ಲಾಠಿ ಪ್ರಹಾರ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ - ಮಂಗಳೂರು ಚಲೋ
ಪೊಲೀಸರು ಅಹ್ಮದ್ ಖುರೇಷಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.ಜತೆಗೆ ಅಮಾಯಕ ಮುಸ್ಲಿಂ ಯುವಕರನ್ನು ಬಂಧಿಸಿ ಸುಳ್ಳು ಕೇಸು ದಾಖಲಿಸಲಾಗುತ್ತಿದೆ ಎಂದು ಆರೋಪಿಸಿ ದ.ಕ.ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟ 'ಮಂಗಳೂರು ಚಲೋ' ಹಮ್ಮಿಕೊಂಡಿತ್ತು.
ಮಂಗಳೂರು, ಮೇ 2: ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಲು ಬಂದವರ ಮೇಲೆ ಲಾಠಿ ಪ್ರಹಾರ ನಡೆಸಿದ ಪ್ರಕರಣವನ್ನು ಸಿಐಡಿ ಬದಲು ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು 'ಮಂಗಳೂರು ಮುಸ್ಲಿಂ ಸೆಂಟ್ರಲ್ ಕಮಿಟಿ' ಅಧ್ಯಕ್ಷ ಕೆ.ಎಸ್.ಮೊಹಮ್ಮದ್ ಮಸೂದ್ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
ಪೊಲೀಸರು ಅಹ್ಮದ್ ಖುರೇಷಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಹಾಗೂ ಇತರೆ ಅಮಾಯಕ ಮುಸ್ಲಿಂ ಯುವಕರನ್ನು ಬಂಧಿಸಿ ಸುಳ್ಳು ಕೇಸು ದಾಖಲಿಸಲಾಗುತ್ತಿದೆ ಎಂದು ಆರೋಪಿಸಿ ದ.ಕ.ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟ ಮಂಗಳವಾರ ನಗರದ ನೆಹರೂ ಮೈದಾನದಲ್ಲಿ ಹಮ್ಮಿಕೊಂಡ ಮಂಗಳೂರು ಚಲೋ'ಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

"ಅಹ್ಮದ್ ಖುರೇಷಿಗೆ ಅನ್ಯಾಯವಾದ ವಿಚಾರ ಹೇಳಲು ಬಯಸುತ್ತಿಲ್ಲ. ಅದರ ನ್ಯಾಯ ಅನ್ಯಾಯವನ್ನು ದೇವರು ನೋಡುತ್ತಾನೆ. ಆದರೆ ಕಮಿಷನರ್ ಕಚೇರಿಗೆ ನ್ಯಾಯ ಕೇಳಲು ಬಂದವರ ಮೇಲೆ ಆರೋಪ ಹೊರಿಸಿ ಲಾಠಿ ಚಾರ್ಜ್ ನಡೆಸಿರುವ ಕೃತ್ಯ ಸರಿಯಲ್ಲ. ಈ ಬಗ್ಗೆ ಸಿಸಿ ಕ್ಯಾಮರಾ ದಾಖಲೆಗಳನ್ನು ಪೊಲೀಸರು ಬಹಿರಂಗಪಡಿಸಬೇಕು," ಎಂದು ಅವರು ಒತ್ತಾಯಿಸಿದರು.
ಖುರೇಷಿ ಪರ ವಕೀಲ ದಿನೇಶ್ ಹೆಗ್ಡೆ ಉಳಿಪಾಡಿ ಮಾತನಾಡಿ, ಮಾನವ ಹಕ್ಕು ಉಲ್ಲಂಘಿಸುವ ಪೊಲೀಸರನ್ನು ಅಮಾನತುಗೊಳಿಸುವ ಬಗ್ಗೆ ಪೊಲೀಸ್ ಇಲಾಖೆ ಕಾನೂನಿಗೆ ತಿದ್ದುಪಡಿ ತರಬೇಕು. ಪೊಲೀಸ್ ದೌರ್ಜನ್ಯ ನಡೆದಾಗ ಎಲ್ಲ ಸಮುದಾಯದವರು ಒಗ್ಗೂಡಿ ಹೋರಾಟ ನಡೆಸಬೇಕು. ಖುರೇಷಿ ಪ್ರಕರಣದಲ್ಲಿ ಪೊಲೀಸ್ ಕಮಿಷನರ್ ಹಾದಿ ತಪ್ಪಿದ್ದಾರೆ. ಈ ಬಗ್ಗೆ ಕಮಿಷನರ್ ಸಾರ್ವಜನಿಕವಾಗಿ ಉತ್ತರಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಮುಸ್ಲಿಂ ಸಂಘಟನೆಗಳ ಒಕ್ಕೂಟ ಅಧ್ಯಕ್ಷ, ಮಾಜಿ ಮೇಯರ್ ಅಶ್ರಫ್, "ನನಗೆ ಸಮುದಾಯ ಮೊದಲು, ರಾಜಕೀಯ ನಂತರ. ಅಹ್ಮದ್ ಖುರೇಷಿಗೆ ಪೊಲೀಸ್ ದೌರ್ಜನ್ಯ ನಡೆಸಿದ ವಿಚಾರದಲ್ಲಿ ರಾಜಕಾರಣಿಗಳು ನಮ್ಮನ್ನು ಕರೆದು ಮಾತನಾಡಿಸಿಲ್ಲ. ಈ ಪ್ರಕರಣದಲ್ಲಿಮುಸ್ಲಿಮರ ಮಾತನ್ನು ಪೊಲೀಸರು ನಂಬುತ್ತಿಲ್ಲ. ರಾಜಕಾರಣಿಗಳು ಪೊಲೀಸರು ಹೇಳಿದ್ದನ್ನು ನಂಬುತ್ತಾರೆ,"ಎಂದು ಆರೋಪಿಸಿದರು.
