ಶಬರಿಮಲೆ ತಲುಪಿದ ನಳಿನ್ ಕುಮಾರ್ ಕಟೀಲ್, ಬಂಧನ ಸಾಧ್ಯತೆ
ಮಂಗಳೂರು, ನವೆಂಬರ್.20: ಶಬರಿಮಲೆಯಲ್ಲಿ ಎದುರಾಗಿರುವ ಪ್ರಸ್ತುತ ಸ್ಥಿತಿಗತಿಗಳ ಕುರಿತು ಕೇಂದ್ರಕ್ಕೆ ವರದಿ ನೀಡುವ ಸಲುವಾಗಿ ಅಧ್ಯಯನ ವರದಿ ತಯಾರಿಸಲು ದಕ್ಷಿಣಕನ್ನಡ ಲೋಕಸಭಾ ಸದಸ್ಯ ಹಾಗೂ ಕೇರಳ ಸಹ ಪ್ರಭಾರಿ ನಳಿನ್ ಕುಮಾರ್ ಕಟೀಲ್ ಶಬರಿಮಲೆ ತಲುಪಿದ್ದಾರೆ.
ಮಂಗಳವಾರ ಮುಂಜಾನೆ ಕೇರಳದ ಚೆಂಗನ್ನೂರು ತಲುಪಿದ ನಳಿನ್ ಕುಮಾರ್ ಕಟೀಲ್ ಅವರೊಂದಿಗೆ ಸಂಸದ ವಿ.ಮುರಳೀಧರನ್, ರಾಜ್ಯ ಕಾರ್ಯದರ್ಶಿ ಜೆ.ಆರ್.ಪದ್ಮಕುಮಾರ್ ಮತ್ತು ಪಥನಂತಿಟ್ಟ ಜಿಲ್ಲೆಯ ಅಧ್ಯಕ್ಷ ಅಶೋಕನ್, ಮಂಗಳೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ್ ಕುಮಾರ್ ಬೋಳ್ಯಾರು, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಗದೀಶ್ ಜೊತೆಗಿದ್ದಾರೆ.
ನಳಿನ್ ಕುಮಾರ್ ಕಟೀಲ್ ಅವರು ನಿಲಕ್ಕಲ್, ಪಂಪಾ ಹಾಗೂ ಸನ್ನಿದಾನ ಪ್ರದೇಶಗಳಿಗೆ ಭೇಟಿ ನೀಡಿ, ಅಯ್ಯಪ್ಪ ಭಕ್ತರ ಸಮಸ್ಯೆಗಳು ಹಾಗೂ ಅಲ್ಲಿನ ಪರಿಸ್ಥಿತಿ ಬಗ್ಗೆ ಅಧ್ಯಯನ ವರದಿ ತಯಾರಿಸಲಿದ್ದಾರೆ. ಅಲ್ಲದೆ ಶಬರಿಮಲೆ ಅಯ್ಯಪ್ಪ ದೇವರ ದರ್ಶನವನ್ನು ಪಡೆಯಲಿದ್ದಾರೆ .
ಈ ನಡುವೆ ಕೇರಳದ ಬಿಜೆಪಿ ನಾಯಕ ಸುರೇಂದ್ರನ್ ಶಬರಿಮಲೆ ತೆರಳುವ ಸಂದರ್ಭದಲ್ಲಿ ಪೊಲೀಸರು ಬಂಧಿಸಿ ಶಬರಿಮಲೆಗೆ ತೆರಳದಂತೆ ತಡೆಯೊಡ್ಡಿದ್ದರು. ಈ ಹಿನ್ನೆಲೆಯಲ್ಲಿ ಕೇರಳದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಯಾವ ಕ್ರಮ ಕೈಗೊಳ್ಳಲಿದೆ?
ಈಗ ಮತ್ತೆ ನಳಿನ್ ಕುಮಾರ್ ಕಟೀಲ್ ಪ್ರಸ್ತುತ ಪರಿಸ್ಥಿತಿ ಕುರಿತು ವರದಿ ತಯಾರಿಸಲು ಶಬರಿಮಲೆಗೆ ತೆರಳಿದ್ದಾರೆ. ಈ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎನ್ನುವುದು ಕಾದು ನೋಡಬೇಕಿದೆ.

ಬಂಧಿಸುವ ಸಾಧ್ಯತೆ
ಒಂದು ಮಾಹಿತಿ ಪ್ರಕಾರ ಶಬರಿಮಲೆಗೆ ಭೇಟಿ ನೀಡಿರುವ ನಳಿನ್ ಕುಮಾರ್ ಕಟೀಲ್ ಸೇರಿದಂತೆ ತಂಡದಲ್ಲಿರುವ ಎಲ್ಲಾ ಬಿಜೆಪಿ ಮುಖಂಡರನ್ನು ಕೇರಳ ಪೊಲೀಸರು ಬಂಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಅಯ್ಯಪ್ಪ ದರ್ಶನ ಆರಂಭ
ವಾರ್ಷಿಕ ಮಕರವಿಳಕ್ಕು ಹಾಗೂ ಮಂಡಲ ಪೂಜೆ ನಿಮಿತ್ತ ಎರಡು ತಿಂಗಳ ದರ್ಶನಕ್ಕಾಗಿ ನವೆಂಬರ್ 16 ರಿಂದ ದೇವಸ್ಥಾನದ ಬಾಗಿಲು ತೆರೆದಿದ್ದು, 17 ರಿಂದ ಅಯ್ಯಪ್ಪನ ದರ್ಶನ ಆರಂಭವಾಗಿದೆ.

ಬಿಗಿ ಬಂದೋಬಸ್ತ್
ಪೊಲೀಸ್ ಬಿಗಿ ಬಂದೋಬಸ್ತ್ ನಲ್ಲಿ ನೂರಾರು ಭಕ್ತರು ದರ್ಶನ ಅಯ್ಯಪ್ಪನ ದರ್ಶನ ಪಡೆಯುತ್ತಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಶಬರಿಮಲೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಸಾವಿರಾರು ಪೊಲೀಸರು ಬಿಗಿ ಬಂದೋಬಸ್ತ್ ನಡೆಸಿದ್ದಾರೆ.











Click it and Unblock the Notifications