave temple is one of the holiest temple in Dakshina Kannada. The main attraction of the temple is the cave. The huge cave one of nature's wonders. Here is the details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X