ಮಂಗಳೂರು ವಿವಿ ಗಣೇಶೋತ್ಸವ ವಿವಾದಕ್ಕೆ ಸಂಘಪರಿವಾರ ಎಂಟ್ರಿ- ಹಬ್ಬ ಮಾಡಿಯೇ ಸಿದ್ಧ ಎಂದ ಪ್ರಭಾಕರ್ ಭಟ್
ಮಂಗಳೂರು ಸೆಪ್ಟೆಂಬರ್ 10: ಮಂಗಳೂರು ವಿಶ್ವವಿದ್ಯಾಲಯ ಗಣೇಶೋತ್ಸವ ಆಚರಣೆ ವಿವಾದಕ್ಕೆ ಇದೀಗ ಸಂಘಪರಿವಾರದ ಪ್ರವೇಶಿಸಿದೆ. ಮಂಗಳೂರು ವಿವಿ ಉಪಕುಲಪತಿ ನಡೆ ಖಂಡಿಸಿ ಮಂಗಳೂರಿನ ಅಸೈಗೋಳಿ ಮೈದಾನದಲ್ಲಿ ಭಜನೆ ಮೂಲಕ ಪ್ರತಿಭಟನೆ ಮಾಡಲಾಗಿದೆ.
ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಸೇರಿ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ಬಿಜೆಪಿ, ಎಬಿವಿಪಿ, ಸಂಘ ಪರಿವಾರದ ಹಲವು ಸಂಘಟನೆಗಳು ಜೊತೆಯಾಗಿದೆ. ದೇವರ ಪ್ರಾರ್ಥನೆ, ಭಜನೆ ಮೂಲಕ ವಿವಿಯ ಮಂಗಳಾ ಆಡಿಟೋರಿಯಂನಲ್ಲಿ ಗಣೇಶೋತ್ಸವ ಆಚರಣೆಗೆ ನಿರಾಕರಿಸಿದ್ದ ವಿವಿ ಉಪಕುಲಪತಿ ಜಯರಾಜ್ ಆಮೀನ್ ನಡೆಯನ್ನು ಸಂಘಟನೆಗಳು ಖಂಡಿಸಿದೆ.

ಪ್ರತಿಭಟನಾ ಸಭೆಯಲ್ಲಿ 'ನಾವು ಸೆ.19ರಂದು ಮಂಗಳೂರು ವಿವಿಯಲ್ಲಿ ಗಣೇಶನ ಪ್ರತಿಷ್ಟಾಪನೆ ಮಾಡಿಯೇ ಮಾಡ್ತೇವೆ' ಎಂದು ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಸವಾಲೆಸಿದಿದ್ದಾರೆ.
ನಮಗೆ ಈಗ ಸಮಸ್ಯೆ ಬಂದಿರುವುದು ಕಾಂಗ್ರೆಸ್‌ನಿಂದ. ಕಾಂಗ್ರೆಸ್ ನಮ್ಮನ್ನು ನಿರ್ವೀರ್ಯರನ್ನಾಗಿ, ಹೇಡಿಗಳನ್ನಾಗಿ ಮಾಡಿತು. ಈಗಲೂ ಪಾಕಿಸ್ತಾನ ಜಿಂದಾಬಾದ್ ಹೇಳುವವರು ಇದಾರೆ. ಅವರಿಗೆ ಕುಮ್ಮಕ್ಕು ಕೊಡೋರು ಇದಾರೆ, ಕಾಂಗ್ರೆಸ್ ಅವರಿಗೆ ಬೆಂಬಲ ಕೊಡುತ್ತಿದ್ದಾರೆ. ಸ್ಟಾಲಿನ್ ಪುತ್ರ ಉದಯನಿಧಿ ಎಂಬ ಮಂತ್ರಿ ತನ್ನ ಕಂತ್ರಿ ಬುದ್ಧಿ ತೋರಿಸಿದ. ಅದರ ಬಗ್ಗೆ ಈ ಕಾಂಗ್ರೆಸ್ ಏನೂ ಮಾತನಾಡಲ್ಲ, ಅದರ ಪರವಾಗಿ ಇವರು ನಿಂತರು ಎಂದರು.
