Arun Kumar Puthila Nomination: ಬಿಜೆಪಿ ಎದೆಯಲ್ಲಿ ನಡುಕ ಹುಟ್ಟಿಸಿದ ಹಿಂದೂ ಮುಖಂಡ: ಅಖಾಡಕ್ಕೆ ಆರ್‌ಎಸ್‌ಎಸ್ ಎಂಟ್ರಿ
ಮಂಗಳೂರು, ಏಪ್ರಿಲ್ 20: ಬಿಜೆಪಿ ಭದ್ರಕೋಟೆ ಪುತ್ತೂರು ವಿಧಾನಸಭಾ ಕ್ಷೇತ್ರ ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹೈವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಟ್ಟಿದೆ. ಹಿಂದೂತ್ವದ ಪ್ರಯೋಗ ಶಾಲೆ ಪುತ್ತೂರಿನಲ್ಲಿ ಬಿಜೆಪಿ ಧೋರಣೆ ಬಗ್ಗೆ ಸಿಡಿದೆದ್ದ ಹಿಂದೂ ನಾಯಕ ಅರುಣ್ ಕುಮಾರ್ ಪುತ್ತಿಲ ನಾಮಪತ್ರ ಸಲ್ಲಿಸಿರುವುದು ಬಿಜೆಪಿ ನಾಯಕರಿಗೆ ಬಿಸಿತುಪ್ಪವಾಗಿದೆ.
ಸಂಘ ಪರಿವಾರದ ಪ್ರಭಾವಿ ಮುಖಂಡರಾಗಿರುವ ಅರುಣ್ ಕುಮಾರ್ ಪುತ್ತಿಲ ಅವರು ನಾಮಪತ್ರ ಸಲ್ಲಿಸಿದ್ದು, ತಮ್ಮ ಬೆಂಬಲಿಗರೊಂದಿಗೆ ಬಹೃತ್ ಮೆರವಣಿಗೆ ನಡೆಸಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಜನಪ್ರಿಯ ನಾಯಕ ಎನಿಸಿಕೊಂಡಿರುವ ಅರುಣ್ ಕುಮಾರ್ ಪುತ್ತಿಲ ಅವರ ನಾಮಪತ್ರ ಸಲ್ಲಿಕೆ ವೇಳೆ ಹದಿನೈದು ಸಾವಿರಕ್ಕೂ ಅಧಿಕ ಮಂದಿ ಭಾಗಿಯಾಗಿದ್ದರು. ಈ ಮೂಲಕ ಬಿಜೆಪಿ ವಿರುದ್ಧ ತಮ್ಮ ಶಕ್ತಿ ಪ್ರದರ್ಶನ ನಡೆಸಿದ್ದರು.

ಪುತ್ತೂರು ಮಹಾಲಿಂಗೇಶ್ವರ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಅರುಣ್ ಕುಮಾರ್ ಪುತ್ತಿಲ ಅವರ ನಾಮಪತ್ರ ಮೆರವಣಿಗೆಗೆ ದರ್ಬೆಯಲ್ಲಿ ಶಂಖನಾದ, ಕಹಳೆ ಮೊಳಗುವ ಮೂಲಕ ಚಾಲನೆ ನೀಡಲಾಯಿತು. ಹಿಂದೂ ಮುಖಂಡ ದಿವಂಗತ ಮೂಲ್ಕಿ ಸುಖಾನಂದ ಶೆಟ್ಟಿ ಅವರ ಸಹೋದರ ಸಂತೋಷ್ ಶೆಟ್ಟಿ, ಲಕ್ಷ್ಮೀಶ ತಂತ್ರಿ ಅವರು ಕಹಳೆ ಊದಿ ಚಾಲನೆ ನೀಡಿದರು.
