ಬಂದ್ ಆಗಿದ್ದ ಶಿರಾಡಿ ಘಾಟ್ ಮಾರ್ಗ ತೆರೆದುಕೊಂಡಿದೆ
ಮಂಗಳೂರು, ಆಗಸ್ಟ್, 10 : ಶಿರಾಡಿಘಾಟಿ ರಸ್ತೆಯು ಸಂಚಾರ ಮುಕ್ತಗೊಂಡಿದ್ದು, ಇದರಿಂದ ಪ್ರಯಾಣಿಕರ ಪರದಾಟ ಕಡಿಮೆಯಾದಂತಾಗಿದೆ. ಆಗಸ್ಟ್ 9 ರಂದು ಪರಿಶೀಲನೆ ನಡೆಸಿದ ಸಚಿವ ಹೆಚ್.ಸಿ ಮಹದೇವಪ್ಪ ಸೋಮವಾರ ರಸ್ತೆ ಸಂಚಾರ ಯೋಗ್ಯವಾಗಿದೆ ಎಂದು ಘೋಷಿಸಿದ್ದಾರೆ.
ಪ್ರಥಮ ಹಂತದಲ್ಲಿ ಒಟ್ಟು 69.90 ಕೋ. ರೂ. ವೆಚ್ಚದಲ್ಲಿ 11.77 ಕಿ.ಮೀ. ಉದ್ದ ಹಾಗೂ 8.50 ಮೀ ಅಗಲದಲ್ಲಿ ಕಾಂಕ್ರೀಟೀಕರಣಗೊಂಡು ಮೇಲ್ದರ್ಜೆಗೇರಿದೆ. ಎರಡು ಬದಿಯಲ್ಲಿ ರೋಡ್ ಸೇಪ್ಟಿ ಕಾಮಗಾರಿಗಳಾದ ಶೋಲ್ಡರ್ ನಿರ್ಮಾಣ, ಟ್ರಾಫಿಕ್ ಸೈನ್ ಬೋರ್ಡ್ ಅಳವಡಿಕೆ, ತಡೆಗೋಡೆ ನಿರ್ಮಾಣ, ಕ್ಯಾಷ್ ಬ್ಯಾರಿಯರ್ ನಿರ್ಮಾಣ ಮುಂತಾದ ಕಾಮಗಾರಿಗಳು ಪೂರ್ಣಗೊಂಡಿದೆ.[ಶಿರಾಡಿ ಘಾಟ್ ಕಾಂಕ್ರಿಟ್ ರಸ್ತೆ ಕಾಮಗಾರಿ ಚಿತ್ರಗಳು]

ಶಿರಾಡಿಘಾಟಿಯಲ್ಲಿ 33.38 ಕಿ.ಮೀ. ಉದ್ದದ ದ್ವಿತೀಯ ಹಂತದ ರಸ್ತೆ ದುರಸ್ತಿ ಕಾಮಗಾರಿ ಮಳೆಗಾಲದ ಬಳಿಕ ಪ್ರಾರಂಭಗೊಳ್ಳಲಿದೆ. ಇದು 85.28 ಕೋಟಿ ರೂ. ವೆಚ್ಚದ ಕಾಮಗಾರಿಯಾಗಿದ್ದು, ಇದರಲ್ಲಿ 22.18 ಕೋಟಿ ರೂ. ವೆಚ್ಚದಲ್ಲಿ 21 ಕಿ.ಮೀ. ರಸ್ತೆ (ಗುಳಗಳಲೆಯಿಂದ ಹೆಗ್ಗದ್ದೆ ವರೆಗೆ) ಡಾಮರೀಕರಣ ಹಾಗೂ 63.10 ಕೋಟಿ ರೂ. ವೆಚ್ಚದ 12.38 ಕಿ.ಮೀ. ರಸ್ತೆ ಕಾಂಕ್ರಿಟೀಕರಣ (ಕೆಂಪುಹೊಳೆಯಿಂದ ಅಡ್ಡಹೊಳೆವರೆಗೆ) ಕಾಮಗಾರಿ ನಡೆಯಲಿದೆ.
ಸುಸಜ್ಜಿತ ರಸ್ತೆಯ ಬೇಡಿಕೆ ಸಾಕಾರ: ಸಚಿವ ಡಾ. ಮಹದೇವಪ್ಪ
ಶಿರಾಡಿಘಾಟಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಲೋಕೋಪಯೋಗಿ ಸಚಿವ ಎಚ್.ಸಿ. ಮಹಾದೇವಪ್ಪ, ಮಂಗಳೂರು-ಬೆಂಗಳೂರು ಮಧ್ಯೆ ಪ್ರಮುಖ ಸಂಪರ್ಕ ರಸ್ತೆಯಾಗಿರುವ ಇದರ ಸಮಸ್ಯೆಗೆ ಪರಿಹಾರ ರೂಪಿಸಬೇಕು ಎಂಬ ಬಹುಕಾಲದ ಬೇಡಿಕೆ ಸಾಕಾರಗೊಳ್ಳುತ್ತಿದೆ. ಈ ಕಾಮಗಾರಿಗಳು ಮಂಜೂರಾಗಿ ಕಾರ್ಯಗತಗೊಳ್ಳಲು ಸಚಿವ ಆಸ್ಕರ್ ಫರ್ನಾಂಡಿಸ್ ಕಾರಣೀಭೂತರಾಗಿದ್ದಾರೆ. ಪ್ರಥಮ ಹಂತದ ಕಾಮಗಾರಿ ಪೂರ್ಣಗೊಂಡು ಅವರ ಉಪಸ್ಥಿತಿಯಲ್ಲಿ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತಿದೆ ಎಂದರು.
ಮಾಜಿ ಕೇಂದ್ರ ಸಚಿವ ಹಾಗೂ ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಮಾತನಾಡಿ, ಇಂದು ರಾಷ್ಟ್ರೀಯ ಹೆದ್ದಾರಿ ಸರಾಸರಿಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಶಿರಾಡಿಘಾಟಿಯಲ್ಲಿ ಸುರಂಗಮಾರ್ಗ ನಿರ್ಮಾಣ ಯೋಜನೆಯನ್ನು ಶೀಘ್ರ ಕೈಗೆತ್ತಿಗೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು ಎಂದು ಈಗಾಗಲೇ ಅವರು ರಾಜ್ಯ ಸರ್ಕಾರವನ್ನು ಕೋರಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಶಿರಾಡಿ ಘಾಟಿ ರಸ್ತೆ ದ.ಕ. ಜಿಲ್ಲೆಯ ಜೀವನಾಡಿ ರಸ್ತೆ. ಕಾಮಗಾರಿ ಪೂರ್ಣಗೊಳಿಸಲು 18 ತಿಂಗಳ ಕಾಲಾವಕಾಶ ಇದ್ದರೂ ಕೇವಲ 7 ತಿಂಗಳ ಅವಧಿಯಲ್ಲೇ ಗುತ್ತಿಗೆದಾರರು ಕೆಲಸ ಪೂರ್ಣಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ದ್ವಿತೀಯ ಹಂತದ ಕಾಮಗಾರಿ ವೇಳೆ ವಾಹನ ಸಂಚಾರ ನಿರ್ವಹಣೆ ಕುರಿತು ಅಧಿಕಾರಿಗಳ ಸಭೆ ನಡೆಸಲಾಗುವುದು ಎಂದರು.
ಸುರಂಗ ಮಾರ್ಗ: ಮೇ ಅಂತ್ಯಕ್ಕೆ ಡಿಪಿಆರ್ ಸಲ್ಲಿಕೆ
ಶಿರಾಡಿಘಾಟಿಯಲ್ಲಿ ಸುರಂಗ ಮಾರ್ಗ ನಿರ್ಮಾಣಕ್ಕೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿ ಶೀಘ್ರ ಪ್ರಾರಂಭವಾಗಲಿದ್ದು, 2016ರ ಮೇ ಅಂತ್ಯದೊಳಗೆ ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗುವುದು. ಇದಕ್ಕೆ ಈಗಾಗಲೇ 10.15 ಕೋಟಿ ರೂ. ಮಂಜೂರಾಗಿದೆ.
ಅಡ್ಡಹೊಳೆಯಿಂದ ಹೆಗ್ಗದ್ದೆವರೆಗೆ 22.84 ಕಿ.ಮೀ. ಉದ್ದವಿರುವ ಈ ಯೋಜನೆ ಒಟ್ಟು 12.41 ಕಿ.ಮೀ. ಉದ್ದದ 7 ಸುರಂಗಗಳು, ಒಟ್ಟು 6.77 ಕಿ.ಮೀ. 10 ಸೇತುವೆಗಳನ್ನು ಒಳಗೊಂಡಿದೆ.
ಯೋಜನೆ 77 ಹೆಕ್ಟೇರ್ ಅರಣ್ಯ ಪ್ರದೇಶ ಆವರಿಸಲಿದ್ದು. ಜಪಾನಿನ ಜೈಕಾ ಸಂಸ್ಥೆ ಸಹಯೋಗದೊಂದಿಗೆ ಇದು ಕಾರ್ಯಗತಗೊಳ್ಳಲಿದೆ. ಒಟ್ಟು 4 ವರ್ಷಗಳ ಯೋಜನೆ ಇದಾಗಿದ್ದು, ಈಗಾಗಲೇ ಡಿಪಿಆರ್ ಗೆ ಜಪಾನ್ ತಂತ್ರಜ್ಞರ ನೆರವು ಕೋರಲಾಗಿದೆ.
ಶಾಸಕಿ ಶಕುಂತಾಳ ಶೆಟ್ಟಿ, ಬ್ಲೋಸಂ ಫರ್ನಾಂಡಿಸ್, ಮೂಡ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಮಾಜಿ ಶಾಸಕರಾದ ಶಿವರಾಮ್, ವಿಶ್ವನಾಥ್, ಕಾಂಗ್ರೆಸ್ ಮುಖಂಡರಾದ ಪಿ.ವಿ. ಮೋಹನ್, ದಿವ್ಯಪ್ರಭಾ, ಬಿ.ಎಚ್. ಖಾದರ್, ಎಂ.ಎಸ್. ಮಹಮ್ಮದ್, ವೆಂಕಪ್ಪ ಗೌಡ ಮೊದಲಾದವರು ಉಪಸ್ಥಿತರಿದ್ದರು.












Click it and Unblock the Notifications