ಇನ್ನೊಬ್ಬ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಇನ್ನೊಬ್ಬ ಗೃಹಮಂತ್ರಿ. ಇಬ್ಬರೂ ಹಿಂದೂ ಧರ್ಮದ ಬಗ್ಗೆ ಮಾತನಾಡ್ತಾರೆ. ಹೆಸರು ಪರಮೇಶ್ವರ್, ಹೆಸರಲ್ಲೇ ಈಶ್ವರ ಇದೆ ಮಾರ್ರೆ. ಗಣೇಶ ಎಲ್ಲ ಅಡ್ಡಿಗಳ ನಿವಾರಿಸುವ ಮೊಟ್ಟ ಮೊದಲ ದೇವರು. ಅವನು ವಿಘ್ನ ನಿವಾರಕ, ಸರ್ವ ವ್ಯಾಪಿ ಇರೋನು ಗಣೇಶ. ಮುಸ್ಲಿಮರೇ ಇರೋ ಇಂಡೋನೇಷ್ಯಾದ ನೋಟಿನ ಮೇಲೆ ಗಣೇಶನ ಚಿತ್ರ ಇದೆ. ಇಲ್ಲೊಬ್ಬರು ಅಮೀನರಿದ್ದಾರೆ, ಅವರ ಹೆಸರು ಜಯರಾಜ್ ಎಂದು ಮಂಗಳೂರು ವಿವಿ ಉಪಕುಲಪತಿ ವಿರುದ್ಧ ಪ್ರಭಾಕರ್ ಭಟ್ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ನಾವು ಹೊಸತಾಗಿ ವಿವಿಯಲ್ಲಿ ಗಣಪತಿ ಇಡಿ ಅಂತ ಹೇಳುತ್ತಿಲ್ಲ. ಮಂಗಳಾ ಆಡಿಟೋರಿಯಂನಲ್ಲೇ ಗಣಪತಿ ಇಟ್ಟರೆ ಇಡೀ ವಿವಿಗೆ ಒಳ್ಳೆದಾಗುತ್ತದೆ. ಸ್ವಲ್ಪ ಇದರ ಹಿಂದೆ ನಮ್ಮ ಉಳ್ಳಾಲದ ಶಾಸಕರು ಇದ್ದಾರೆ. ಅವರು ನಮ್ಮ ದೇವಸ್ಥಾನಕ್ಕೆಲ್ಲಾ ಹೋಗುತ್ತಾರೆ. ನಾಡಿದ್ದು ಗಣೇಶೋತ್ಸವಕ್ಕೂ ಹೋಗ್ತಾರೆ ಎಂದು ಶಾಸಕ, ಸ್ಪೀಕರ್ ಖಾದರ್ ವಿರುದ್ಧವೂ ಕಲ್ಲಡ್ಕ ಭಟ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಣೇಶನ ಹೆಸರಿನಲ್ಲಿ ರಾಜಕೀಯ ಮಾಡಬೇಡಿ. ಎಲ್ಲಾ ಜನರು ಒಟ್ಟಾಗಿ ದೇಶಕ್ಕೋಸ್ಕರ ಗಣೇಶನ ಆರಾಧನೆ ಮಾಡಿದರು. ಈಗ ಅವರು ಸ್ಪೀಕರ್, ಗಣೇಶನ ಅಲ್ಲೇ ಇಡಿ ಅಂತ ಅವರು ಹೇಳಬೇಕು. ನಾವು ಸೆ.19ರಂದು ಗಣೇಶನ ಪ್ರತಿಷ್ಟಾಪನೆ ಮಾಡಿಯೇ ಮಾಡುತ್ತೇವೆ. ಅದನ್ನು ಯಾರು ಬೇಡ ಅಂದರೂ ವಿವಿಯ ಮಂಗಳಾ ಆಡಿಟೋರಿಯಂನಲ್ಲಿ ಗಣೇಶೋತ್ಸವ ಆಗುತ್ತದೆ. ಅದಕ್ಕೆ ವಿವಿಯ ಅಮೀನರು ಹಾಗೂ ರಾಜ್ಯದ ಅಮೀನರಾದ ಸ್ಪೀಕರ್ ಕೂಡ ಬೆಂಬಲ ಕೊಡಬೇಕು ಎಂದು ಹೇಳಿದರು.
