ಫಾನಿ ಚಂಡಮಾರುತ ಎಫೆಕ್ಟ್:ಕರಾವಳಿ, ಹಳೆ ಮೈಸೂರು ಭಾಗದಲ್ಲಿ ಮುಂದಿನ 3 ದಿನ ಭಾರೀ ಮಳೆ ಸಂಭವ
ಮಂಗಳೂರು, ಏಪ್ರಿಲ್ 27:ಹಿಂದೂ ಮಹಾಸಾಗರ ಸೇರಿದಂತೆ ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಚಂಡಮಾರುತದ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಹವಾಮಾನ ಇಲಾಖೆ ನೀಡಿರುವ ಎಚ್ಚರಿಕೆ ಅನ್ವಯ ಏಪ್ರಿಲ್ 29 ಮತ್ತು 30ಕ್ಕೆ ಕೇರಳದ 4 ಜಿಲ್ಲೆಗಳಾದ ಎರ್ನಾಕುಳಂ, ಇಡುಕ್ಕಿ, ತ್ರಿಶೂರ್, ಮಲಪ್ಪುರಂ, ವಯನಾಡು ಜಿಲ್ಲೆಗಳಲ್ಲಿ ಚಂಡಮಾರುತ ಪ್ರಭಾವ ಬೀರಲಿದೆ.
ಫಾನಿ ಚಂಡಮಾರುತದ ಪ್ರಭಾವ ರಾಜ್ಯಕ್ಕೂ ತಟ್ಟಲಿದ್ದು, ಏಪ್ರಿಲ್ 29 ಮತ್ತು 30ರ ನಂತರ ಮೇ 2ರವರೆಗೂ ಹಳೆ ಮೈಸೂರು ಭಾಗದಲ್ಲಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಫಾನಿ ಚಂಡಮಾರುತದ ಪರಿಣಾಮವಾಗಿ ಕರ್ನಾಟಕದ ಕರಾವಳಿಯಲ್ಲಿ ಏಪ್ರಿಲ್ 29, 30ರಂದು ಗುಡುಗು, ಮಿಂಚು ಸಹಿತ ಬಿರುಗಾಳಿಯೊಂದಿಗೆ ಭಾರೀ ಮಳೆ ಸುರಿಯುವ ಸಂಭವವಿದೆ ಎಂದು ಭಾರತ ಹವಾಮಾನ ಎಚ್ಚರಿಸಿದೆ.

ಈ ಸಂದರ್ಭದಲ್ಲಿ ಪ್ರತಿ ಗಂಟೆಗೆ 40 ರಿಂದ 50ಕಿ.ಮೀ. ವೇಗದ ಗಾಳಿಯೊಂದಿಗೆ ಚಂಡಮಾರುತ ಬೀಸುವ ಸಾಧ್ಯತೆ ಇದ್ದು, ಜಿಲ್ಲೆಯ ಅಲ್ಲಲ್ಲಿ ಸಿಡಿಲು ಬಡಿಯುವ ಸಂಭವವೂ ಇದೆ. ಈ ಹಿನ್ನೆಲೆಯಲ್ಲಿ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ಮುಂದಿನ ಮೂರು ದಿನಗಳ ಕಾಲ ರಾಜ್ಯದಲ್ಲಿ ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ.












Click it and Unblock the Notifications