ಕನ್ನಡ ಕಲಿಕೆ ಬಗ್ಗೆ ಅಭಿಮಾನ ಇರಲಿ, ಅಂಧಾಭಿಮಾನವಲ್ಲ: ಭೋಜೆ ಗೌಡ
ಮಂಗಳೂರು, ಸೆಪ್ಟೆಂಬರ್.20: ಕನ್ನಡ ಭಾಷೆಯೊಂದಿಗೆ ಇತರ ವ್ಯವಹಾರಿಕ ಭಾಷೆಗಳ ಜ್ಞಾನ ಅತ್ಯವಶ್ಯಕ. ಕನ್ನಡ ಕಲಿಕೆ ಬಗ್ಗೆ ಅಭಿಮಾನ ಇರಬೇಕೆ ಹೊರತು ಅಂಧಾಭಿಮಾನ ಇರಬಾರದು. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಯಾಕೆ ಕಡಿಮೆಯಾಗುತ್ತಿದೆ ಎಂದು ಚಿಂತಿಸಬೇಕಾದ ಪರಿಸ್ಥಿತಿ ಇದೆ ಎಂದು ವಿಧಾನ ಪರಿಷತ್ ಸದಸ್ಯ ಭೋಜೆ ಗೌಡ ಹೇಳಿದರು.
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗೊಳೊಂದಿಗೆ ಮಾತನಾಡಿದ ಅವರು ಕನ್ನಡ ಕಲಿಯಬೇಕು. ಆದರೆ ಕನ್ನಡವೊಂದೇ ಕಲಿಯಬೇಕು ಎಂಬ ಅಂಧಾಭಿಮಾನ ಇರಬಾರದು. ಹೆಚ್ಚಿನವರಿಗೆ ತಮ್ಮ ಮಕ್ಕಳು ಇಂಗ್ಲಿಷ್ ಕೂಡ ಕಲಿಯಬೇಕು ಎಂಬ ಮಹದಾಸೆ ಹೊಂದಿದ್ದಾರೆ. ಈ ಕಾರಣ ಸರಕಾರಿ ಕನ್ನಡ ಶಾಲೆಗಳ ಬದಲು ಖಾಸಗಿ ಶಾಲೆಗೆ ಕಳುಹಿಸುತ್ತಿದ್ದಾರೆ.
ಕನ್ನಡ ಭಾಷೆ ಉಳಿಸುವ ನಿಟ್ಟಿನಲ್ಲಿ ಪುಂಕಾನೂಪುಂಕವಾಗಿ ಭಾಷಣ ಬಿಗಿಯುವ ಕನ್ನಡ ಹೋರಾಟಗಾರರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಿ ಮಾತಾಡಲಿ. ಅವರ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಕಲಿಸದಿದ್ದರೆ ಅವರಿಗೆ ಮಾತಾಡುವ ನೈತಿಕತೆ ಇಲ್ಲ ಎಂದು ಕಿಡಿಕಾರಿದರು .

ಇನ್ನು ಸರ್ಕಾರದ ಹಣದಿಂದ ಮಾಡಿದ ಕಾಮಗಾರಿ ಮುಗಿದ ಬಳಿಕ ಸಂಸದರು ಹಾಗೂ ಶಾಸಕರು ಫ್ಲೆಕ್ಸ್ ಗಳಲ್ಲಿ ತಮ್ಮ ಪೋಟೋ ಹಾಕಿಸಿಕೊಳ್ಳುತ್ತಿರುವುದು ಸರಿಯಲ್ಲ. ಫೋಟೋ ಬಳಸಲು ಅವರು ಸ್ವಂತ ಹಣದಿಂದ ನಡೆಸಿದ ಅಭಿವೃದ್ಧಿ ಕಾಮಗಾರಿಯಾ ? ಕೆಲವರು ರಿಕ್ಷಾ ನಿಲ್ದಾಣಗಳಿಗೂ ತಮ್ಮ ಫೋಟೋ ಹಾಕಿಸಿ ಕೊಳ್ಳುತ್ತಾರೆ.
ಸರ್ಕಾರ ನೀಡಿದ ಹಣದಿಂದ ನಡೆಸಲಾದ ಅಭಿವೃದ್ಧಿ ಕಾಮಗಾರಿ ಆದ ಕಾರಣ ಫೋಟೋ ಬದಲು ಸಂಸದರ ನಿಧಿ ಬಳಕೆ ಎಂದು ಹಾಕಲು ಆಕ್ಷೇಪವಿಲ್ಲ. ಈ ಕುರಿತು ಮುಂದಿನ ದಿನಗಳಲ್ಲಿ ಹೈಕೋರ್ಟ್ ನಲ್ಲಿ ಪಿಐಎಲ್ ಸಲ್ಲಿಸುವುದಾಗಿ ತಿಳಿಸಿದರು.
ವಿಧಾನಸೌಧದ ಅಧಿಕಾರಿಗಳಲ್ಲಿಯೂ ಇದರ ಬಗ್ಗೆ ಮಾಹಿತಿ ಕೇಳಿದ್ದೇನೆ. ಇದರ ಬಗ್ಗೆ ನ್ಯಾಯಾಲಯದಲ್ಲಿ ಪ್ರಶ್ನಿಸುವೆ. ಫೋಟೋ ಹಾಕುವುದು ಕಾನೂನು ಪ್ರಕಾರ ಸರಿಯೇ? ಎಂದು ಸಂಬಂಧಪಟ್ಟವರು ತಿಳಿಸಲಿ ಎಂದರು.

ನ್ಯಾಯಾಲಯದ ಮೂಲಕ 24 ಗಂಟೆಯಲ್ಲಿ ಬೆಂಗಳೂರಿನ ರಸ್ತೆಗಳ ಗುಂಡಿ ಮುಚ್ಚಲು ಹೊರಡಿಸಿರುವ ನ್ಯಾಯಮೂರ್ತಿ ದಿನೇಶ ಮಹೇಶ್ವರಿ ಅವರ ಆದೇಶ ಸ್ವಾಗತಾರ್ಹ. ಆದರೆ 24 ಗಂಟೆಯಲ್ಲಿ ಗುಣಮಟ್ಟದ ಕಾಮಗಾರಿ ಸಾಧ್ಯನಾ ? ಎಂದು ಚಿಂತಿಸಬೇಕಾಗಿದೆ.
ಗುಣಮಟ್ಟದ ಕಾಮಗಾರಿ ಮಾಡದಿದ್ದರೆ ಮಾಡಿಯೂ ಏನು ಪ್ರಯೋಜನ?. ಗುಂಡಿ ಮುಚ್ಚುವ ಆದೇಶದಂತೆ ರಾಜ್ಯದ ನ್ಯಾಯಾಲಯಗಳಲ್ಲಿ ಬಾಕಿ ಇರುವ ಲಕ್ಷಾಂತರ ಮೊಕದ್ದಮೆ ಶೀಘ್ರ ವಿಲೆವಾರಿ ಮಾಡುವಂತೆ ದಿನೇಶ್ ಮಹೇಶ್ವರಿ ಆದೇಶ ಹೊಡಿಸಿದರೆ ಬಡ ಜನರಿಗೆ ತುಂಬಾ ಅನುಕೂಲ ಆಗುತ್ತದೆ ಎಂದು ಭೋಜೆ ಗೌಡ ಮನವಿ ಮಾಡಿದರು.












Click it and Unblock the Notifications