ಉಳ್ಳಾಲದಲ್ಲಿ ಹಿಂದೂಗಳ ಸಂಖ್ಯೆ ಗೊತ್ತಿಲ್ಲದೇ ಕಡಿಮೆಯಾಗ್ತಿದೆ. ಕಡಿಮೆಯಾದ ಜಾಗಗಳೆಲ್ಲಾ ಪಾಕಿಸ್ತಾನ ಆಗ್ತಾ ಬಂತು. ಹಿಂದೂ ಸಮಾಜದಲ್ಲಿ ರಾಜಕೀಯಕ್ಕೋಸ್ಕರ ಹಿಂದೂ ವಿರೋಧಿಗಳಿಗೆ ಕೆಲವರು ಬೆಂಬಲ ಕೊಡುತ್ತಿದ್ದಾರೆ.
ಮಂಗಳೂರು ವಿವಿ ಸ್ಟ್ಯಾಂಡರ್ಡ್ ಕಡಿಮೆ ಆಗಿದೆ ಅಂತ ಸ್ಪೀಕರ್ ಖಾದರ್ ಹೇಳಿದ್ದಾರೆ. ಅದಕ್ಕಾಗಿ ಗಣೇಶನ ಕೂರಿಸಿ, ಆಗ ಮತ್ತೆ ಗುಣಮಟ್ಟ ಮೇಲೆ ಬರುತ್ತದೆ. ನಮಗೆ ಇನ್ನೂ ಧಾರ್ಮಿಕ ಸ್ವಾತಂತ್ರ್ಯ ಸಿಕ್ಕಿಲ್ಲ, ಅದಕ್ಕಾಗಿ ಈ ಹೋರಾಟ. ನಮ್ಮತನ ಉಳಿಸುವ ಉದ್ದೇಶದಿಂದ ಈ ಹೋರಾಟ. ಭಯೋತ್ಪಾದಕ ಮುಸಲ್ಮಾನರು, ಮತಾಂತರಿ ಕ್ರಿಶ್ಚಿಯನ್ನರ ಮಧ್ಯೆ ಹಿಂದೂ ಸಮಾಜ ಎದ್ದು ನಿಲ್ಲಬೇಕಿದೆ ಎಂದು ಪ್ರಭಾಕರ್ ಭಟ್ ಕರೆ ನೀಡಿದ್ದಾರೆ.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕಲ್ಲಡ್ಕ ಪ್ರಭಾಕರ ಭಟ್, ವಿವಿ ಒಳಗೆ ಹೊರಗಿನವರು ಬರೋದು ಬೇಡ ಅಂತಾ ವಿಸಿ ಹೇಳಿದ್ದಾರೆ. ಹೊರಗಿನವರು ಅಂದರೆ ಯಾರು? ನಾವೆಲ್ಲರೂ ಈ ದೇಶದಲ್ಲಿ ಇರುವವರೇ. ನಾವೆಲ್ಲರೂ ಗಣೇಶನ ಭಕ್ತರೇ ಅಲ್ವಾ? ಹೊರಗಿನವರು ಅಂದ್ರೆ ಯಾರು ?ಒಳಗಿರೋರು ಅಂದ್ರೆ ವಿದ್ಯಾರ್ಥಿಗಳು, ಅವರು ಬೇರೆ ಬೇರೆ ಜಾಗದಿಂದ ಬಂದವರು.
