ನಾಪತ್ತೆಯಾಗಿದ್ದ ಡಾ.ಕೃಷ್ಣಮೂರ್ತಿ ಶವ ರೈಲ್ವೆ ಹಳಿಯಲ್ಲಿ ಪತ್ತೆ: ಮುಸ್ಲಿಂ ಲೀಗ್ ಕಾರ್ಯಕರ್ತರ ಬಂಧನ
ಮಂಗಳೂರು, ನವೆಂಬರ್ 11: ಕಾಸರಗೋಡು ಮೂಲದ ಬದಿಯಡ್ಕದ ಪ್ರಸಿದ್ಧ ವೈದ್ಯ ಡಾ.ಕೃಷ್ಣಮೂರ್ತಿ ನಿಗೂಢ ನಾಪತ್ತೆ ಪ್ರಕರಣ ದಾರುಣ ಅಂತ್ಯ ಕಂಡಿದೆ. ಕಾಸರಗೋಡಿನ ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡಿದ್ದ ವೈದ್ಯ ಹೊರ ಜಿಲ್ಲೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಬದಿಯಡ್ಕದ ಡಾ.ಕೃಷ್ಣಮೂರ್ತಿ ಅವರ ಮೃತದೇಹ ಉಡುಪಿಯ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹಟ್ಟಿಯಂಗಡಿ ಗ್ರಾಮದ ಕಾಡು ಅಜ್ಜಿ ಮನೆ ಪ್ರದೇಶ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ.
30 ವರ್ಷಗಳಿಂದ ಕಾಸರಗೋಡು ಬದಿಯಡ್ಕದಲ್ಲಿ ದಂತ ಚಿಕಿತ್ಸಾಲಯ ನಡೆಸುತ್ತಿದ್ದ ಕೃಷ್ಣಮೂರ್ತಿ ನವೆಂಬರ್ 8ರಂದು ತನ್ನ ಕ್ಲಿನಿಕ್‌ನಿಂದ ನಿಗೂಢವಾಗಿ ನಾಪತ್ತೆಯಾಗಿದ್ದರು. ಮೂರು ದಿನಗಳ ಬಳಿಕ ಕೃಷ್ಣಮೂರ್ತಿ ಮೃತದೇಹ ಪತ್ತೆಯಾಗಿದೆ. ಡಾ.ಕೃಷ್ಣಮೂರ್ತಿ ಅವರು ನಿಗೂಡವಾಗಿ ಸಾವು ಪ್ರಕರಣದಲ್ಲಿ ಮುಸ್ಲಿಂ ಲೀಗ್‌ನ ಐದು ಜನರನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ.

ನಿಗೂಢವಾಗಿ ನಾಪತ್ತೆಯಾದ ದಂತ ವೈದ್ಯರು
ಕೃಷ್ಣಮೂರ್ತಿ ನಾಪತ್ತೆಗೂ ಮುನ್ನ ಕ್ಲಿನಿಕ್‌ಗೆ ಬಂದ ಮುಸ್ಲಿಂ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಯಲ್ಲಿ ಹತ್ತಕ್ಕೂ ಅಧಿಕ ಮುಸ್ಲಿಂ ಯುವಕರು ಕ್ಲಿನಿಕ್‌ಗೆ ದಾಳಿ ಮಾಡಿ ವೈದ್ಯ ಕೃಷ್ಣಮೂರ್ತಿ ಅವರಿಗೆ ಕೊಲೆ ಬೆದರಿಕೆ, ಹಲ್ಲೆ ಮಾಡಿದ್ದರು. ಬಳಿಕ ಮನನೊಂದ ಡಾ.ಕೃಷ್ಣಮೂರ್ತಿ ನಿಗೂಢವಾಗಿ ನಾಪತ್ತೆಯಾಗಿದ್ದರು.
ಕೃಷ್ಣಮೂರ್ತಿ ಸಾವಿನ ಪ್ರಕರಣದ ತನಿಖೆ ನಡೆಸಿದ ಬದಿಯಡ್ಕ ಠಾಣಾ ಪೊಲೀಸರು, ಐವರು ಮುಸ್ಲಿಂ ಲೀಗ್‌ನ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಬದಿಯಡ್ಕದ ಅಡಿಕೆ ವ್ಯಾಪಾರಿ ಹಾಗೂ ಮುಸ್ಲಿಂ ಲೀಗ್ ಕುಂಬ್ಡಾಜೆ ಪಂಚಾಯತು ಕಾರ್ಯದರ್ಶಿ ಅಲಿ ತುಪ್ಪಕಲ್ಲು, ಮುಸ್ಲಿಂ ಲೀಗ್ ಬದಿಯಡ್ಕ ಪಂಚಾಯತು ಪದಾಧಿಕಾರಿ ಮುಹಮ್ಮದ್ ಹನೀಫ ಯಾನೆ ಅನ್ವರ್, ಕುಂಬ್ಡಾಜೆ ನಿವಾಸಿ ಅಶ್ರಫ್,ಅನ್ನಡ್ಕ ನಿವಾಸಿ ಮುಹಮ್ಮದ್ ಶಿಯಾಬುದ್ದೀನ್, ವಿದ್ಯಾಗಿರಿ ಮುನಿಯೂರು ನಿವಾಸಿ ಉಮರುಲ್ ಫಾರೂಕ್ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

