'ಸತ್ಯಕ್ಕೆ ಸಾವಿಲ್ಲ': ಎಚ್ಡಿಕೆಗೆ ಧನ್ಯವಾದ ಸಲ್ಲಿಸಿದ ಯು.ಟಿ.ಖಾದರ್
ಮಂಗಳೂರು, ಜ 10: "ಸತ್ಯಕ್ಕೆ ಸಾವಿಲ್ಲ. ಸುಳ್ಳು ಇಂದಲ್ಲಾ, ನಾಳೆ ಹೊರಗೆ ಬಂದೇ ಬರುತ್ತದೆ" ಇದು ಶಾಸಕ ಯು.ಟಿ.ಖಾದರ್, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಸಿಡಿ ಬಗ್ಗೆ ನುಡಿದ ಮಾತು.
ನಗರದಲ್ಲಿ ಮಾತನಾಡುತ್ತಿದ್ದ ಖಾದರ್, "ಮಂಗಳೂರು ಗಲಭೆಗೆ ನಾನೇ ಕಾರಣವೆಂದು ಬಿಜೆಪಿಯವರು ನನ್ನ ದೂರುತ್ತಿದ್ದರು. ಈಗ ಕುಮಾರಸ್ವಾಮಿಯವರು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಿಡಿ ಬಿಡುಗಡೆ ಮಾಡಿದ್ದಾರೆ. ಅವರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ" ಎಂದು ಹೇಳಿದರು.
"ಬಿಜೆಪಿಯವರು ತಮ್ಮ ಆಡಳಿತ ವೈಫಲ್ಯವನ್ನು ಮುಚ್ಚಿಹಾಕಲು ಪ್ರಯತ್ನ ಪಟ್ಟರು. ಅದು ಸಾಧ್ಯವಾಗಲಿಲ್ಲ. ಕುಮಾರಸ್ವಾಮಿಯವರು ಬಿಡುಗಡೆ ಮಾಡಿದ ಸಿಡಿ ಎಲ್ಲವನ್ನೂ ಹೇಳುತ್ತದೆ" ಎಂದು ಖಾದರ್ ಹೇಳಿದರು.

"ತಪ್ಪಿತಸ್ಥರು ಯಾರೇ ಆಗಿರಲಿ, ಅವರಿಗೆ ಶಿಕ್ಷೆಯಾಗಲಿ. ಅವರನ್ನು ಬಿಡುಗಡೆ ಮಾಡಿ ಎಂದು ಎಲ್ಲೂ ನಾವು ಹೇಳುತ್ತಿಲ್ಲ. ಅಮಾಯಕರಿಗೆ ತೊಂದರೆ ಕೊಡಬಾರದು ಎನ್ನುವುದು ನಮ್ಮ ನಿಲುವು" ಎಂದು ಖಾದರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಕುಮಾರಸ್ವಾಮಿ ಅವರದ್ದೇ ಜನವನ್ನು ಕಳುಹಿಸಿ, ಸಿಡಿ ತಯಾರಿಸಿರಬಹುದು. ಪೊಲೀಸ್ ವೇಷವನ್ನು ಅವರೇ ಹಾಕಿ ಕಳುಹಿಸಿದ್ದಾರೋ ಏನೋ, ಗೊತ್ತಿಲ್ಲ" ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಎಚ್ಡಿಕೆ ಬಿಡುಗಡೆ ಮಾಡಿದ ಸಿಡಿ ಬಗ್ಗೆ ಲೇವಡಿ ಮಾಡಿದ್ದರು.
ಕೆಲವು ದಿನಗಳ ಹಿಂದೆ ಮಂಗಳೂರು ಪೊಲೀಸರು ವಿಡಿಯೋ ಬಿಡುಗಡೆ ಮಾಡಿ, ಪ್ರತಿಭಟನಾಕಾರರು ಹಿಂಸಾಚಾರಕ್ಕೆ ಇಳಿದಿದ್ದರು ಎಂದು ಆರೋಪಿಸಿದ್ದರು, ಅಲ್ಲದೆ ಗೋಲಿಬಾರ್‌ಗೆ ಆ ವಿಡಿಯೋಗಳನ್ನು ಸಮರ್ಥನೆಯಾಗಿ ನೀಡಿದ್ದರು. ಆದರೆ ಇಂದು ಕುಮಾರಸ್ವಾಮಿ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಪೊಲೀಸರೇ ಹಿಂಸಾಚಾರ ನಡೆಸುತ್ತಿರುವುದು ದಾಖಲಾಗಿದೆ.












Click it and Unblock the Notifications