ಕುಚ್ಚಿಗುಡ್ಡೆಯಲ್ಲಿ ಹಿಂದೂ ಮಹಿಳೆಯ ಅಂತಿಮ ವಿಧಿ ಪೂರೈಸಿದ ಮುಸ್ಲಿಂ ಯುವಕರು
ಮಂಗಳೂರು, ಸೆಪ್ಟೆಂಬರ್.05: ಪುತ್ರಿಯನ್ನು ಅಂತರ್ಜಾತಿ ಯುವಕನಿಗೆ ವಿವಾಹ ಮಾಡಿಕೊಟ್ಟರೆಂಬ ಕಾರಣಕ್ಕೆ ಮೃತಪಟ್ಟ ಮಹಿಳೆಯ ಅಂತ್ಯಸಂಸ್ಕಾರಕ್ಕೆ ಗ್ರಾಮಸ್ಥರು ಹಿಂದೇಟು ಹಾಕಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಆದರೆ ಆ ಮಹಿಳೆಯ ಶವ ಸಂಸ್ಕಾರವನ್ನು ಹಿಂದೂ ರೀತಿ ರಿವಾಜುಗಳಂತೆ ಮುಸ್ಲಿಂ ಯುವಕರೇ ಪೂರೈಸಿರುವುದು ಗಮನ ಸೆಳೆದಿದೆ.
ಮಹಿಳೆಯ ಅಂತ್ಯಸಂಸ್ಕಾರಕ್ಕೆ ಹಿಂದೇಟು ಹಾಕಿದ ಗ್ರಾಮಸ್ಥರ ಈ ನಡುವಳಿಕೆಗೆ ಒಂದೆಡೆ ಆಕ್ರೋಶ ವ್ಯಕ್ತವಾದರೆ, ಇನ್ನೊಂದೆಡೆ ಮುಸ್ಲಿಂ ಯುವಕರ ಮಾನವೀಯ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ಜಾತಿ ಸಮಾನತೆ, ವರ್ಗಭೇದ ನಿವಾರಣೆ, ಸಹಬಾಳ್ವೆ, ಮಾನವೀಯತೆಯ ಮೌಲ್ಯಗಳ ಬಗ್ಗೆ ಮಾತುಗಳು ದಿನನಿತ್ಯ ಕೇಳಿ ಬರುತ್ತಲೇ ಇರುತ್ತವೆ. ಆದರೆ ಸುಶಿಕ್ಷಿತರ ಜಿಲ್ಲೆ ಎಂದೇ ಗುರುತಿಸಿ ಕೊಳ್ಳುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ.

ಜಾತಿ ನೆಪದಲ್ಲಿ ಮಹಿಳೆಯೊಬ್ಬರ ಶವ ಸಂಸ್ಕಾರಕ್ಕೆ ಸ್ಥಳೀಯರು ಹಿಂದೇಟು ಹಾಕಿದ ಘಟನೆ ಅಡ್ಡೂರು ಗ್ರಾಮದ ಕುಚ್ಚಿ ಗುಡ್ಡೆ ಎಂಬಲ್ಲಿ ನಡೆದಿದೆ. ಮೂಲತಃ ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆಯ ನಿವಾಸಿಯಾಗಿರುವ ಸುಶೀಲಮ್ಮ(67) ಇತ್ತೀಚೆಗೆ ನಿಧನರಾದರು.
