ಮಂಗಳೂರು : ಮೋದಿಗೆ ಅವಮಾನ, ಪ್ರಕರಣ ದಾಖಲು
ಮಂಗಳೂರು, ಫೆ.14 : ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಅವಹೇಳನಕಾರಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ ಎಸ್‌ಎಫ್‌ಐ ಮುಖಂಡನ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೆಹಲಿ ಚುನಾವಣಾ ಫಲಿತಾಂಶದ ನಂತರ ಈ ಫೋಟೋವನ್ನು ವಾಟ್ಸ್‌ಪ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು.
ಎಸ್‌ಎಫ್‌ಐನ ರಾಜ್ಯ ಕಾರ್ಯದರ್ಶಿ ಜೀವನ್ ರಾಜ್ ಕುತ್ತಾರ್ ವಿರುದ್ಧ ಪ್ರಕರಣವನ್ನು ದಾಖಲು ಮಾಡಲಾಗಿದೆ. ಅರವಿಂದ್ ಕೇಜ್ರಿವಾಲ್ ಬೇಟೆಯಾಡಿದ ರೀತಿಯಲ್ಲಿರುವ ಚಿತ್ರದಲ್ಲಿ ಒಂದು ಕೈಯಲ್ಲಿ ಕೋವಿ, ಇನ್ನೊಂದು ಕೈಯಲ್ಲಿ ಪ್ರಾಣಿಯೊಂದನ್ನು ಹಿಡಿದಿದ್ದಾರೆ. ಸತ್ತ ಪ್ರಾಣಿಯ ಮುಖಕ್ಕೆ ಪ್ರಧಾನಿಯವರ ಮುಖವನ್ನು ಜೋಡಣೆ ಮಾಡಿ ಚಿತ್ರವನ್ನು ಸಾಮಾಜಿಕ ಜಾಲ ತಾಣದಲ್ಲಿ ಬಿಡುಗಡೆ ಮಾಡಲಾಗಿತ್ತು.

ಈ ರೀತಿಯ ಚಿತ್ರವನ್ನು ಹಾಕಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅವಮಾನ ಮಾಡಲಾಗುತ್ತಿದೆ. ಇದರಿಂದ ದೇಶದ 125 ಕೋಟಿ ಜನರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಫೆ. 11ರಂದು ಜೀವನ್‌ರಾಜ್ ಕುತ್ತಾರ್ ಅವರ ಮೊಬೈಲ್‌ನಿಂದ ಚಿತ್ರ ಬಂದಿದೆ ಎಂದು ದೂರು ದಾಖಲಾಗಿತ್ತು.
ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯದರ್ಶಿ ದಯಾನಂದ ತೊಕ್ಕೊಟ್ಟು ಅವರು ಉಳ್ಳಾಲ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದರು. ದೂರು ಸ್ವೀಕರಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. [ಚಪ್ಪಲಿಗೆ ಭಾವಚಿತ್ರ ಹಾಕಿ ನರೇಂದ್ರ ಮೋದಿಗೆ ಅವಮಾನ]
ಹಿಂದೆಯೂ ನಡೆದಿತ್ತು : ಮಂಗಳೂರಿನಲ್ಲಿ ಮೋದಿ ಫೋಟೋಗೆ ಅಮಮಾನ ಮಾಡುತ್ತಿರುವುದು ಇದೇ ಮೊದಲಲ್ಲ. ಕೆಲವು ದಿನಗಳ ಹಿಂದೆ ಮನೆಯೊಂದರ ಮುಂಭಾಗದಲ್ಲಿ ಮೋದಿ ಭಾವಚಿತ್ರವನ್ನು ಚಪ್ಪಲಿಯಲ್ಲಿಟ್ಟು ಅವಮಾನ ಮಾಡಿದ ಘಟನೆ ತೊಕ್ಕೊಟ್ಟು ಬಳಿ ನಡೆದಿತ್ತು. ಉಳ್ಳಾಲ ಮಂಡಲ ಪಂಚಾಯಿತಿನ ಮಾಜಿ ಮಂಡಲ ಪ್ರಧಾನ ಹಾಗೂ ಕಾಂಗ್ರೆಸ್ಸಿನ ಹಿರಿಯ ನಾಯಕರಾಗಿದ್ದ ದಿ.ಮಹಾಬಲ ಶೆಟ್ಟಿ ಎಂಬವರ ಮನೆಯ ಗೇಟಿನಲ್ಲಿ ಚಪ್ಪಲಿ ಪತ್ತೆಯಾಗಿತ್ತು.












Click it and Unblock the Notifications