ಬಸ್‌ನಲ್ಲಿ ಯುವತಿ ಜೊತೆ ಮಾತನಾಡಿದ್ದಕ್ಕೆ ಅನ್ಯಕೋಮಿನ ಯುವಕನ ಮೇಲೆ ಹಲ್ಲೆ
ಮಂಗಳೂರು, ಏಪ್ರಿಲ್ 6: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ ಪ್ರಕರಣ ಮುನ್ನಲೆಗೆ ಬಂದಿದೆ. ಬಸ್‌ನಲ್ಲಿ ಯುವತಿಯ ಜೊತೆ ಮಾತನಾಡಿದಕ್ಕೆ ಅನ್ಯಕೋಮಿನ ಯುವಕನ ಮೇಲೆ ಯುವಕರ ತಂಡವೊಂದು ಹಲ್ಲೆ ನಡೆಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ನಡೆದಿದೆ.
ಉಜಿರೆಯ ಕಕ್ಕಿಂಜೆ ನಿವಾಸಿ ಝಾಹಿರ್ (22) ಹಲ್ಲೆಗೊಳಗಾದ ಯುವಕ ಎಂದು ಗುರುತಿಸಲಾಗಿದೆ. ಝಾಹಿರ್ ಮಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದು, ಮಂಗಳೂರಿನಿಂದ ಉಜಿರೆಗೆ ಬಸ್‌ನಲ್ಲಿ ತೆರಳುವಾಗ, ಪರಿಚಯದ ಯುವತಿಯೊಂದಿಗೆ ಮಾತನಾಡಿದ್ದ ಎನ್ನಲಾಗಿದೆ. ಬಳಿಕ ಝಾಹಿರ್ ಬಸ್‌ನಲ್ಲಿ ಯುವತಿಯ ಪಕ್ಕದಲ್ಲೇ ಕುಳಿತುಕೊಂಡಿದ್ದಾನೆ ಎನ್ನಲಾಗಿದೆ.

ಈ ದೃಶ್ಯವನ್ನು ಕಂಡ ಬಸ್‌ಬಲ್ಲಿದ್ದ ಹಿಂದೂ ಸಂಘಟನೆಯ ಯುವಕರು ಉಜಿರೆಯಲ್ಲಿದ್ದ ಇತರ ಕಾರ್ಯಕರ್ತರಿಗೆ ಮಾಹಿತಿ ರವಾನಿಸಿದ್ದರು. ಯುವತಿ ಬೆಳ್ತಂಗಡಿಯಲ್ಲಿ ಬಸ್‌ನಿಂದ ಇಳಿದು ಹೋಗಿದ್ದಾಳೆ. ಬಳಿಕ ಝಾಹಿರ್ ಉಜಿರೆಯಲ್ಲಿ ತೆರಳಿದ್ದು, ಉಜಿರೆಯಲ್ಲಿ ಕಾದು ಕುಳಿತಿದ್ದ ಯುವಕರ ತಂಡ ಝಾಹಿರ್‌ನನ್ನು ಬಸ್‌ನಿಂದ ಕೆಳಗಿಳಿಸಿ ಹಲ್ಲೆ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಝಾಹಿರ್ ಮೇಲೆ ಹಲ್ಲೆ ನಡೆಸುತ್ತಿದ್ದಂತೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಈ ವೇಳೆ ಮಧ್ಯೆ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಪ್ರಕರಣ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಲ್ಲೆಗೊಳಗಾದ ಯುವಕನಿಂದ ದೂರು ದಾಖಲಿಸಿ ಪೊಲೀಸರು ತನಿಖೆ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.
ಹಾಡಹಗಲೇ ರಸ್ತೆಯಲ್ಲಿ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಹಲ್ಲೆಗೊಳಗಾದ ಯುವಕ ಝಾಹಿರ್ ಪರಿಚಯಸ್ಥರೇ ಆಗಿರುವ ತೋಟತ್ತಾಡಿ ಗ್ರಾಮದ ನಿವಾಸಿ ದಿನೇಶ್, ಮುಂಡಾಜೆ ನಿವಾಸಿ ಗ್ರಾಮದ ಸಚಿನ್, ತೋಟತ್ತಾಡಿ ಗ್ರಾಮದ ನಿವಾಸಿ ನಿತೇಶ್ ಹಾಗೂ ಸೋಮಂತಡ್ಕ ಗ್ರಾಮದ ನಿವಾಸಿ ಅವಿನಾಶ್ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

