ಕರಾವಳಿ-ಉತ್ತರ ಕರ್ನಾಟಕ ಸಂಪರ್ಕಿಸುವ ರೈಲು ವೇಳಾಪಟ್ಟಿ ಬದಲಾವಣೆ?
ಮಂಗಳೂರು, ಮಾರ್ಚ್ 05: ಉತ್ತರ ಕರ್ನಾಟಕ ಮತ್ತು ಕರಾವಳಿ ಕರ್ನಾಟಕ ಸಂಪರ್ಕಿಸುವ ಪ್ರಮುಖ ರೈಲಿನ ವೇಳಾಪಟ್ಟಿ ಬದಲಾವಣೆಯಾಗುವ ನಿರೀಕ್ಷೆ ಇದೆ. ಈ ಹಿಂದಿನ ವೇಳಾಪಟ್ಟಿಯಂತೆಯೇ ಮಂಗಳೂರು-ವಿಜಯಪುರ ಪ್ರತಿದಿನದ ಎಕ್ಸ್‌ಪ್ರೆಸ್ ರೈಲನ್ನು ಓಡಿಸಬೇಕು ಎಂದು ಒತ್ತಾಯಿಸಲಾಗುತ್ತಿದೆ. ಪ್ರಯಾಣಿಕರ ಬೇಡಿಕೆಯಂತೆ ಕೆಲವು ದಿನಗಳ ಹಿಂದೆ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿತ್ತು.
ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಈ ಕುರಿತು ಹುಬ್ಬಳ್ಳಿಯಲ್ಲಿ ಪ್ರಧಾನ ಕಛೇರಿ ಹೊಂದಿರುವ ನೈಋತ್ಯ ರೈಲ್ವೆ ಜನರಲ್ ಮ್ಯಾನೇಜರ್‌ಗೆ ಪತ್ರವನ್ನು ಬರೆದಿದ್ದಾರೆ. 10-10/2023ರಂದು ಕಛೇರಿ ಹೊರಡಿಸಿದ ಆದೇಶವನ್ನು ಉಲ್ಲೇಖಿಸಿದ್ದಾರೆ.

ಈ ಪತ್ರ ರೈಲು ಸಂಖ್ಯೆ 07377/ 78 ವಿಜಯಪುರ-ಮಂಗಳೂರು ರೈಲಿನ ಹಿಂದಿನ ವೇಳಾಪಟ್ಟಿಯನ್ನು ಜಾರಿಗೊಳಿಸುವ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲಾ ರೈಲು ಬಳಕೆದಾರರು ಸಹ ಸಾಮಾಜಿಕ ಜಾಲತಾಣದಲ್ಲಿ ರೈಲು ವೇಳಾಪಟ್ಟಿ ಬದಲಾವಣೆಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಮುಂದೆ ಬೇಡಿಕೆ ಇಟ್ಟಿದ್ದಾರೆ.
ಸಂಸದರ ಪತ್ರದ ವಿವರ: ಹಲವು ಬಾರಿ ಮನವಿ ಸಲ್ಲಿಕೆ ಮಾಡಿದರೂ ಸಹ ವಿಜಯಪುರ-ಮಂಗಳೂರು ರೈಲು ಇನ್ನೂ ತತ್ಕಾಲ್ ಮಾದರಿಯಲ್ಲಿಯೇ ಸಂಚಾರವನ್ನು ನಡೆಸುತ್ತಿದೆ, ಇದು ಸಾಮಾನ್ಯ ಜನರಿಗೆ ಹೊರೆಯಾಗಿದೆ. ಉತ್ತರ ಕರ್ನಾಟಕ ಭಾಗದಿಂದ ಮಂಗಳೂರು ಕಡೆಗೆ ಸಾಗುವ ಏಕೈಕ ರೈಲು ಇದಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಹುಬ್ಬಳ್ಳಿಯಿಂದಲೂ ಮಂಗಳೂರಿಗೆ ನೇರ ರೈಲುಗಳಿಲ್ಲ. ಕಟ್ಟಡ ಕಾರ್ಮಿಕರು ಕುಕ್ಕೆ ಸುಬ್ರಮಣ್ಯ, ಧರ್ಮಸ್ಥಳದಂತಹ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುತ್ತಾರೆ. ಅಂತಹ ಜನರು ಈ ರೈಲಿನ ಮೇಲೆ ಹೆಚ್ಚಾಗಿ ಅವಲಂಬಿತರಾಗಿದ್ದಾರೆ. ಅಲ್ಲದೇ ಮಣಿಪಾಲ್‌ನಲ್ಲಿ ಆರೋಗ್ಯ ಸೇವೆ ಪಡೆಯಲು ಹಲವಾರು ಜನರು ಈ ರೈಲಿನ ಮೂಲಕ ಸಾಗುತ್ತಾರೆ ಎಂದು ವಿವರಿಸಲಾಗಿದೆ.
