ಕಾಂಗ್ರೆಸ್‌ ಸರ್ಕಾರ ಅಭಿವೃದ್ಧಿ ಯೋಜನೆಗಳಿಗೆ ಹಣ ನೀಡುತ್ತಿಲ್ಲ - ಶಾಸಕ ವೇದವ್ಯಾಸ ಕಾಮತ್ ಆರೋಪ

ಮಂಗಳೂರು, ನವೆಂಬರ್‌ 04: ದ.ಕ.ಜಿಲ್ಲೆಯಲ್ಲಿ ಸಾಂಪ್ರದಾಯಿಕ ಮರಳುಗಾರಿಕೆ ಆರಂಭಿಸಲು ಸರ್ಕಾರ ಅನಗತ್ಯ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಎಂದು ಶಾಸಕ ವೇದವ್ಯಾಸ ಕಾಮತ್ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೇತ್ರಾವತಿ ಹಾಗೂ ಫಲ್ಗುಣಿ ನದಿಯಲ್ಲಿ ಹೊಸದಾಗಿ ಮರಳು ದಿಬ್ಬಗಳನ್ನು ಗುರುತಿಸಿ ಎನ್‌ಐಟಿಕೆ ಸಲ್ಲಿಸಿರುವ ತಾಂತ್ರಿಕ ವರದಿ ಬೆಂಗಳೂರಿನ ಕೆಸಿಝಡ್‌ಎಂಎಗೆ (ಕರ್ನಾಟಕ ಕರಾವಳಿ ವಲಯ ನಿರ್ವಹಣೆ ಸಮಿತಿ) ಕಳುಹಿಸಿಕೊಟ್ಟರೂ ಇನ್ನೂ ಮರಳುಗಾರಿಕೆಗೆ ಅನುಮತಿ ನೀಡಲು ಸರಕಾರ ಮೀನಾ - ಮೇಷಾ ಎಣಿಸುತ್ತಿದೆ ಎಂದರು.

MLA Veda Vyasa Kamath Allegations Against Congress government

ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಮರಳುಗಾರಿಕೆ ಆರಂಭಿಸಲು ಕೆಸಿಝಡ್‌ಎಂಎ ಅನುಮತಿ ಅಗತ್ಯ. ಅದರಂತೆ ಜಿಲ್ಲಾಡಳಿತ ಎಲ್ಲಾ ಅಗತ್ಯ ಕ್ರಮಗಳನ್ನು ಪೂರೈಸಿ ವರದಿಯನ್ನು ಕೆಸಿಝಡ್‌ಎಂಎ ಗೆ ಕಳುಹಿಸಿದೆ. ಆದರೆ ನಿಗದಿತ ಸಮಯದೊಳಗೆ ಸಭೆ ನಡೆಸಿ ಅನುಮತಿ ನೀಡದೇ ಅನಗತ್ಯ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಇದರಿಂದ ಮರಳು ಕೊರತೆ ಉಂಟಾಗಿ ನಿರ್ಮಾಣ ಚಟುವಟಿಕೆಗಳು ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ.

ದುಬಾರಿ ದರದಿಂದಾಗಿ ಜನಸಾಮಾನ್ಯರಿಗೆ ಮರಳು ಖರೀದಿಸಲೂ ಆಗುತ್ತಿಲ್ಲ. ಜಿಲ್ಲೆಯ ಜನತೆಯ ಈ ಸಂಕಷ್ಟಕ್ಕೆ ರಾಜ್ಯ ಸರಕಾರದ ನಿರ್ಲಕ್ಷ್ಯ, ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಬೇಜವಾಬ್ದಾರಿತನವೇ ನೇರ ಕಾರಣ. ಕೂಡಲೇ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಆಗ್ರಹಿಸಿದರು.

MLA Veda Vyasa Kamath Allegations Against Congress government

ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಇಷ್ಟು ದಿನಗಳಾದರೂ, ಕದ್ರಿ ಪಾರ್ಕ್ ಹೊರಗಿರುವ ಮಳಿಗೆಗಳ ಬಗ್ಗೆ ಈವರೆಗೂ ಯಾವುದೇ ನಿರ್ಧಾರ ಕೈಗೊಳ್ಳದ್ದು ಸ್ವಜನ ಪಕ್ಷಪಾತದ ಅನುಮಾನ ಮೂಡಿಸಿದೆ. ಕಾಂಗ್ರೆಸಿಗರು ಅಧಿಕಾರ ದುರುಪಯೋಗಪಡಿಸಿ ತಮ್ಮ ಆಪ್ತ ಬಳಗದ ಉದ್ದಿಮೆದಾರರಿಗೆ ಮಳಿಗೆಗಳನ್ನು ದೊರಕಿಸಿ ಕೊಡುವ ನಿಟ್ಟಿನಲ್ಲಿ ಉದ್ದೇಶಪೂರ್ವಕವಾಗಿ ವಿಳಂಬ ನೀತಿ ಅನುಸರಿಸುತ್ತಿದೆ ಎಂದರು.

ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಂಶಯ ಮೂಡಿದೆ. ಈ ವಿಚಾರದಲ್ಲಿ ನ್ಯಾಯವಾಗಿ ದುಡಿಯುವ ಸಾರ್ವಜನಿಕರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಅತಿ ಶೀಘ್ರದಲ್ಲಿ ಕಾನೂನು ಬದ್ಧವಾಗಿ ಇಲ್ಲಿನ ಮಳಿಗೆಗಳ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳಬೇಕು ಮತ್ತು ಯಾವುದೇ ಸ್ವಜನಪಕ್ಷಪಾತ ಅನುಸರಿಸಬಾರದು ಎಂದು ವೇದವ್ಯಾಸ ಕಾಮತ್ ಹೇಳಿದರು.

ಮಂಗಳೂರಿನ ಪ್ರಮುಖ ಸರ್ಕಾರಿ ಆಸ್ಪತ್ರೆ ವೆನ್ಲಾಕ್ ನಲ್ಲಿ ಒಟ್ಟು 23 ಡಯಾಲಿಸಿಸ್ ಯಂತ್ರಗಳಿದ್ದು ಅದರಲ್ಲಿ 9 ಯಂತ್ರಗಳು ಕೆಟ್ಟು ಹೋಗಿ 6 ತಿಂಗಳುಗಳೇ ಕಳೆದಿದೆ. ಅದಕ್ಕೆ ಸರಿಯಾಗಿ ಸರ್ಕಾರ ಅಸ್ತಿತ್ವಕ್ಕೆ ಬಂದು 6 ತಿಂಗಳುಗಳು ಕಳೆಯುತ್ತಿದ್ದರೂ ಇದರ ದುರಸ್ಥಿಯಾಗಿಲ್ಲ. ಇದರಿಂದಾಗಿ ರೋಗಿಗಳಿಗೆ ಅಗತ್ಯಕ್ಕನುಗುಣವಾಗಿ ಬೇಡಿಕೆ ಇರುವಷ್ಟು ಡಯಾಲಿಸಿಸ್ ಯಂತ್ರ ಇಲ್ಲದೇ ವೈದ್ಯರು ಸಹ ಅಸಹಾಯಕ ಸ್ಥಿತಿಗೆ ತಲುಪಿದ್ದಾರೆ.

ಈ ಬಗ್ಗೆ ತುರ್ತಾಗಿ ಗಮನ ಹರಿಸಬೇಕಿದ್ದ ಸರ್ಕಾರ ತನ್ನ ನಿರ್ಲಕ್ಷ್ಯ ಧೋರಣೆಯಿಂದಾಗಿ ಸಾಕಷ್ಟು ರೋಗಿಗಳು ಪರದಾಡುವಂತಾಗಿದೆ. ಕೆಟ್ಟು ಹೋಗಿರುವ ಯಂತ್ರದ ಬದಲಿಗೆ ಹೊಸ ಯಂತ್ರ ಖರೀದಿಸಿ ನೀಡಲಾಗುವುದು ಎಂದು ಸರ್ಕಾರ ವೆನ್ಲಾಕ್ ಆಸ್ಪತ್ರೆಗೆ ಭರವಸೆ ನೀಡಿದ್ದರೂ ಅದು ಕೇವಲ ಈವರೆಗೆ ಭರವಸೆಯಾಗಿಯೇ ಉಳಿದಿದೆ. ಸರ್ಕಾರ ಕೂಡಲೇ ಈ ಬಗ್ಗೆ ಗಮನಹರಿಸಿ ರೋಗಿಗಳ ಹಿತದೃಷ್ಟಿಯನ್ನು ಕಾಪಾಡಬೇಕೆಂದು ವೇದವ್ಯಾಸ ಕಾಮತ್ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಮಹಾತ್ಮ ಗಾಂಧಿ ನಗರ ವಿಕಾಸ್ ಯೋಜನೆಯಡಿಯಲ್ಲಿ 125 ಕೋಟಿ ಅನುದಾನವನ್ನು ತರಲಾಗಿತ್ತು. ಮಳೆ ಹಾನಿಯಿಂದ ಕ್ಷೇತ್ರದ ಅಲ್ಲಲ್ಲಿ ರಸ್ತೆ, ಡ್ರೈನೇಜ್ ನಲ್ಲಿ ಸಮಸ್ಯೆ ಉಂಟಾಗಿದ್ದರಿಂದ ಮೂಲಭೂತ ಸೌಕರ್ಯ ಮರು ಕಲ್ಪಿಸಲು 20 ಕೋಟಿ ವಿಶೇಷ ಅನುದಾನವನ್ನು ತರಲಾಗಿತ್ತು. ಪ್ರಸ್ತುತ ಈ ಎಲ್ಲ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಇಂದಿನ ಸರಕಾರ ಅನುದಾನಗಳನ್ನು ತಡೆಹಿಡಿದ ಪರಿಣಾಮ ಕ್ಷೇತ್ರದ ರಸ್ತೆಗಳ, ಚರಂಡಿಗಳ ಕಾಮಗಾರಿಗಳು ಅರ್ಧಕ್ಕೆ ನಿಂತು ಜನಸಾಮಾನ್ಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ವಿವರಿಸಿದರು.