"ಮುಸ್ಲಿಮರಿಗೆ ಬಿಜೆಪಿಗಿಂತ ಕಾಂಗ್ರೆಸ್ ಆಡಳಿತದಲ್ಲೂ ರಕ್ಷಣೆ ಇಲ್ಲ ಎಂಬಂತಾಗಿದೆ. ಖುರೇಷಿಗೆ ದೌರ್ಜನ್ಯ ನಡೆಸಿದ ಪೊಲೀಸರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿದರೂ ನಮ್ಮ ಮಾತನ್ನು ಯಾರೂ ಕೇಳುತ್ತಿಲ್ಲ. ಇನ್ನು ಮುಂದೆ ಯಾರೇ ಅಮಾಯಕರ ಮೇಲೆ ಪೊಲೀಸ್ ದೌರ್ಜನ್ಯ ನಡೆದರೂ ಹೋರಾಟ ನಡೆಸಿಯೇ ಸಿದ್ಧ," ಎಂದು ಎಚ್ಚರಿಸಿದರು
ಹಕ್ಕೊತ್ತಾಯ
ದೌರ್ಜನ್ಯ ನಡೆಸಿದ ಪೊಲೀಸ್ ಅಧಿಕಾರಿಗಳನ್ನು ಇಲಾಖಾ ಸೇವೆಯಿಂದ ಅಮಾನತುಗೊಳಿಸುವ ಅಧಿಕಾರವನ್ನು ಪೊಲೀಸ್ ದೂರು ಪ್ರಾಧಿಕಾರಕ್ಕೆ ನೀಡುವ ಕಾನೂನು ಜಾರಿಗೊಳಿಸಬೇಕು. ಇನ್ನು ಮುಂದೆ ಯಾವುದೇ ಸಮುದಾಯದ ಅಮಾಯಕರ ಮೇಲೆ ಪೊಲೀಸ್ ದೌರ್ಜನ್ಯ ನಡೆದರೆ ಸಹಿಸುವುದಿಲ್ಲ. ಕೊಲೆ ಯತ್ನ ಆರೋಪದಲ್ಲಿ ಅಹ್ಮದ್ ಖುರೇಷಿ ಮೇಲೆ ದೌರ್ಜನ್ಯ ನಡೆಸಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒಕ್ಕೂಟ ಹಕ್ಕೊತ್ತಾಯ ಮಂಡಿಸಿದೆ.
ಅಲ್ಪಸಂಖ್ಯಾತರ ಮೇಲೆ ಪೊಲೀಸರಿಂದ ನಿರಂತರ ದೌರ್ಜನ್ಯ ನಡೆಯುತ್ತಿದೆ. ಆದ್ದರಿಂದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ವಿವಿಧ 15 ಬೇಡಿಕೆಗಳನ್ನು ಮುಖ್ಯಮಂತ್ರಿಗೆ ಕಳುಹಿಸಲು ಸಮಾವೇಶದಲ್ಲಿ ತೀರ್ಮಾನಿಸಲಾಯಿತು.
ಪಿಯುಸಿಎಲ್ ಸ್ಥಾಪಕಾಧ್ಯಕ್ಷ ಪಿ.ಬಿ.ಡೇಸಾ, ಮುಖಂಡರಾದ ಎಸ್.ಬಿ.ದಾರಿಮಿ, ಹುಸೈನ್ ದಾರಿಮಿ ರೆಂಜಿಲಾಡಿ, ಅಬ್ದುಲ್ ಹಮೀದ್ ಬಜ್ಪೆ, ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ, ಯಾಕೂಬ್ ಸಹದಿ, ಅಶ್ರಫ್ ಕಿನಾರಾ, ನೌಷದ್ ಸೂರಲ್ಪಾಡಿ, ಮಹಾನಗರ ಪಾಲಿಕೆ ಸದಸ್ಯ ಅಬ್ದುಲ್ ಅಜೀಜ್, ಹುಸೇನ್ ಕಾಟಿಪಳ್ಳ, ಸೇವಾದಳ ಮುಖಂಡ ಅಶ್ರಫ್, ಸಿರಾಜುದ್ದೀನ್ ಕನ್ಯಾನ ಮತ್ತಿತರರು ಮಂಗಳೂರು ಚಲೋದಲ್ಲಿ ಉಪಸ್ಥಿತರಿದ್ದರು.












Click it and Unblock the Notifications