ಮಂಗಳೂರು; ಶಾಸಕರಿದ್ದ ಬಸ್‌ಗೆ ಕಾರ್ಯಕರ್ತರ ಮುತ್ತಿಗೆ!
ಮಂಗಳೂರು, ಏಪ್ರಿಲ್ 06; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ ಪ್ರಕರಣ ನಡೆದಿದೆ. ಕಡಬ ತಾಲೂಕಿನ ಸಿರಿಬಾಗಿಲು ಗ್ರಾಮದ ದೇರಣೆ ಎಂಬಲ್ಲಿ ನಜೀರ್ ಎಂಬಾತ ತನ್ನ ಪ್ರೇಯಸಿ ಅನ್ಯಧರ್ಮದ ಯುವತಿಯ ಜೊತೆ ತನ್ನ ಆಟೋ ಕುಳಿತುಕೊಂಡು ಮಾತನಾಡುತ್ತಿದ್ದ ವೇಳೆ ಹಿಂದೂ ಸಂಘಟನೆಗೆ ಸೇರಿದ ಕಾರ್ಯಕರ್ತರು ನಜೀರ್ ಮೇಲೆ ದಾಳಿ ಮಾಡಿದ್ದಾರೆ.
ಈ ಘಟನೆ ಕುರಿತು ನಜೀರ್ ಕೊಟ್ಟ ದೂರಿನ ಹಿನ್ನಲೆಯಲ್ಲಿ ಉಪ್ಪಿನಂಗಡಿ ಠಾಣಾ ಪೊಲೀಸರು ಮೂವರು ಆರೋಪಿಗಳನ್ನು ಬಂಧನ ಮಾಡಿದ್ದಾರೆ. ನಜೀರ್ ಮೇಲೆ ಹಲ್ಲೆ ನಡೆಸಲಾಗಿದೆ. ಮುಖಕ್ಕೆ, ತಲೆಗೆ ಕೈಯಿಂದ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಪುತ್ತೂರು ತಾಲೂಕಿನ ಆರ್ಯಾಪು ನಿವಾಸಿ ನಜೀರ್ ತನ್ನ ಆಟೋದಲ್ಲಿ ತಾನು ಪ್ರೀತಿ ಮಾಡುತ್ತಿದ್ದ ಅನ್ಯಧರ್ಮದ ಯುವತಿಯ ಜೊತೆ ಕಡಬ ತಾಲೂಕು ಸಿರಿಬಾಗಿಲು ಗ್ರಾಮದ ದೇರಣೆ ಎಂಬಲ್ಲಿ ಅರಣ್ಯ ಭಾಗದ ರಸ್ತೆಯಲ್ಲಿ ಆಕೆಯೊಂದಿಗೆ ಮಾತನಾಡುತ್ತಾ ಕುಳಿತಿದ್ದ.

ಆಗ ಸಿರಿಬಾಗಿಲು ನಿವಾಸಿ ಸುರೇಂದ್ರ, ತೀರ್ಥಪ್ರಸಾದ್, ಜಿತೇಶ್ ಮತ್ತು ಇತರರು ಆಟೋ ಚಾಲಕ ನಜೀರ್ ತಡೆದು ನೀವು ಎಲ್ಲಿಗೆ ಹೋಗುತ್ತಿದ್ದೀರಿ?. ನಿಮ್ಮ ಹೆಸರೇನು? ಎಂದು ಪ್ರಶ್ನಿಸಿದ್ದಾರೆ. ನಜೀರ್ ಮತ್ತು ಜೊತೆಯಲ್ಲಿದ್ದ ಅನ್ಯಧರ್ಮದ ಯುವತಿ ತಮ್ಮ ಹೆಸರನ್ನು ಹೇಳಿದಾಗ ಆರೋಪಿಗಳು, ಯುವಕನನ್ನು ಉದ್ದೇಶಿಸಿ ನಿನಗೆ ತಿರುಗಾಡಲು ಹಿಂದೂ ಹುಡುಗಿಯೇ ಆಗಬೇಕಾ? ಎಂದು ಕೇಳಿ ಹಲ್ಲೆ ಮಾಡಿದ್ದಾರೆ.
ರಸ್ತೆಯ ಬದಿಯ ಪೊದೆಯಿಂದ ಬೆತ್ತವನ್ನು ಮುರಿದುಕೊಂಡು ಬಂದು ನಜೀರ್ ಬೆನ್ನು, ಕಾಲು, ಕೈಗೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಇನ್ನು ಮುಂದಕ್ಕೆ ಹಿಂದೂ ಹುಡುಗಿಯನ್ನು ಸುತ್ತಾಡಿಸಿದರೆ ಕೊಲ್ಲುತ್ತೇವೆ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ನಜೀರ್ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ನೀಡಿದರು ದೂರಿನಲ್ಲಿ ತಿಳಿಸಿದ್ದಾರೆ.
