ಸರ್ವೇ ನೋಡದೆ, ವಾಮಮಾರ್ಗದಲ್ಲಿ ಟಿಕೆಟ್ ಕೈ ತಪ್ಪಿಸಿದ್ದಾರೆ: ಡಿಕೆಶಿ, ಖಾದರ್ ವಿರುದ್ಧ ಮೊಯಿದ್ದೀನ್ ಬಾವಾ ಕಿಡಿ
ಮಂಗಳೂರು, ಏಪ್ರಿಲ್ 20: ಕಾಂಗ್ರೆಸ್ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಮೊಯಿದ್ದಿನ್ ಬಾವಾ ಕಾಂಗ್ರೆಸ್ ಪಕ್ಷದ ಮೇಲೆ ತೀವ್ರ ಅಸಮಾಧಾನ ಹೊರಹಾಕಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಕಿಡಿಕಾರಿದ್ದಾರೆ.
ಮೊಯಿದ್ದಿನ್ ಬಾವಾ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಕಾಂಗ್ರೆಸ್ ಉತ್ತರ ವಿಧಾನಸಭಾ ಕ್ಷೇತ್ರದಿಂದ ಇನಾಯತ್ ಅಲಿ ಅವರಿಗೆ ಟಿಕೆಟ್ ನೀಡಿದೆ. ಇದರಿಂದ ಅಸಮಾಧಾನಗೊಂಡಿರುವ ಮೊಯಿದ್ದಿನ್ ಬಾವಾ ಕಾಂಗ್ರೆಸ್ ತೊರೆದು ಜೆಡಿಎಸ್ ಮೂಲಕ ಚುನಾವಣಾ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಮೊಯಿದ್ದಿನ್ ಬಾವಾ, ಉತ್ತರದಲ್ಲಿ ಹನ್ನೊಂದು ಜನ ಆಕಾಂಕ್ಷಿಗಳು ಇದ್ದರು. ರಾಹುಲ್ ಗಾಂಧಿಯವರು ಕಳಿಸಿದ ಸರ್ವೇ ಟೀಂ ಆಧಾರದಲ್ಲಿ ಟಿಕೆಟ್ ನೀಡುವುದಾಗಿ ಹೇಳಿದ್ದರು. ಯಾವುದೇ ಪ್ರಭಾವ ಇಲ್ಲದೇ ಟಿಕೆಟ್ ಕೊಡುವುದಾಗಿ ಹೇಳಿದ್ದರು. ಆದರೆ ಡಿ.ಕೆ ಶಿವಕುಮಾರ್ ಕಾಂಗ್ರೆಸ್ ಟಿಕೆಟ್ ಮಾರಾಟ ಮಾಡಿದ್ದಾರೆ. ಆರು ತಿಂಗಳ ಹಿಂದೆ ಜಿಲ್ಲೆಗೆ ಬಂದ ಗುತ್ತಿಗೆದಾರನಿಗೆ ಟಿಕೆಟ್ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ನಿಂದ ಜೆಡಿಎಸ್ಗೆ ಬಂದ ಮೋಹಿನುದ್ದೀನ್ ಬಾವಾಗೆ ಮಂಗಳೂರು ಉತ್ತರ ಕ್ಷೇತ್ರದ ಟಿಕೆಟ್#jdsticket #MoiddinBawa #breakingnews #karnatakaelections2023 #jds pic.twitter.com/fyFUq7Wted
— oneindiakannada (@OneindiaKannada) April 20, 2023
ಸಿಇಸಿ ಚೇರ್ ಮೆನ್ ಮೋಹನ್ ಪ್ರಕಾಶ್ ಸಮೀಕ್ಷೆ ರಿಪೋರ್ಟ್ ನನಗೆ ತೋರಿಸಿದ್ದರು. 78% ಜನರು ನನಗೆ ಆಶೀರ್ವಾದ ಮಾಡಿದ್ದರು, 7% ಈಗಿನ ಅಭ್ಯರ್ಥಿ ಪರ ಇತ್ತು. ಹೀಗಾಗಿ ಮೋಹನ್ ಪ್ರಕಾಶ್ ಕ್ಷೇತ್ರಕ್ಕೆ ಹೋಗಿ ಕೆಲಸ ಮಾಡಿ ಎಂದಿದ್ದರು. ಆದರೆ ರಾಹುಲ್ ಗಾಂಧಿ ಕೋಲಾರಕ್ಕೆ ಬಂದಾಗ ಮತ್ತೆ ಇನಾಯತ್ ಆಲಿ ಲಾಬಿ ಮಾಡಿದರು. ಆದರೆ ರಾಹುಲ್ ಗಾಂಧಿ ಈ ಬಗ್ಗೆ ಗಮನ ಕೊಟ್ಟಿಲ್ಲ. ಇದಾದ ಬಳಿಕ ಡಿ.ಕೆ ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಜೊತೆ ಹೋಗಿ ನನ್ನ ಹೆಸರು ತಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