ರುಂಡ-ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆ
ಆರೋಪಿಗಳು ಅಲಿ ಹಾಗೂ ಅನ್ವರ್ ನೇತೃತ್ವದಲ್ಲಿ ಡಾ.ಕೃಷ್ಣಮೂರ್ತಿಗೆ ಕ್ಲಿನಿಕ್‌ಗೆ ನುಗ್ಗಿ ಕೊಲೆ ಬೆದರಿಕೆ ಒಡ್ಡಿದ್ದರು ಎನ್ನಲಾಗಿದೆ. ಅಲ್ಲದೇ ಆರೋಪಿಗಳು ಬೆದರಿಸಿ ಡಾಕ್ಟರ್ ಬಳಿಯಿಂದ ಲಕ್ಷಗಟ್ಟಲೆ ಹಣ ಪಡೆಯಲು ಪ್ಲ್ಯಾನ್ ಹಾಕಿದ್ದರು ಎಂಬುವುದು ತನಿಖೆಯಲ್ಲಿ ತಿಳಿದುಬಂದಿದೆ.
ಇನ್ನು ಕುಂದಾಪುರದ ಹಟ್ಟಿಯಂಗಡಿಯಲ್ಲಿ ಕೃಷ್ಣಮೂರ್ತಿ ಅವರ ಮೃತದೇಹ ರುಂಡ-ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಸಿಕ್ಕಿದೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ಕಂಡುಬಂದರೂ ಕೆಲವು ಅನುಮಾನಗಳು ಹುಟ್ಟಿಕೊಂಡಿವೆ. ವೈದ್ಯರು ಬದಿಯಡ್ಕದಿಂದ ಸುಮಾರು 180-190 ಕಿ.ಮೀ. ದೂರದ ಕುಂದಾಪುರಕ್ಕೆ ಏಕೆ ಬಂದರು..? ಕುಂದಾಪುರಕ್ಕೆ ರೈಲು ಅಥವಾ ಬಸ್ ಅಥವಾ ಇನ್ಯಾವ ವಾಹನಗಳಲ್ಲಿ ಬಂದಿರಬಹುದು..? ಈ ಸಂಬಂಧ ಯಾವುದೇ ಮಾಹಿತಿ ಹಾಗೂ ದಾಖಲೆ ಲಭ್ಯವಾಗಿಲ್ಲ.

