Mangaluru: ದಿಗಂತ್ ಊರು ಬಿಡಲು ನಿಜವಾದ ಕಾರಣ ಬಯಲು
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಫರಂಗಿಪೇಟೆ ಕಿದಬೆಟ್ಟು ನಿವಾಸಿ ದಿಗಂತ್ ನಾಪತ್ತೆ ಪ್ರಕರಣದಲ್ಲಿ ಪೊಲೀಸರ ಶಂಕೆ ನಿಜವಾಗಿದೆ. ದಿಗಂತ್ ನಾಪತ್ತೆಯಾಗಿ ಹಲವಾರು ದಿನಗಳು ಕಳೆದರೂ ಕೂಡ ಆತ ಪತ್ತೆಯಾಗದ ಹಿನ್ನೆಲೆಯಲ್ಲಿ ಆತನ ಕುಟುಂಬಸ್ಥರು ಪೊಲೀಸರನ್ನು ದೂರಿದ್ದರು. ಈ ಪ್ರಕರಣದಲ್ಲಿ ಪೊಲೀಸರು ನಿರ್ಲಕ್ಷ್ಯ ತೋರುತ್ತಿದ್ದಾರೆಂದು ದಿಗಂತ್ ಕುಟುಂಬಸ್ಥರು ಹಾಗೂ ವಿವಿಧ ಸಂಘಟನೆಗಳು ಆರೋಪಿಸಿ ಬೀದಿಗಿಳಿದು ಹೋರಾಟ ಮಾಡಿದ್ದರು. ಆದರೀಗ ದಿಗಂತ್ ಪತ್ತೆಯಾಗಿದ್ದಾರೆ. ಆತ ಮನೆ ತೊರೆಯಲು ಕಾರಣ ಕೂಡ ಗೊತ್ತಾಗಿದೆ.
ಹೌದು.. ಫೆಬ್ರವರಿ 25ರಂದು ನಾಪತ್ತೆಯಾಗಿದ್ದ ದಿಗಂತ್ ಇದೀಗ ಪತ್ತೆಯಾಗಿದ್ದಾನೆ. ಮಗನನ್ನು ಕಂಡು ಪೋಷಕರು ನಿರಾಳರಾಗಿದ್ದಾರೆ. ಅಷ್ಟಕ್ಕೂ ದಿಗಂತ್ ಕಾಣೆಯಾಗಿದ್ದು ಯಾಕೆ? ಆತ ಎಲ್ಲಿ ಇದ್ದ? ಆತ ಸಿಕ್ಕಿದ್ದು ಹೇಗೆ? ಎಲ್ಲದರ ಬಗ್ಗೆ ಈಗ ವಿವರವಾಗಿ ತಿಳಿಯೋಣ.

ದಿಗಂತ್ ಮನೆ ತೊರೆದಿದ್ದು ಯಾಕೆ?
ದಿಗಂತ್ ದ್ವಿತೀಯ ಪಿಯುಸಿ ವಿದ್ಯಾರ್ಥಿ. ಮಾರ್ಚ್ 1ರಂದು ಆತ ಪರೀಕ್ಷೆಗೆ ಹಾಜರಾಗಬೇಕಿತ್ತು. ಪರೀಕ್ಷೆಗೆ ಹಾಜರಾಗಲು ಕಾಲೇಜಿಗೆ ಹೋಗಿ ಹಾಲ್ ಟಿಕೆಟ್ ಕೂಡ ತಂದಿದ್ದ ದಿಗಂತ್. ಆದರೆ ಫೆಬ್ರವರಿ 25ರಂದು ಸಂಜೆ ಯೋಗ ಶಾಲೆಗೆ ಹೋಗುವುದಾಗಿ ಹೇಳಿ ಯೋಗ ಶಾಲೆಗೂ ಹೋಗದೆ, ಮನೆಗೂ ಬಾರದೆ ನಾಪತ್ತೆಯಾಗಿದ್ದನು. ಇದರಿಂದ ಗಾಬರಿಗೊಂಡ ಕುಟುಂಬಸ್ಥರು ಪೊಲೀಸ್ ಠಾಣೆಯಯಲ್ಲಿ ದೂರು ದಾಖಲಿಸಿ ಯುವಕನನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದರು.
ದೂರು ದಾಖಲಿಸಿಕೊಂಡ ಪೊಲೀಸರು ದಿಗಂತ್ ಪರೀಕ್ಷೆಗೆ ಹೆದರಿ ಮನೆ ಬಿಟ್ಟು ಹೋಗಿರಬಹುದು ಎಂದು ಮೊದಲೇ ಶಂಕೆ ವ್ಯಕ್ತಪಡಿಸಿದ್ದರು. ಆದರೆ ಇದನ್ನು ಕುಟುಂಬಸ್ಥರು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಯಾಕೆಂದರೆ ಗ್ರಾಮದಲ್ಲಿ ದಿಗಂತ್‌ನನ್ನು ಡ್ರಗ್ಸ್ ಗ್ಯಾಂಗ್ ಅಥವಾ ಮಂಗಳಮುಖಿಯರು ಕರೆದುಕೊಂಡು ಹೋಗಿರಬಹುದು ಎನ್ನುವ ಗುಮಾನಿ ಹಬ್ಬಿತ್ತು. ಇದರಿಂದ ಗಾಬರಿಗೊಂಡ ಕುಟುಂಬಸ್ಥರು ದಿಗಂತ್ ಪರೀಕ್ಷೆಗೆ ಹೆದರಿ ಹೋಗಿಲ್ಲ ಎಂದು ಖಡಾಖಂಡಿತವಾಗಿ ಹೇಳಿದ್ದರು.