ಬಂಧಿತ ನಾಲ್ವರು ಆರೋಪಿಗಳ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 34, ಕ್ರೈ ನಂಬರ್ 27/2023 ಕಲಂ 323, 341 ಹಾಗೂ 506 ಸೆಕ್ಷನ್ ಅಡಿ ಪ್ರಕರಣ ದಾಖಲಾಗಿದೆ.
ಚಿಕನ್ ಸಾರು ಖಾಲಿಯಾಗಿದ್ದಕ್ಕೆ ಅಪ್ಪ-ಮಗನ ಜಗಳ: ಕೊಲೆಯಲ್ಲಿ ದುರಂತ ಅಂತ್ಯ
ಚಿಕನ್ ಸಾರು ಖಾಲಿಯಾಗಿದ ವಿಚಾರವಾಗಿ ತಂದೆ ಮಗನ ನಡುವೆ ಆರಂಭವಾದ ಗಲಾಟೆ ಕೊನೆಯಲ್ಲಿ ಮಗನ ದುರಂತ ಸಾವಿನಲ್ಲಿ ಅಂತ್ಯವಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಗುತ್ತಿಗಾರು ಗ್ರಾಮದಲ್ಲಿ ನಡೆದಿದೆ. ಮೊಗ್ರ ಏರಣಗುಡ್ಡೆಯ ಮಾತೃ ಮಜಲು ನಿವಾಸಿ ಶೀನ ಹಾಗೂ ಮಗ ಶಿವರಾಮ ನಡುವೆ ಕಲಹವಾಗಿ ಕಲಹ ಕೊಲೆಯಲ್ಲಿ ಅಂತ್ಯವಾಗಿದೆ.

ಮಗ ಶಿವರಾಮ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಮಾತೃ ಮಜಲು ನಿವಾಸಿ ಶೀನ ಕೊಲೆಯ ಆರೋಪಿ ಎಂದು ಗುರುತಿಸಲಾಗಿದೆ. ಮಗ ಶಿವರಾಮ ಮನೆಗೆ ಬರುವಾಗ ಮನೆಯಲ್ಲಿ ಚಿಕನ್ ಸಾರು ಖಾಲಿಯಾಗಿದೆ. ಇದೇ ವಿಚಾರಕ್ಕೆ ಕೋಪಗೊಂಡ ಶಿವರಾಮ ಮನೆಯಲ್ಲಿ ಜಗಳ ಪ್ರಾರಂಭಿಸಿದ್ದಾನೆ.
ಮಗನ ಮಾತುಗಳಿಗೆ ತಂದೆ ಶೀನ ಎದುರಾಡಿದ್ದು,ತಂದೆ ಹಾಗೂ ಮಗನ ನಡುವಿನ ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ಆರೋಪಿ ಶೀನ ಕೋಪಗೊಂಡು ಮಗನ ತಲೆಗೆ ತಂದೆ ಬಡಿಗೆಯಿಂದ ಹೊಡೆದಿದ್ದಾರೆ. ಬಲವಾದ ಏಟಿನಿಂದ ತಲೆ ಒಡೆದು ಪುತ್ರ ಶಿವರಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಘಟನೆ ಸಂಬಂಧ ,ಶಿವರಾಮ ಅವರ ಪತ್ನಿ ಕವಿತಾ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಕೊಲೆ ಆರೋಪಿ ಶೀನನನ್ನ ವಶಕ್ಕೆ ಪಡೆದು ಸುಬ್ರಹ್ಮಣ್ಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೃತ ಶಿವರಾಮ ಪತ್ನಿ ಹಾಗೂ ಇಬ್ಬರು ಪುಟ್ಟ ಮಕ್ಕಳನ್ನು ಅಗಲಿದ್ದಾರೆ.












Click it and Unblock the Notifications