ಪುತ್ತೂರು ಸೇರಿದಂತೆ ಹಲವೆಡೆಯಿಂದ ಅಪಾರ ಸಂಖ್ಯೆಯಲ್ಲಿ ಬೆಂಬಲಿಗರು ನೆರೆದಿದಿದ್ದು, ಎಲ್ಲೆಡೆ ಕೇಸರಿ ಮಯವಾಗಿತ್ತು. ಕೇಸರಿ ಶಾಲು ಧರಿಸಿದ ಸಾವಿರಾರು ಕಾರ್ಯಕರ್ತರು ಶಾಲು ಮೇಲೆತ್ತಿ ಬೀಸುವ ಮೂಲಕ ಅರುಣ್ ಪುತ್ತಿಲ ಅವರಿಗೆ ಸ್ವಾಗತ ಕೋರಿದರು. ಬ್ಯಾಂಡ್, ವಾದ್ಯದ ಮೂಲಕ ಮೆರವಣಿಗೆಯಲ್ಲಿ ಸಾಗಿ ಬಂದ ಅರುಣ್ ಕುಮಾರ್ ಪುತ್ತಿಲ ಅವರಿಗೆ ರಸ್ತೆಯುದ್ದಕ್ಕೂ ಪುಷ್ಪ ವೃಷ್ಟಿ ಸುರಿಸಲಾಗಿತ್ತು. ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಶಕ್ತಿ ಪ್ರದರ್ಶನದ ಬಳಿಕ ಎದುರಾಳಿಗಳಲ್ಲಿ ನಡುಕ ಹುಟ್ಟಿಸಿದಂತಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ತವರು ನೆಲ ಪುತ್ತೂರು ಹಿಂದೂತ್ವದ ಪ್ರಯೋಗ ಶಾಲೆಯಾಗಿದೆ. ಈ ಹಿನ್ನಲೆಯಲ್ಲಿ ಪುತ್ತೂರನ್ನು ಉಳಿಸಿಕೊಳ್ಳಲು ಆರ್‌ಎಸ್‌ಎಸ್ ಮುಖಂಡರು ಎಂಟ್ರಿ ಕೊಟ್ಟಿದ್ದು, ಶತಾಯಗಾತಾಯ ಶ್ರಮ ವಹಿಸುತ್ತಿದ್ದಾರೆ. ಬಿಜೆಪಿಯಿಂದ ಪ್ರಬಲ ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡಕ್ಕೆ ಟಿಕೆಟ್ ನೀಡಲಾಗಿದೆ. ಹೀಗಾಗಿ ಸದ್ಯ ಆರ್‌ಎಸ್‌ಎಸ್ ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡುತ್ತಿದೆ.
ಆಶಾ ತಿಮ್ಮಪ್ಪ ಗೌಡಗೆ ಟಿಕೆಟ್ ನೀಡಿರುವುದಕ್ಕೆ ಅಸಮಾಧಾನಗೊಂಡಿರುವ ಹಿಂದೂ ಸಂಘಟನೆ ನಾಯಕ ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇದು ಆರ್‌ಎಸ್‌ಎಸ್ ಮುಖಂಡರಿಗೆ ಬಿಸಿ ತುಪ್ಪವಾಗಿದೆ. ತಳಮಟ್ಟದ ಕಾರ್ಯಕರ್ತರು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಪರವಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ಬಿಜೆಪಿ ಉಳಿಸಿಕೊಳ್ಳುವ ಜವಾಬ್ದಾರಿಯನ್ನು ಹೊತ್ತಿರುವ ಆರ್‌ಎಸ್‌ಎಸ್ ಮುಖಂಡರು ಕಾರ್ಯಕರ್ತರ ಮನವೊಲಿಕೆಗೆ ಯತ್ನಿಸಿದ್ದಾರೆ. ಪುತ್ತೂರಿನಲ್ಲಿ ಬಿಜೆಪಿ ಪರ ಕೆಲಸ ಮಾಡುತ್ತಿರುವ ಆರ್‌ಎಸ್‌ಎಸ್ ರಾಷ್ಟ್ರೀಯತೆಯ ಆಧಾರದಲ್ಲಿ ಯುವಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ.