ಡಿ.ಕೆ ಶಿವಕುಮಾರ್ ವಾಮಮಾರ್ಗ ಉಪಯೋಗಿಸಿ ಕಾಂಗ್ರೆಸ್ ಟಿಕೆಟ್ ತಪ್ಪಿಸಿದ್ದಾರೆ. ಒಬ್ಬ ಗುತ್ತಿಗೆದಾರನಿಗೆ ಅಧ್ಯಕ್ಷರು ಅಭ್ಯರ್ಥಿತನ ಮಾಡಿದ್ದಾರೆ. ಇದು ಟಿಕೆಟ್ ಮಾರಾಟ, ಕಾಂಗ್ರೆಸ್ ಪಕ್ಷಕ್ಕೆ ಇದು ನಾಚಿಕೆ ವಿಚಾರ. ಡಿ.ಕೆ ಶಿವಕುಮಾರ್ ನನ್ನನ್ನು ವೈರಿಯಾಗಿ ಕಾಡಿ ಇನಾಯತ್ ಆಲಿಗೆ ಟಿಕೆಟ್ ಕೊಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನಾಯತ್ ಆಲಿ ಬಿಜೆಪಿ ವಿರುದ್ದ ಹೋರಾಟ ಮಾಡಿಲ್ಲ. ಅಲ್ಲದೇ ನನ್ನ ಅಭಿಮಾನಿಗಳಿಗೆ ಹಣದ ಆಮಿಷ ಒಡ್ಡಿದ್ದಾರೆ. ಹೊರಗಡೆಯಿಂದ ಜನ ತಂದು ದುಡ್ಡಿನ ಆಮಿಷ ಒಡ್ಡಿದರು. ಇನಾಯತ್ ಆಲಿ ಎರಡು ಕೋಟಿ ರೂಪಾಯಿ ನ್ಯಾಶನಲ್ ಹೆರಾಲ್ಡ್‌ಗೆ ಕೊಟ್ಟಿದ್ದಾರಂತೆ. ಇದನ್ನು ಡಿಕೆಶಿ ಸಿಇಸಿ ಸಭೆಯಲ್ಲಿ ರಾಹುಲ್ ಗಾಂಧಿ ಎದುರಲ್ಲೇ ಹೇಳಿದ್ದಾರೆ ಎಂದು ಹೇಳಿದರು.
ಕರಾವಳಿ ಭಾಗದ ಕೆಲವರು ವ್ಯವಸ್ಥೆ ಮಾಡಿ ನನ್ನ ಟಿಕೆಟ್ ತಪ್ಪಿಸಿದ್ದಾರೆ. ಏಕೈಕ ಶಾಸಕರಾಗಿ ಮೆರೆಯಬೇಕೆಂಬ ವ್ಯಕ್ತಿ ಟಿಕೆಟ್ ತಪ್ಪಿಸಿದ್ದಾರೆ. ಶಿವಮೊಗ್ಗದಲ್ಲಿ ಕಾಂಗ್ರೆಸ್ ಮುಳುಗಿಸಿದ ಎಂಎಲ್‌ಸಿ ಟಿಕೆಟ್ ತಪ್ಪಿಸಿದ್ದಾರೆ ಎಂದು ಮೊಯಿದ್ದೀನ್ ಬಾವಾ, ಕಾಂಗ್ರೆಸ್ ಶಾಸಕ ಯು.ಟಿ ಖಾದರ್ ಹಾಗೂ ಎಂಎಲ್‌ಸಿ ಮಂಜುನಾಥ ಭಂಡಾರಿ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದಾರೆ.
ನಾನು ಕಾಂಗ್ರೆಸ್‌ಗೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಕಾರ್ಯಕರ್ತರ ಒತ್ತಾಯದ ಹಿನ್ನೆಲೆ ಜೆಡಿಎಸ್ ಸೇರುತ್ತಿದ್ದೇನೆ. ಮಾನ್ಯ ಕುಮಾರಣ್ಣ ಮತ್ತು ದೇವೇಗೌಡರ ಆಶೀರ್ವಾದ ನನಗೆ ಇದೆ. ಇಂದು ಮಂಗಳೂರು ಉತ್ತರದ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೇನೆ. ರಾತ್ರಿ ಎರಡು ಗಂಟೆಯವರೆಗೆ ಖರ್ಗೆಯವರ ಮನೆ ಬಳಿ ಇದ್ದೆ. ಸರ್ವೇ ಪ್ರಕಾರ ಟಿಕೆಟ್ ಕೊಡಿ ಎಂದು ಯು.ಟಿ ಖಾದರ್ ಅವರನ್ನು ಕೋರಿಕೊಂಡೆ ಆದರೆ ಅವರು ನನ್ನ ಪರವಾಗಿ ನಿಲ್ಲಲೇ ಇಲ್ಲ. ಏಕಾಂಕಿಯಾಗಿ ಶಾಸಕನಾಗಬೇಕು ಎಂಬ ವ್ಯಕ್ತಿ ಟಿಕೆಟ್ ತಪ್ಪಿಸಿದ್ದಾರೆ ಎಂದು ಮೊಯಿದ್ದೀನ್ ಬಾವಾ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.











Click it and Unblock the Notifications