ಮಂಗಳೂರು: ಸಾಮರಸ್ಯ ನಡಿಗೆಗೂ ಮುನ್ನ ಬಸ್ ಮೇಲೆ ಕಲ್ಲು ತೂರಾಟ
ಮಂಗಳೂರು, ಡಿಸೆಂಬರ್ 12: ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಬಿ.ರಮಾನಾಥ್ ರೈ ನೇತೃತ್ವದಲ್ಲಿ ಇಂದು ಮಂಗಳೂರಿನ ಫರಂಗಿಪೇಟೆಯಿಂದ ಮಾಣಿವರೆಗೆ ಸಾಮರಸ್ಯ ನಡಿಗೆ ಪಾದಯಾತ್ರೆ ನಡೆಯಲಿದೆ.
ಪಾದಯಾತ್ರೆ ಹಿನ್ನಲೆಯಲ್ಲಿ ಫರಂಗಿಪೇಟೆಯಲ್ಲಿ ದುಷ್ಕರ್ಮಿಗಳು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಬೆಂಗಳೂರಿನಿಂದ ಮಂಗಳೂರಿಗೆ ಬರುವ ರಾಜಹಂಸ ಹಾಗೂ ಐರಾವತ ಬಸ್ ಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಈ ಘಟನೆ ನಡೆದಿದ್ದು ಬಸ್ ಗಳ ಗಾಜು ಪುಡಿಯಾಗಿದೆ. ಘಟನೆಯಲ್ಲಿ ಯಾವುದೇ ಗಾಯಗಳಾಗದೆ ಪ್ರಯಾಣಿಕರು ಪಾರಾಗಿದ್ದಾರೆ.
ಫರಂಗಿಪೇಟೆಯಲ್ಲಿ ಬೆಳಿಗ್ಗೆ 9 ಗಂಟೆಗೆ ಸಾಮರಸ್ಯ ಪಾದಯಾತ್ರೆಗೆ ಚಾಲನೆ ದೊರಕಲಿದೆ. ಫರಂಗಿಪೇಟೆಯಿಂದ ಮಾಣಿಯವರೆಗೆ 'ಸಾಮರಸ್ಯ ನಡಿಗೆ ಸೌಹಾರ್ದತೆಯೆಡೆಗೆ' ಕಾಲ್ನಡಿಗೆ ಜಾಥಾ ನಡೆಯಲಿದೆ.

ಕಲ್ಲಡ್ಕ ಮಾರ್ಗವಾಗಿ ರೈ ನೇತೃತ್ವದ ನಡಿಗೆ ಸಾಗಲಿದ್ದು ನಡಿಗೆಯಲ್ಲಿ ನಟ ಪ್ರಕಾಶ್ ರೈ ,ಸೇರಿದಂತೆ ಸಿಪಿಐಎಂ ಮುಖಂಡರು ಭಾಗವಹಿಸಲಿದ್ದಾರೆ.

ಸಾಮರಸ್ಯ ನಡಿಗೆ ಹಿನ್ನೆಲೆಯಲ್ಲಿ ಫರಂಗಿಪೇಟೆಯಿಂದ ಮಾಣಿವರೆಗೆ 1000 ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.












Click it and Unblock the Notifications