ಈ ರೈಲು ಮೊದಲು ಮಂಗಳೂರು ಜಂಕ್ಷನ್‌ನಿಂದ ಸಂಜೆ ತಡವಾಗಿ ಹೊರಡುತ್ತಿತ್ತು. ಇದು ಎಲ್ಲರಿಗೂ ಅನುಕೂಲವಾಗಿತ್ತು. ರೈಲು ತಡವಾಗಿ ಹೊರಡುವುದರಿಂದ ಹಲವಾರು ಅನುಕೂಲಗಳಿವೆ ಎಂದು ಪತ್ರದಲ್ಲಿ ವಿವರಣೆ ಕೊಡಲಾಗಿದೆ.
* ಮಣಿಪಾಲ/ ಮಂಗಳೂರಿಗೆ ಆರೋಗ್ಯ ಸೇವೆ ಪಡೆಯಲು ಹೋಗುವ ಜನರು ಅಲ್ಲಿ ಉಳಿಯುವ ತೊಂದರೆ ಇಲ್ಲದೇ ರೈಲಿನಲ್ಲಿ ಅಂದೇ ವಾಪಸ್ ಆಗಬಹುದಿತ್ತು.
* ಉತ್ತರ ಕರ್ನಾಟಕ ಭಾಗದ ಹಲವು ವಿದ್ಯಾರ್ಥಿಗಳು ಮಂಗಳೂರು/ ಮಣಿಪಾಲ್‌ನಿಂದ ಸಂಜೆ ಈ ರೈಲು ಮೂಲಕ ಉತ್ತರ ಕರ್ನಾಟಕ ಭಾಗಕ್ಕೆ ವಾಪಸ್ ಆಗಲು ಅನುಕೂಲವಿತ್ತು.
* ಹುಬ್ಬಳ್ಳಿ ಮತ್ತು ಇತರ ಭಾಗದ ಭಕ್ತರು ಧರ್ಮಸ್ಥಳ/ ಕುಕ್ಕೆ ಸುಬ್ರಮಣ್ಯಕ್ಕೆ ಭೇಟಿ ನೀಡಿ, ಅದೇ ದಿನ ರೈಲಿನ ಮೂಲಕ ವಾಪಸ್ ಆಗಲು ಈ ರೈಲು ವೇಳಾಪಟ್ಟಿ ಅನುಕೂಲ ಮಾಡಿಕೊಟ್ಟಿತ್ತು.
* ರೈಲು ತಡವಾಗಿ ಹೊರಡುವುದರಿಂದ ಅರಸೀಕರೆ ಜಂಕ್ಷನ್‌ನಲ್ಲಿ ಬೇರೆ ರೈಲು ಹೋಗುವ ತನಕ ಕಾಯುವುದು ತಪ್ಪಲಿದೆ.
* ರೈಲು ನಂಬರ್ 07378 ಹುಬ್ಬಳ್ಳಿಗೆ 4.30 ಮತ್ತು ವಿಜಯಪುರಕ್ಕೆ 10 ಗಂಟೆಗೆ ತಲುಪುವುದರಿಂದ ಎಲ್ಲಾ ನಗರದ ಜನರಿಗೆ ಅನುಕೂಲವಾಗಲಿದೆ. ಹುಬ್ಬಳ್ಳಿ & ಗದಗ ಭಾಗದ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿಯೂ ದಯವಿಟ್ಟು ರೈಲು ಸಂಖ್ಯೆ 07378 ಮಂಗಳೂರು ಸೆಂಟ್ರಲ್-ವಿಜಯಪುರ ಎಕ್ಸ್‌ಪ್ರೆಸ್ ರೈಲಿನ ಸಮಯವನ್ನು ಮಂಗಳೂರು ಸೆಂಟ್ರಲ್‌ನಿಂದ ಮಧ್ಯಾಹ್ನ 2:35ರ ಬದಲು ಸಂಜೆ 4:30ಕ್ಕೆ ಬಿಡುವಂತೆ ಬದಲಾವಣೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ವಿನಂತಿಸುತ್ತೇವೆ ಎಂದು ಬೇಡಿಕೆ ಇಡಲಾಗಿದೆ.












Click it and Unblock the Notifications