ಇದಲ್ಲದೇ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಮೃತ ಯೋಜನೆ ಅಡಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆಗೆ ಕೇಂದ್ರ ಸರಕಾರ ಹಾಗೂ ರಾಜ್ಯ ಸರ್ಕಾರ ವತಿಯಿಂದ ಹಲವು ಅನುದಾನಗಳನ್ನು ತರಲಾಗಿತ್ತು. ಕುಡ್ಸೆಂಪ್ ಮೂಲಕ 200 ಕೋಟಿಗೂ ಹೆಚ್ಚು ಅನುದಾನ ತರಲಾಗಿದ್ದರೂ ಪ್ರಸ್ತುತ ಡ್ರೈನೇಜ್ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಈ ಬಗ್ಗೆ ಇಲಾಖೆಗೆ ಹಾಗೂ ಸರ್ಕಾರಕ್ಕೆ ಅನೇಕ ಬಾರಿ ಮನವಿ ಮಾಡಿದರೂ ಇನ್ನೂ ಸಹ ಯಾವುದೇ ಪ್ರಗತಿ ಕಂಡಿಲ್ಲ ಎಂದರು.

ಪಾಲಿಕೆ ವ್ಯಾಪ್ತಿಯಲ್ಲಿ 792 ಕೋಟಿ ರೂಪಾಯಿಯ ಕುಡಿಯುವ ನೀರಿನ ಜಲಸಿರಿ ಯೋಜನೆ ಕಾಮಗಾರಿ ಅರ್ಧಕ್ಕೆ ನಿಂತಿದೆ.ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು 6 ತಿಂಗಳಾದರೂ ಕಾಮಗಾರಿಗೆ ಅಗತ್ಯವಿರುವ ಅನುದಾನಕ್ಕೆ ಸರ್ಕಾರದಿಂದ ಸೂಕ್ತ ಸ್ಪಂದನೆಯೇ ದೊರಕುತ್ತಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಅಗತ್ಯವಿರುವ ಯಾವುದೇ ಹೊಸ ಕಾಮಗಾರಿಗೆ ಅನುದಾನ ಸಿಗುತ್ತಿಲ್ಲ. ಈ ಹಿಂದಿನ ಕಾಮಗಾರಿಗಳಿಗೆ ಈಗಾಗಲೇ ನಿಯೋಜನೆಗೊಂಡ ಅನುದಾನವನ್ನೂ ಸಹ ಬಿಡುಗಡೆ ಮಾಡುತ್ತಿಲ್ಲ. ಹೀಗಾದರೆ ಕ್ಷೇತ್ರದ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಆರೋಪಿಸಿದರು.

ಸರ್ಕಾರ ಕರಾವಳಿಯಲ್ಲಿ ಅಭಿವೃದ್ಧಿಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದೆ ಹಾಗೂ ಇಲ್ಲಿನ ಜನರು ಬಿಜೆಪಿಯ ಶಾಸಕರನ್ನು ಗೆಲ್ಲಿಸಿದ್ದಕ್ಕಾಗಿ ಸರ್ಕಾರ ಈ ರೀತಿಯಾಗಿ ವರ್ತಿಸುತ್ತಿದೆ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತಿದೆ. ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದಾಗ ಇದರಲ್ಲಿ ಏನೋ ಷಡ್ಯಂತ್ರ ಇರುವ ಹಾಗೆ ಅನುಮಾನ ಮೂಡುತ್ತಿದೆ. ಹಾಗಾಗಿ ಈ ಕೂಡಲೇ ಎಲ್ಲಾ ಅನುದಾನಗಳನ್ನು ಬಿಡುಗಡೆಗೊಳಿಸಿ ಕಾಮಗಾರಿ ಮುಂದುವರಿಸಲು ಆದೇಶ ನೀಡಬೇಕು ಕಾಮತ್ ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+