ದೂರು ದಾಖಲಿಸಿಕೊಂಡ ಪೊಲೀಸರು ಎಲ್ಲಾ ಆಯಾಮದಿಂದ ತನಿಖೆ ನಡೆಸಿದ್ದರು. ಇದರ ನಡುವೆ ದಿಗಂತ್ ನಾಪತ್ತೆಯಾಗಿ ಹಲವು ದಿನಗಳು ಕಳೆದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹಾಗೂ ವಿವಿಧ ಸಂಘ ಸಂಘಟನೆಗಳು ಸೇರಿ ಪ್ರತಿಭಟನೆ ಮಾಡಿ ಬಂದ್ ಕೂಡ ಮಾಡಿದ್ದವು. ಆದರೀಗ ಉಡುಪಿಯಲ್ಲಿ ದಿಗಂತ್ ಪತ್ತೆಯಾಗಿದ್ದಾನೆ. ಹಾಗಾದರೆ ದಿಗಂತ್ ಹೋಗಿದ್ದು ಎಲ್ಲಿಗೆ?
ದಿಗಂತ್ ಹೋಗಿದ್ದು ಎಲ್ಲಿಗೆ?
ದಿಗಂತ್ ಕಾಣೆಯಾದ ದಿನ ರೈಲ್ವೆ ಟ್ರ್ಯಾಕ್ ಬಳಿ ತನ್ನ ಚಪ್ಪಲಿಯನ್ನು ಬಿಟ್ಟು ಶೂ ಹಾಕಿಕೊಂಡು ನಂತರ ಬೈಕ್ ಸವಾರರ ಸಹಾಯ ಪಡೆದು ಮಂಗಳೂರಿಗೆ ಹೋಗಿದ್ದಾನೆ. ಅಲ್ಲಿಂದ ಶಿವಮೊಗ್ಗ ಹೋಗಿ ಅಲ್ಲಿಂದ ಮೈಸೂರು ಹೋಗಿದ್ದಾನೆ. ಮೈಸೂರಿನಲ್ಲಿ ಟ್ರೈನ್ ಹತ್ತಿ ಬೆಂಗಳೂರಿಗೆ ಹೋಗಿದ್ದಾನೆ. ನಂದಿ ಬೆಟ್ಟದ ಹೋಟೆಲ್‌ವೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾನೆ. ಶನಿವಾರ (ಮಾರ್ಚ್8)ದಂದು ಬೆಂಗಳೂರಿನಲ್ಲಿ ಮುರುಡೇಶ್ವರ ಎಕ್ಸ್‌ಪ್ರೆಸ್ ಟ್ರೈನ್ ಹತ್ತಿ ಉಡುಪಿಗೆ ತಲುಪಿದ್ದಾನೆ. ಉಡುಪಿಯಲ್ಲಿ ಆತ ಸಿಕ್ಕಿಬಿದ್ದಿದ್ದಾನೆ. ಹಾಗಾದರೆ ದಿಗಂತ್ ಮನೆ ತೊರೆದಿದ್ದು ಯಾಕೆ? ವಿಚಾರಣೆ ವೇಳೆ ದಿಗಂತ್ ಹೇಳಿದ್ದೇನು?
ವಿಚಾರಣೆ ವೇಳೆ ದಿಗಂತ್ ಹೇಳಿದ್ದೇನು?
ಪೊಲೀಸ್ ಠಾಣೆಗೆ ಆತನನ್ನು ಕರೆತಂದು ಆತನನ್ನು ವಿಚಾರಿಸಿದಾಗ ನಡೆದ ಘಟನೆ ಬಗ್ಗೆ ತಿಳಿದು ಬಂದಿದೆ. ದಿಗಂತ್ ನನ್ನು ಯಾವುದೇ ಡ್ರಗ್ ಗ್ಯಾಂಗ್ ಕರೆದುಕೊಂಡು ಹೋಗಿರಲಿಲ್ಲ. ಮಂಗಳಮುಖಿಯರೊಂದಿಗೂ ದಿಗಂತ್ ಹೋಗಿರಲಿಲ್ಲ. ಬದಲಿಗೆ ಆತ ಹೋಗಿದ್ದು ಪರೀಕ್ಷೆಗೆ ಹೆದರಿ ಎನ್ನುವುದು ಗೊತ್ತಾಗಿದೆ. ಈ ವಿಚಾರವನ್ನು ದಿಗಂತ್ ಸ್ವತ: ಹೇಳಿಕೊಂಡಿದ್ದಾರೆ. ಪರೀಕ್ಷೆಯಲ್ಲಿ ಚೆನ್ನಾಗಿ ಓದಿರಲಿಲ್ಲ, ಫೋಲ್ ಆಗುವ ಭಯವಿತ್ತು. ಹೀಗಾಗಿ ತಾನು ಮನೆ ಬಿಟ್ಟು ಹೋಗಿದ್ದೆ ಎಂದು ದಿಗಂತ್ ಹೇಳಿಕೊಂಡಿದ್ದಾನೆ.
ಒಟ್ಟಿನಲ್ಲಿ ಬೆಳೆದುನಿಂತ ಮಗನನ್ನು ಕಂಡು ಕುಟುಂಬ ನಿಟ್ಟುಸಿರು ಬಿಟ್ಟಿದೆ. ಪರೀಕ್ಷೆಯ ಭೀತಿಯಿಂದ ಮನೆ ತೊರೆದ ದಿಗಂತ್‌ನನ್ನು ಪೊಲೀಸರು ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ. ದಿಗಂತ್ ಪತ್ತೆಯಾಗಿದ್ದು ಅನೇಕ ಊಹಾಪೋಹಗಳಿಗೆ ತೆರೆ ಎಳೆದಂತಾಗಿದೆ.












Click it and Unblock the Notifications