ಅನುಮಾನ ಹುಟ್ಟು ಹಾಕಿದ ವೈದ್ಯ ಡಾ.ಕೃಷ್ಣಮೂರ್ತಿ ಸಾವು
ಡಾ.ಕೃಷ್ಣಮೂರ್ತಿ ಮಂಗಳೂರಿಗೆ ರೈಲಿನಲ್ಲಿ ಬಂದಿದ್ದರೂ ಕೂಡ ಮೂಡ್ಲಕಟ್ಟೆಯ ರೈಲು ನಿಲ್ದಾಣದಲ್ಲಿ ಇಳಿದರೆ, ಅಲ್ಲಿಂದ ಮೃತದೇಹ ಪತ್ತೆಯಾದ ಹಟ್ಟಿಯಂಗಡಿಯ ಸ್ಥಳಕ್ಕೆ ಸುಮಾರು 10-12 ಕಿ.ಮೀ. ದೂರವಿದೆ. ಅಲ್ಲಿಯವರೆಗೆ ರೈಲ್ವೆ ಹಳಿಯಲ್ಲಿಯೇ ನಡೆದುಕೊಂಡು ಬಂದರೆ ಎಂಬ ಪ್ರಶ್ನೆಯೂ ಉದ್ಭವಿಸಿದೆ. ಅದಲ್ಲದೆ ರಾತ್ರಿ ವೇಳೆ ಮೊಬೈಲ್ ಅಥವಾ ಬೆಳಕಿನ ವ್ಯವಸ್ಥೆ ಇಲ್ಲದೇ ಹಳಿಯಲ್ಲಿಯೇ ಅಷ್ಟು ದೂರ ನಡೆದುಕೊಂಡು ಬರಲು ಸಾಧ್ಯವೇ ಎಂಬ ಪ್ರಶ್ನೆಯೂ ಇದೆ. ಒಂದು ವೇಳೆ ಬಸ್‌ನಲ್ಲಿ ಬಂದಿದ್ದರೂ ತಲ್ಲೂರಿನಲ್ಲಿ ಇಳಿದು ಅಲ್ಲಿಂದ 2-3 ಕಿ.ಮೀ. ದೂರದವರೆಗೆ ನಡೆದುಕೊಂಡು ಈ ಸ್ಥಳಕ್ಕೆ ಬಂದಿರಬಹುದೇ..? ಎಂಬ ಅನುಮಾನದ ಪ್ರಶ್ನೆಗಳು ವೈದ್ಯ ಡಾ.ಕೃಷ್ಣಮೂರ್ತಿ ಸಾವಿನಲ್ಲಿ ಕಂಡುಬಂದಿದೆ.

ವೈದರಿಗೆ ಹನಿಟ್ರ್ಯಾಪ್ ಮಾಡಲು ಯತ್ನಿಸಿದ ಆರೋಪಿಗಳು
ಡಾ.ಕೃಷ್ಣಮೂರ್ತಿ 30 ವರ್ಷಗಳಿಂದ ಕಾಸರಗೋಡು ಬದಿಯಡ್ಕದಲ್ಲಿ ದಂತ ಚಿಕಿತ್ಸಾಲಯ ನಡೆಸುತ್ತಿದ್ದರು. ಇತ್ತೀಚಿಗೆ ಕೃಷ್ಣಮೂರ್ತಿ ಅವರ ದಂತ ಚಿಕಿತ್ಸಾಲಯ ಸಮೀಪದಲ್ಲೇ ಮುಸ್ಲಿಂ ಸಮುದಾಯದ ವ್ಯಕ್ತಿಯ ದಂತ ಚಿಕಿತ್ಸಾಲಯ ತೆರೆಯಲಾಗಿದೆ. ಆ ಕ್ಲಿನಿಕ್‌ಗೆ ರೋಗಿಗಳು ಬರುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೃಷ್ಣಮೂರ್ತಿ ಅವರನ್ನು ಹಿಂದಿಕ್ಕಲು ಹನಿಟ್ರ್ಯಾಪ್ ಮಾದರಿಯಲ್ಲಿ ಪ್ರಯತ್ನ ನಡೆಸಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಈ ಬಗ್ಗೆ ಕೂಲಂಕುಷ ತನಿಖೆ ನಡೆಸಬೇಕು. ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವೈದ್ಯ ಸಂಘಟನೆ, ಹವ್ಯಕ ಸಮುದಾಯ, ಹಿಂದೂ ಸಂಘಟನೆ ಹಾಗೂ ಕುಟುಂಬಸ್ಥರು ಪೊಲೀಸ್ ಇಲಾಖೆಗೆ ಆಗ್ರಹಿಸಿದ್ದಾರೆ.












Click it and Unblock the Notifications