ಬಂಟ್ವಾಳ: ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿದ್ದ ವ್ಯಕ್ತಿ ಸಾವು
ಮಂಗಳೂರು, ಆಗಸ್ಟ್, 07: ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸಜಿಪ ಮೂಡದಲ್ಲಿ ಗುರುವಾರ ತಡರಾತ್ರಿ ದುಷ್ಕರ್ಮಿಗಳಿಂದ ಹಲ್ಲೆಗೆ ಒಳಗಾಗಿದ್ದ ನಾಸಿರ್ ಶುಕ್ರವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ.
ಮುಹಮ್ಮದ್ ಮುಸ್ತಫಾ ಮತ್ತು ನಾಸೀರ್ ಮೇಲೆ ಗುರುವಾರ ತಡರಾತ್ರಿ ಹಲ್ಲೆ ನಡೆದಿತ್ತು. ಮುಹಮ್ಮದ ಮುಸ್ತಫಾ ತನ್ನ ಸಂಬಂಧಿ ಮಹಿಳೆಯೋರ್ವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಊರಿಗೆ ಮರಳುತ್ತಿದ್ದರು. ನಾಸೀರ್ ಸಹ ಅದೇ ಗ್ರಾಮಕ್ಕೆ ಹಿಂದಿರುಗುತ್ತಿದ್ದು ಇಬ್ಬರೂ ಆಟೋ ಏರಿ ಮನೆಗೆ ಮರಳುತ್ತಿದ್ದರು.[ಪರಪುರುಷನ ತೆಕ್ಕೆಗೆ ಬಿದ್ದ ಪತ್ನಿಯನ್ನು ಕೊಚ್ಚಿ ಕೊಂದ ಪತಿ]

ಈ ವೇಳೆ ಆಟೋ ಸಜೀಪ ಮೂಡ ಶಿವ ಮಂದಿರದ ಬಳಿ ಬರುತ್ತಿದ್ದಂತೆ ಬೈಕ್‍ನಲ್ಲಿ ಬಂದಿದ್ದ ಇಬ್ಬರು ರಿಕ್ಷಾ ತಡೆದು ಬೊಳ್ಳಾಯಿಗೆ ಹೋಗುವ ದಾರಿ ಕೇಳುವ ನಾಟಕವಾಡಿದ್ದಾರೆ. ಹಿಂದೆ ಮತ್ತೊಂದು ಬೈಕ್‍ನಲ್ಲಿ ಬಂದಿದ್ದ ಇಬ್ಬರು ನಾಸೀರ್ ಮತ್ತು ಮುಸ್ತಫಾರನ್ನು ಆಟೋದಿಂದ ಎಳೆದು ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಂತರ ತಮ್ಮ ಬಳಿ ಇದ್ದ ಮಾರಕಾಸ್ತ್ರಗಳಿಂದ ತೀವ್ರ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
ನಂತರ ಸ್ಥಳೀಯ ಅನ್ವರ್ ಗಾಯಾಳುಗಳನ್ನು ಆಸ್ಪತ್ರಗೆ ದಾಖಲಿಸದ್ದರು. ಆದರೆ ನಾಸೀರ್ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಮೃತಪಟ್ಟಿದ್ದಾರೆ. ಗಾಯಾಳು ಮುಹಮ್ಮದ್ ಮುಸ್ತಫಾ ತೀವ್ರ ನಿಗಾ ಘಟಕದಲ್ಲಿದ್ದು ಅವರ ಪರಿಸ್ಥಿತಿಯೂ ಗಂಭೀರವಾಗಿದೆ.












Click it and Unblock the Notifications