ಕಡು ಬಡತನದ ಜೀವನ ಸಾಗಿಸಿದ್ದ ಸುಶಿಲಮ್ಮ ಅವರಿಗೆ ಇಬ್ಬರು ಪುತ್ರಿಯರು ಹಾಗೂ ಇಬ್ಬರು ಪುತ್ರರಿದ್ದಾರೆ. ಹಲವಾರು ವರ್ಷಗಳಿಂದ ಅಡ್ಡೂರಿ ನಲ್ಲಿ ವಾಸಿಸುತ್ತಿದ್ದ ಸುಶೀಲಮ್ಮ ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಹಿನ್ನಲೆಯಲ್ಲಿ ಅವರನ್ನು ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆಗೆ ಸ್ಪಂದಿಸಿದ ಅವರ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಶನಿವಾರ ಅವರು ತಮ್ಮ ಮನೆಗೆ ಮರಳಿದ್ದರು. ಆದರೆ ಸಂಜೆ ವೇಳೆ ಸುಶಿಲಮ್ಮ ಅವರ ಆರೋಗ್ಯದಲ್ಲಿ ಪುನಃ ಏರುಪೇರಾಗಿ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಮನೆಯವರು ಸ್ಥಳೀಯರಿಗೆ ಮಾಹಿತಿ ನೀಡಿದರೂ ಯಾರೂ ಅಂತ್ಯ ಸಂಸ್ಕಾರಕ್ಕೆ ಸಹಾಯ ಮಾಡಲು ಮುಂದಾಗಲಿಲ್ಲ.
ಇದಕ್ಕೆ ಕಾರಣ ಸುಶೀಲಮ್ಮ ಅವರು ತಮ್ಮ ಪುತ್ರಿಯೊಬ್ಬಳನ್ನು ಅಂತರ್ಜಾತಿಯ ಯುವಕನಿಗೆ ವಿವಾಹ ಮಾಡಿ ಕೊಟ್ಟಿದ್ದು ಎಂದು ಹೇಳಲಾಗಿದೆ. ಮಗಳನ್ನು ಅಂತರ್ಜಾತಿಯ ಯುವಕನಿಗೆ ಮದುವೆ ಮಾಡಿಸಿಕೊಟ್ಟಿದ್ದಕ್ಕೆ ಆ ಸಂದರ್ಭದಲ್ಲಿ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದರು.
ಸುಶೀಲಮ್ಮ ಅವರು ಮೃತಪಟ್ಟ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಮುಸ್ಲಿಂ ಯುವಕರ ತಂಡ ಗ್ರಾಮದ ಕೆಲ ಮುಖಂಡರನ್ನು ಕರೆದು ಶವ ಸಂಸ್ಕಾರಕ್ಕೆ ಸಹಕರಿಸುವಂತೆ ಮನವಿ ಮಾಡಿದ್ದಾರೆ. ಆದರೆ ಜಾತಿ ನೆಪವೊಡ್ಡಿ ಅವರು ಬರಲು ನಿರಾಕರಿಸಿದ ಹಿನ್ನೆಲೆಯಲ್ಲಿ ಮುಸ್ಲಿಂ ಯುವಕರೇ ಸುಶೀಲಮ್ಮ ಆವರ ಅಂತ್ಯ ಸಂಸ್ಕಾರಕ್ಕೆ ಮುಂದಾಗಿದ್ದಾರೆ.
ಸುಶೀಲಮ್ಮ ಮೃತದೇಹವನ್ನು ಆಂಬುಲೆನ್ಸ್ ಮೂಲಕ ಬಡಗಬೆಟ್ಟು ರುದ್ರಭೂಮಿಗೆ ಕೊಂಡೊಯ್ದು ಹಿಂದೂ ವಿಧಿ ವಿಧಾನಗಳ ಪ್ರಕಾರ ಶವ ಸಂಸ್ಕಾರ ಮಾಡಿದ್ದಾರೆ.
ಮಂಗಳೂರು, ದಕ್ಷಿಣ ಕನ್ನಡ ಎಂದೊಡನೆ ಹೆಚ್ಚಿನ ಜನರಿಗೆ ಕಣ್ಣ ಮುಂದೆ ಬರುವುದು ಕೋಮುಧ್ವೇಷ, ಕೋಮುಗಲಭೆ, ಘರ್ಷಣೆ . ಆದರೆ ಇಲ್ಲಿ ಕೋಮು ಸಾಮರಸ್ಯ, ಸಹಬಾಳ್ವೆ, ಪ್ರೀತಿ , ಸಹೋದರತೆ ಇಂದಿಗೂ ಇಲ್ಲಿಯ ಜನರಲ್ಲಿ ಜಾಗೃತವಾಗಿದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದೆ.












Click it and Unblock the Notifications