ಕರಾವಳಿಯಲ್ಲಿ ಜಲ ಪ್ರವಾಸೋದ್ಯಮಕ್ಕೆ ಸಾಧ್ಯತೆಗಳನ್ನು ತೆರೆದಿಟ್ಟ ರಿವರ್ ಫೆಸ್ಟ್
ಮಂಗಳೂರು ಜನವರಿ 16: ನದಿ ತೀರಗಳನ್ನು ಪ್ರವಾಸೋದ್ಯಮ ಕೇಂದ್ರಗಳಾಗಿ ಪರಿವರ್ತಿಸುವ ದೃಷ್ಠಿಯಿಂದ ಮಂಗಳೂರಿನಲ್ಲಿ ಆಯೋಜಿಸಲಾಗಿದ್ದ ಎರಡು ದಿನಗಳ ನದಿ ಉತ್ಸವ ರಿವರ್ ಫೆಸ್ಟ್ ಯಶಸ್ವಿ ಯಾಗಿದೆ .ಈ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ನದಿ ತೀರದ ಪ್ರವಾಸೋದ್ಯಮಕ್ಕೆ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿದೆ.
ನದಿ ಕಿನಾರೆ ಹಾಗು ಹಿನ್ನಿರಿನ ಸುಂದರ ಪ್ರದೇಶಗಳನ್ನು ಬಳಸಿ ಪ್ರವಾಸೋದ್ಯಮ ಉತ್ತೇಜಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ರಿವರ್ ಫೆಸ್ಟ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು, ಮಹಿಳೆಯರು, ಯುವಕರು, ಹಿರಿಯರು ನದಿ ಕಿನಾರೆಯತ್ತ ಹೆಜ್ಜೆ ಹಾಕಿದ್ದರು. ಈ ಉತ್ಸವ ಮಂಗಳೂರಿನ ನದಿ ತೀರದ ಪ್ರವಾಸೋದ್ಯಮಕ್ಕೆ ಹೊಸ ಮುನ್ನುಡಿ ಬರೆದಿದೆ.

ದೇವರ ಸ್ವಂತ ನಾಡು ಎಂದು ಗುರುತಿಸಲಾಗುವ ನೆರೆಯ ರಾಜ್ಯ ಕೇರಳ ಹಾಗು ಪ್ರವಾಸಿಗರ ಸ್ವರ್ಗ ಗೋವಾ , ನದಿ ತೀರಗಳ ಹಾಗು ಹಿನ್ನಿರಿನ ಪ್ರವಾಸೋದ್ಯಮಕ್ಕೆ ಹೆಚ್ಚಿನ ಪ್ರಾಶತ್ಯ ನೀಡಿದೆ. ಅದರಂತೆ ರಾಜ್ಯದ ಕರಾವಳಿಯಲ್ಲಿ ನದಿತೀರದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ನೀಲಿ ನಕ್ಷೆ ಸಿದ್ದಪಡಿಸಲಾಗಿದೆ. ಅದರಂತೆ ಮಂಗಳೂರು ಹಾಗೂ ಸುತ್ತಮುತ್ತಲಿನ ನದಿ, ಹಿನ್ನೀರು ತಾಣಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೊಳಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಈ ನದಿ ಉತ್ಸವ ವನ್ನು ಆಯೋಜಿಸಿತ್ತು.

ನೇತ್ರಾವತಿ ನದಿಯಲ್ಲಿ ಅಡ್ಯಾರ್‌ನಿಂದ ಅಳಿವೆ ಬಾಗಿಲುವರೆಗಿನ ಮತ್ತು ಫಲ್ಗುಣಿ ನದಿ ಹರಿಯುತ್ತಿರುವ ಗುರುಪುರದಿಂದ ತಣ್ಣೀರು ಬಾವಿವರೆಗಿನ ಪ್ರದೇಶದ ಹಲವೆಡೆ ನದಿಯ ಇಕ್ಕೆಲಗಳಲ್ಲಿರುವ ಹಿನ್ನೀರಿನ ಸುಂದರ ತಾಣಗಳಿದ್ದು, ಬೋಟ್‌ಹೌಸ್ ಇತ್ಯಾದಿ ತಾಣಗಳನ್ನಾಗಿ ಅಭಿವೃದ್ಧಿಪಡಿಸಲು ಅವಕಾಶ ತೆರೆದಂತಾಗಿದೆ. ಬಂಗ್ರಕುಳೂರಿನಲ್ಲಿ ನದಿಗೆ ತಾಗಿಕೊಂಡ 23 ಎಕ್ರೆ ಸರಕಾರಿ ಭೂಮಿಯನ್ನು ಅತ್ಯುತ್ತಮ ಜಲ ಪ್ರವಾಸಿ ತಾಣವಾಗಿಸಬಹುದಾಗಿದೆ.

ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಪೂರಕವಾಗಿ ಫಲ್ಗುಣಿ, ನೇತ್ರಾವತಿ ನದಿ ಪಾತ್ರದಲ್ಲಿ 20 ಅಂತಾರಾಷ್ಟ್ರೀಯ ಮಾದರಿ ಜೆಟ್ಟಿ ನಿರ್ಮಿಸಲು ಜಿಲ್ಲಾಡಳಿತ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ತಲಾ 1.5 ಕೋ.ರೂಪಾಯಿ ವೆಚ್ಚದಲ್ಲಿ ಜೆಟ್ಟಿಯನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸುವ ಗುರಿಯನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ಹೊಂದಿದೆ. ಉತ್ಸವಕ್ಕೆ ಸಿಕ್ಕ ಜನಸ್ಪಂದನೆ ಜಲಪ್ರವಾಸೋದ್ಯಮಕ್ಕಿರುವ ವಿಫುಲ ಅವಕಾಶಗಳನ್ನು ತೆರೆದಿಟ್ಟಿದೆ.












Click it and Unblock the Notifications