ಇಡೀ ರಾಜ್ಯದಿಂದ ಅಲ್ಲಿಗೆ ಜನ ಬಂದಿರ್ತಾರೆ, ಇದರಲ್ಲಿ ಹೊರಗಿನವರು ಅಂತ ಇಲ್ಲ. ನಾವೆಲ್ಲರೂ ವಿವಿ ಗಣೇಶೋತ್ಸವಕ್ಕೆ ಬಂದೇ ಬರ್ತೇವೆ, ಅಲ್ಲಿ ಇರ್ತೇವೆ, ಅದರಲ್ಲಿ ಎರಡು ಪ್ರಶ್ನೆ ಇಲ್ಲ. ಬಂದರೆ ಏನು ಮಾಡ್ತಾರೆ, ಅರೆಸ್ಟ್ ಮಾಡ್ತಾರಾ? ನಾನು ಬಂದೇ ಬರ್ತೇನೆ..ನನ್ನನ್ನ ಅರೆಸ್ಟ್ ಮಾಡಿದ್ರೆ ತುಂಬಾ ಸಂತೋಷ, ಅರೆಸ್ಟ್ ಆಗದೇ ತುಂಬಾ ಸಮಯ ಆಯ್ತು, ಅರೆಸ್ಟ್ ಮಾಡಿದರೆ ಮಾಡಲಿ, ಅದರಲ್ಲಿ ನನಗೆ ಗಡಿಬಿಡಿ ಇಲ್ಲ. ಗಣೇಶನ ಇದಕ್ಕೆ ಯಾರೂ ಬರಬಾರದು ಅನ್ನೋದು ಒಳ್ಳೆಯ ಮಾತಲ್ಲ ಎಂದು ಪ್ರಭಾಕರ್ ಭಟ್ ಹೇಳಿದರು.
ನಮ್ಮದು ಧರ್ಮಾಧರಿತ ದೇಶ, ಜಗತ್ತಿನ ಮೋಸ್ಟ್ ಸೆಕ್ಯುಲರ್ ಹಿಂದು. ನಿಮ್ಮ ದೇವರನ್ನು ನೀವು ಪೂಜೆ ಮಾಡಿ, ನಮ್ಮದಕ್ಕೆ ವಿರೋಧ ಬೇಡ. ಮಂಗಳೂರು ವಿವಿ ಎನ್ನುವುದು ಹಿಂದೂ ಮೆಜಾರಿಟಿ ಇರುವ ಒಂದು ಸಂಸ್ಥೆ. ಅಲ್ಲಿ ದೇವರನ್ನು ಪೂಜೆ ಮಾಡಬಾರದು ಅಂದ್ರೆ ಏನರ್ಥ. ಸೆಕ್ಯೂಲರ್ ಹೆಸರಿನಿಂದ ಹಿಂದೂಗಳ ಜೀವನಕ್ಕೆ ತೊಂದರೆ ಆಗಿದೆ. ಅವರ ಮಸೀದಿ, ಮನೆಯಲ್ಲಿ ಅಲ್ಲಾನನ್ನೇ ಪೂಜೆ ಮಾಡಲಿ. ಇದು ರಾಷ್ಟ್ರಧರ್ಮ, ಹಾಗಾಗಿ ಮುಸಲ್ಮಾನರು ಗೌರವ ಕೊಡಲಿ. ಎಲ್ಲರೂ ಒಟ್ಟಿಗೆ ಬದುಕಲು ನಾವು ಪರಸ್ಪರ ಗೌರವಿಸಬೇಕು. ವಿವಿಯಲ್ಲಿ ಅಲ್ಲಾನನ್ನ ಪೂಜೆ ಮಾಡುವುದಾದರೆ ಮಾಡಲಿ. ಇವರು ನಿನ್ನೆ ಕಮ್ಯುನಿಸ್ಟರಿಗೆ ಕಾರ್ಯಕ್ರಮ ಮಾಡಲು ವಿವಿಯಲ್ಲಿ ಅವಕಾಶ ಕೊಡುತ್ತಾರೆ. ಹಿಂದೂ ವಿರೋಧಿ ಮಾತನಾಡುವ ಶಂಸುಲ್ ಇಸ್ಲಾಂಗೆ ಅವಕಾಶ ಕೊಡಲಿಲ್ವಾ? ಎಂದು ಪ್ರಭಾಕರ್ ಭಟ್ ಪ್ರಶ್ನಿಸಿದ್ದಾರೆ.












Click it and Unblock the Notifications