ಮಂಗಳೂರು : ಶಿಕಾರಿಗೆ ಹೋಗಿದ್ದ ಯುವಕರು ಶವವಾಗಿ ಪತ್ತೆ
ಮಂಗಳೂರು, ಮಾರ್ಚ್ 22 : ಬೇಟೆಗೆಂದು ತೆರಳಿ ಕಾಡಿನಲ್ಲಿ ನಾಪತ್ತೆಯಾಗಿದ್ದ ಗೆಳೆಯರಿಬ್ಬರ ಮೃತದೇಹ ಪತ್ತೆಯಾಗಿದೆ. ಕಾಡಿನಲ್ಲಿ ವಿದ್ಯುತ್ ತಂತಿ ತಗುಲಿ ಇಬ್ಬರು ಮೃತ ಪಟ್ಟಿದ್ದಾರೆ.
ಮೂಡುಬಿದ್ರೆ ನಿವಾಸಿಗಳಾದ ಪ್ರವೀಣ್ ತೌರೋ (33) ಹಾಗೂ ಗ್ರೆಷನ್ (32) ಕರಿಂಜೆ ಕಾಡಿಗೆ ಸೋಮವಾರ ರಾತ್ರಿ ತೆರಳಿದ್ದರು. ಬೇಟೆಗೆ ತೆರಳಿದ್ದ ಯುವಕರು ಆ ಬಳಿಕ ಮನೆಗೆ ವಾಪಸ್ ಆಗದೆ ನಾಪತ್ತೆಯಾಗಿದ್ದರು.
ಕಾಡಿನಂಚಿನ ತೋಟಗಳಲ್ಲಿ ಕಾಡು ಪ್ರಾಣಿಗಳು ತೋಟ ಪ್ರವೇಶಿಸದಂತೆ ಅಕ್ರಮವಾಗಿ ಅಳವಡಿಸಲಾಗಿದ್ದ ವಿದ್ಯುತ್ ತಂತಿ ಸ್ಪರ್ಶಿಸಿದ ಪರಿಣಾಮ ಪ್ರವೀಣ್ ತೌರೋ, ಗ್ರೆಷನ್ ಮೃತಪಟ್ಟಿದ್ದಾರೆ.

ಬೇಟೆಗೆ ತೆರಳುವ ಸಂದರ್ಭದಲ್ಲಿ ಬಳಸಿದ್ದ ಜೀಪ್ ಕಾಡಿನಂಚಿನಲ್ಲಿ ಪತ್ತೆಯಾಗಿತ್ತು. ಆದರೆ, ಕಾಡಿಗೆ ತೆರಳಿದ್ದ ಯುವಕು ಏನಾದರು? ಎಂಬ ಮಾಹಿತಿ ಕುಟುಂಬ ಸದಸ್ಯರಿಗೆ ಲಭ್ಯವಾಗಿರಲಿಲ್ಲ. ಇಬ್ಬರ ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು.
ಯುವಕರು ನಾಪತ್ತೆಯಾದ ಕುರಿತು ಮೂಡುಬಿದ್ರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಾಡಿನಲ್ಲಿ ನಾಮತ್ತೆಯಾಗಿರುವ ಯುವಕರಿಗಾಗಿ ಇಂದು ಮುಂಜಾನೆ ಮೂಡಬಿದ್ರೆ ಪೊಲೀಸರು ಮತ್ತು ಸ್ಥಳೀಯರು ಹುಡುಕಾಟ ಆರಂಭಿಸಿದ್ದರು.
ಸಂಜೆಯ ವೇಳೆಗೆ ಕಾಡಂಚಿನ ತೋಟದ ಪಕ್ಕ ಪ್ರವೀಣ್ ತೌರೋ ಹಾಗು ಗ್ರೆಷನ್ ಅವರ ಮೃತದೇಹ ಕರಟಿಹೋದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೃತ ಪಟ್ಟಿರುವ ಪ್ರವೀಣ್ ತೌರೋ ಟೆಂಪೊ ಚಾಲಕನಾಗಿದ್ದ. ಮೂಡಬಿದ್ರೆಯಲ್ಲಿ ಸರ್ವಿಸ್ ಸ್ಟೇಷನ್ ಮಾಲಕನಾಗಿರುವ ಗ್ರೇಷನ್ ವಿವಾಹಿತರಾಗಿದ್ದು ಓರ್ವ ಪುತ್ರಿ ಇದ್ದಾಳೆ.












Click it and Unblock the Notifications