ನಝೀರ್ ನೀಡಿದ ದೂರಿನ ಹಿನ್ನಲೆಯಲ್ಲಿ ಉಪ್ಪಿನಂಗಡಿ ಠಾಣಾ ಪೊಲೀಸರು ಸುರೇಂದ್ರ, ತೀರ್ಥ ಪ್ರಸಾದ್, ಜಿತೇಶ್ ಎಂಬುವವರನ್ನು ಬಂಧನ ಮಾಡಿದ್ದಾರೆ. ಆದರೆ ಹಿಂದೂ ಸಂಘಟನೆಗಳು ತಮ್ಮ ಕಾರ್ಯಕರ್ತರನ್ನು ಬಂಧನ ಮಾಡಿರೋದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿವೆ.

ನಜೀರ್ ಅನ್ಯಧರ್ಮದ ಯುವತಿಯೊಂದಿಗೆ ಗುಡ್ಡದಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ. ಇದನ್ನು ತಡೆಯಲು ಹೊರಟ ಕಾರ್ಯಕರ್ತರ ಮೇಲೆ ಸುಳ್ಳು ದೂರನ್ನು ನೀಡಿದ್ದಾನೆ ಎಂದು ಆರೋಪಿಸಿದ್ದಾರೆ. ಪೊಲೀಸರು ಕಾರ್ಯಕರ್ತರನ್ನು ಬಂಧನ ಮಾಡುವ ವೇಳೆ ಪುತ್ತೂರು ಬಿಜೆಪಿ ಶಾಸಕ ಸಂಜೀವ ಮಠಂದೂರು ನೆರವನ್ನು ಕಾರ್ಯಕರ್ತರು ಯಾಚಿಸಿದ್ದಾರೆ. ಈ ವೇಳೆ ಮಠಂದೂರು, ತಾನು ಸ್ವಕ್ಷೇತ್ರದಲ್ಲಿ ಇದ್ದರೂ, ಊರಲ್ಲಿ ಇಲ್ಲ ಅಂತಾ ಹೇಳಿದ್ದಾರೆ ಎಂದು ಕಾರ್ಯಕರ್ತರು ದೂರಿದ್ದಾರೆ.
ಶಾಸಕ ಸಂಜೀವ ಮಠಂದೂರು ಮಂಗಳವಾರ ರಾತ್ರಿ ಪುತ್ತೂರಿನಿಂದ ಬೆಂಗಳೂರಿಗೆ ಬಸ್ ಮೂಲಕ ಪ್ರಯಾಣಿಸಿದ್ದು, ಇದನ್ನು ತಿಳಿದ ಕಾರ್ಯಕರ್ತರು ಉಪ್ಪಿನಂಗಡಿಯಲ್ಲಿ ಶಾಸಕರಿದ್ದ ಬಸ್‌ಗೆ ಮುತ್ತಿಗೆ ಹಾಕಿದ್ದಾರೆ.
ತನ್ನ ಸ್ವ ಕ್ಷೇತ್ರದಲ್ಲೇ ಕಾರ್ಯಕರ್ತರ ಬಂಧನವಾದರೂ ನೆರವಿಗೆ ಬಾರದ ಶಾಸಕರ ವಿರುದ್ಧ ಕಾರ್ಯಕರ್ತರು ಧಿಕ್ಕಾರ ಕೂಗಿದ್ದಾರೆ. ಸುಳ್ಳು ದೂರಿಗೆ ಕಾರ್ಯಕರ್ತರ ಬಂಧನವಾದರೂ ಶಾಸಕ ಮಠಂದೂರು ಈ ಬಗ್ಗೆ ಗಮನ ಹರಿಸಿಲ್ಲ. ಹಿಂದುತ್ವದ ಹೆಸರು ಹೇಳಿ ಅಧಿಕಾರಕ್ಕೆ ಬಂದ ಶಾಸಕರು, ಕ್ಷೇತ್ರದಲ್ಲಿ ಕಾರ್ಯಕರ್ತರು ಬಂಧನವಾದಾಗ ಸುಳ್ಳು ಹೇಳಿ ತಪ್ಪಿಸಿಕೊಂಡಿದ್ದಾರೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications