ಕೊರಗಜ್ಜನ ವೇಷ ಧರಿಸಿ ಅವಮಾನಿಸಿದ್ದ ಪ್ರಕರಣ: ವರನನ್ನು ಬಂಧಿಸಿದ ಪೊಲೀಸರು
ಮಂಗಳೂರು, ಫೆಬ್ರವರಿ 4: ಕರಾವಳಿಯ ಜನ ಶ್ರದ್ಧಾ ಭಕ್ತಿಯಿಂದ ಆರಾಧಿಸುವ ಕೊರಗಜ್ಜ ದೈವಕ್ಕೆ ಅವಮಾನ ಮಾಡಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೊಳ್ನಾಡು ಎಂಬಲ್ಲಿ ನಡೆದಿತ್ತು. ಮದುವೆ ದಿನ ವರನು ವಧುವಿನ ಮನೆಯಲ್ಲಿ ಕೊರಗಜ್ಜ ದೈವದ ರೀತಿ ವೇಷ ಧರಿಸಿ ಅಸಭ್ಯವಾಗಿ ವರ್ತಿಸಿದ್ದಕ್ಕೆ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.
ದಕ್ಷಿಣ ಕನ್ನಡ ಜಿಲ್ಲೆ ಭಾಗದಲ್ಲಿ ಭಾರೀ ಚರ್ಚೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದ್ದ ಕರಾವಳಿ ಜನರ ಭಕ್ತಿಯ ಸಂಕೇತವಾಗಿರುವ ಕೊರಗಜ್ಜ ದೈವದ ಅವಮಾನ ಪ್ರಕರಣದ ಆರೋಪಿ ವರನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೇರಳದ ಉಪ್ಪಳ ನಿವಾಸಿ ಉಮರುಲ್ಲಾ ಬಾಸಿತ್ ವಿರುದ್ಧ ಪೋಲೀಸರು ಲುಕ್ ಔಟ್ ನೋಟಿಸ್ ಕೂಡಾ ಜಾರಿ ಮಾಡಿದ್ದರು. ಈ ನಡುವೆ ಪೊಲೀಸರ ಕಣ್ಣು ತಪ್ಪಿಸಿ ಕೇರಳದ ಕೊಚ್ಚಿ ವಿಮಾನ ನಿಲ್ದಾಣದ ಮೂಲಕ ವಿದೇಶಕ್ಕೆ ಹಾರಲು ಆರೋಪಿ ಸಿದ್ಧತೆ ನಡೆಸಿದ್ದ. ಈ ವಿಚಾರ ತಿಳಿದ ಪೊಲೀಸರು ಆರೋಪಿಯನ್ನು ವಿಮಾನ ನಿಲ್ದಾಣದಲ್ಲೇ ಬಂಧಿಸಿ ದಕ್ಷಿಣ ಕನ್ನಡದ ವಿಟ್ಲ ಪೊಲೀಸ್ ಠಾಣೆಗೆ ಕರೆ ತರಲಾಗಿದೆ.

ಏನಿದು ಪ್ರಕರಣ?
ಜನವರಿ 6ರ ಗುರುವಾರ ರಾತ್ರಿ 10 ಗಂಟೆಗೆ ಘಟನೆ ನಡೆದಿದ್ದು, ಬಂಟ್ವಾಳದ ಕೊಳ್ನಾಡು ಗ್ರಾಮದ ಅಝೀಝ್ ಎಂಬುವವರ ಪುತ್ರಿಯ ಮಗಳ ವಿವಾಹ ಕೇರಳ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಉಪ್ಪಳದ ಯುವಕನ ಜೊತೆ ನಡೆದಿತ್ತು.
ಮದುವೆ ದಿನ ಮುಸ್ಲಿಂ ಸಂಪ್ರದಾಯದಂತೆ ವರ- ವಧುವಿನ ಮನೆಗೆ ಬರುವ ಸಂಪ್ರದಾಯವಿದ್ದು, ಈ ವೇಳೆ ವರ ಕೊರಗಜ್ಜ ದೈವವನ್ನು ಹೋಲುವ ವೇಷ ಧರಿಸಿ ಅಸಭ್ಯವಾಗಿ ವರ್ತಿಸಿದ್ದಾನೆ. ವರನ ಹುಚ್ಚಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯ ಕೇಳಿಬಂದಿತ್ತು. ಈ ಸಂಬಂಧ ದೂರು ಕೂಡ ದಾಖಲಾಗಿತ್ತು. ಇದಾದ ಬಳಿಕ ಆರೋಪಿ ಕ್ಷಮೆಯಾಚಿಸಿ, ನಾಪತ್ತೆಯಾಗಿದ್ದ. ಕಳೆದ ಒಂದು ತಿಂಗಳಿನಿಂದ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಕಡೆಗೂ ಬಂಧಿಸಲಾಗಿದೆ.
ಕೊರಗಜ್ಜ ದೈವಕ್ಕೆ ಅಪಮಾನ ಮಾಡಿದ್ದ ಆರೋಪಿ
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಹಿಂದೂ ಪರ ಸಂಘಟನೆಗಳು, ದೈವಕ್ಕೆ ಅವಮಾನ ಮಾಡಿದ ವರ ಹಾಗೂ ಆತನ ಸ್ನೇಹಿತರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೋಲೀಸ್ ಇಲಾಖೆಗೆ ಮನವಿ ಮಾಡಿದ್ದರು. ಅಲ್ಲದೆ ಈ ಸಂಬಂಧ ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಿಸಲಾಗಿತ್ತು. ವರನ ಹಾಗೂ ಆತನ ಸ್ನೇಹಿತರ ಈ ರೀತಿಯ ವರ್ತನೆಗೆ ಕೇವಲ ಹಿಂದೂ ಸಂಘಟನೆಗಳಲ್ಲದೆ, ಮುಸ್ಲಿಂ ಸಂಘಟನೆಗಳೂ ಆಕ್ಷೇಪ ವ್ಯಕ್ತಪಡಿಸಿದ್ದವು.
Recommended Video
ವರನ ಸ್ನೇಹಿತರನ್ನು ವಶಕ್ಕೆ ಪಡೆಯಲಾಗಿತ್ತು
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಪೋಲೀಸರು ವರನ ಕೆಲವು ಸ್ನೇಹಿತರನ್ನು ವಶಕ್ಕೆ ಪಡೆದುಕೊಂಡಿದ್ದರು. ಆದರೆ ಪ್ರಮುಖ ಆರೋಪಿ ಉಮರುಲ್ಲಾ ಬಾಸಿತ್ ಮಾತ್ರ ಪೋಲೀಸರ ಕಣ್ಣು ತಪ್ಪಿಸಿ ನಿರಂತರವಾಗಿ ತಲೆಮರೆಸಿಕೊಂಡಿದ್ದ. ಅಲ್ಲದೆ ಅಜ್ಞಾತ ಸ್ಥಳದಿಂದ ಮೊಬೈಲ್ ಮೂಲಕ ಘಟನೆಯ ಬಗ್ಗೆ ಕ್ಷಮೆಯಾಚಿಸಿದ್ದ. ಈ ನಡುವೆ ಆರೋಪಿಯನ್ನು ಬಂಧಿಸುವ ಹಿನ್ನಲೆಯಲ್ಲಿ ಪೊಲೀಸರು ಲುಕ್ ಔಟ್ ನೋಟಿಸ್ ಕೂಡಾ ಜಾರಿಗೊಳಿಸಿದ್ದರು. ಕೇರಳ, ಮಹಾರಾಷ್ಟ್ರ ಹಾಗೂ ಕರ್ನಾಟಕದ ವಿಮಾನ ನಿಲ್ದಾಣಗಳಲ್ಲೂ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು.
ವಿದೇಶಕ್ಕೆ ಹಾರಲು ಮುಂದಾಗಿದ್ದ ಆರೋಪಿ
ಈ ನಡುವೆ ಆರೋಪಿಯ ಗುರುವಾರ ಕೊಚ್ಚಿ ವಿಮಾನ ನಿಲ್ದಾಣದ ಮೂಲಕ ವಿದೇಶಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದ ವೇಳೆ ಪೊಲೀಸರು ಆರೋಪಿಯನ್ನು ಬಂಧಿಸಿ ವಿಟ್ಲ ಠಾಣೆಗೆ ಕರೆ ತಂದಿದ್ದಾರೆ. ಈ ಮೂಲಕ ಕರಾವಳಿಯಲ್ಲಿ ಭಾರೀ ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿದ್ದ ಆರೋಪಿಯನ್ನು ಬಂಧಿಸುವ ಮೂಲಕ ಪ್ರಕರಣಕ್ಕೆ ಸದ್ಯಕ್ಕೆ ತೆರೆ ಎಳೆದಿದ್ದಾರೆ.












Click it and Unblock the Notifications