ಸದ್ಯ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಆರ್‌ಎಸ್‌ಎಸ್, ಬಿಜೆಪಿ ಒಂದಡೆಯಾದರೆ ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ ಹಾಗೂ ಕಾರ್ಯಕರ್ತರು ಇನ್ನೊಂದೆಡೆಯಾಗಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ಮತ ವಿಭಜನೆಯಾಗುವ ಸಾಧ್ಯತೆ ಹೆಚ್ಚಿದೆ. ಟಿಕೆಟ್ ವಂಚಿತ ಹಿಂದೂಪರ ಮುಖಂಡ ಅರುಣ್ ಕುಮಾರ್ ಪುತ್ತಿಲ ಸ್ಪರ್ಧೆ ಬಿಜೆಪಿಗೆ ಕಬ್ಬಿಣದ ಕಡಲೆಯಾಗಿದೆ. ಅರುಣ್ ಕುಮಾರ್ ಪುತ್ತಿಲಗೆ ಸಿಗುತ್ತಿರುವ ಜನ ಬೆಂಬಲ ಬಿಜೆಪಿಗೆ ತಲೆನೋವಾಗಿದೆ.

ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ತಳ ಮಟ್ಟದಿಂದಲೇ ಬಲಿಷ್ಠವಾಗಿತ್ತು. ಆದರೆ ಇದೀಗ ಅಭ್ಯರ್ಥಿ ಆಯ್ಕೆಯಲ್ಲಿ ಬಿಜೆಪಿ ತೆಗೆದುಕೊಂಡ ನಿರ್ಧಾರ ಪಕ್ಷಕ್ಕೆ ಮಾರಕವಾಗಿ ಪರಿಣಮಿಸುವ ಸಾಧ್ಯತೆಗಳು ಹೆಚ್ಚಿದೆ. ಅರುಣ್ ಪುತ್ತಿಲ ಅವರಿಗೆ ಪುತ್ತೂರಿನ ಟಿಕೆಟ್ ಕೈ ತಪ್ಪಿದಾಗ ಅವರು ತಮ್ಮ ಮುಂದಿನ ನಿರ್ಧಾರ ತೆಗೆದುಕೊಳ್ಳಲು ಬೆಂಬಲಿಗರ ಸಭೆ ಕರೆದಿದ್ದರು.
ಮೊದಲ ಸಭೆಯಲ್ಲೇ 3000ಕ್ಕೂ ಹೆಚ್ಚು ಬೆಂಬಲಿಗರು ಸೇರಿದ್ದರು. ಬಳಿಕ ಬೆಂಬಲಿಗರ ಇಚ್ಛೆಯಂತೆ ಕಣಕ್ಕಿಳಿದ ಅರುಣ್ ಪುತ್ತಿಲ ನಾಮಪತ್ರ ಸಲ್ಲಿಕೆ ವೇಳೆ ಜನ ಸಾಗರವೇ ನೆರೆದಿತ್ತು. ಇದರಿಂದ ಸದ್ಯ ಕ್ಷೇತ್ರದಲ್ಲಿ ಮತದಾರರ ಒಲವು ಅರುಣ್ ಪುತ್ತಿಲ ಪರವೇ ಇರುವುದನ್ನು ಅರಿತ ಬಿಜೆಪಿ ಹೇಗಾದರೂ ಕ್ಷೇತ್ರ ಉಳಿಸಿಕೊಳ್ಳುವ ಯತ್ನಕ್ಕೆ ಮುಂದಾಗಿದೆ. ಬಿಜೆಪಿ ಘಟಾನುಘಟಿ ನಾಯಕರ ಜೊತೆ ಆರ್‌ಎಸ್‌ಎಸ್ ಮುಖಂಡರ ಪ್ರಯತ್ನ ಕೂಡ ಮುಂದುವರಿದಿದೆ.











Click it and Unblock the Notifications