ಜ.13 ರಂದು ಮಂಗಳೂರಿನ ಏಕೈಕ ರಾಮ-ಲಕ್ಷಣ ಜೋಡುಕರೆ ಕಂಬಳ
ಮಂಗಳೂರು, ಜನವರಿ 04 : ಮಂಗಳೂರಿನಲ್ಲಿ ನಡೆಯುವ ಏಕೈಕ ರಾಮ-ಲಕ್ಷಣ ಜೋಡುಕರೆ ಕಂಬಳ ಇದೇ ಜನವರಿ 13 ನಡೆಯಲಿದೆ. ನಗರದ ಬಂಗ್ರಕೂಳೂರು ಗೋಲ್ಡ್‌ಫಿಂಚ್ ಸಿಟಿ ಮೈದಾನಲ್ಲಿ ಈ ಜೋಡು ಕೆರೆ ಕಂಬಳ ನಡೆಯಲಿದ್ದು ಸಿದ್ಧತೆ ಭರದಿಂದ ಸಾಗಿದೆ.
ಬಿಜೆಪಿ ಮುಖಂಡ ಹಾಗೂ ತಲಪಾಡಿ ದೊಡ್ಡಮನೆಯ ಕ್ಯಾಪ್ಟನ್ ಬ್ರಿಜೇಶ್ ಚೌಟ ಸಾರಥ್ಯದಲ್ಲಿ ಎರಡನೇ ಬಾರಿ ಕಂಬಳ ಆಯೋಜನೆಗೊಳ್ಳುತ್ತಿದೆ. ಗೋಲ್ಡ್‌ಫಿಂಚ್ ಸಿಟಿ ಮೈದಾನಲ್ಲಿ ಕಂಬಳ ಕರೆ ಸಿದ್ಧಪಡಿಸಲಾಗಿದ್ದು, ಈಗಾಗಲೇ ಕರೆಗೆ ನೀರು ಹರಿಸುವ ಪ್ರಕ್ರಿಯೆ ಆರಂಭವಾಗಿದೆ.
ಮಂಗಳೂರು ನಗರ ಆಸುಪಾಸಿನಲ್ಲಿ ನಡೆಯುತ್ತಿರುವ ಏಕೈಕ ಕಂಬಳ ಆಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವ ನಿರೀಕ್ಷೆ ಹೊಂದಲಾಗಿದೆ. ಕಂಬಳ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಈ ಬಾರಿ ಹೆಚ್ಚಿನ ಸಂಖ್ಯೆಯ ಕೋಣಗಳು ಭಾಗವಹಿಸುವ ನಿರೀಕ್ಷೆಯಿದೆ.

ಜನವರಿ13 ರಂದು ಬೆಳಗ್ಗೆ ಕಂಕನಾಡಿ ಬ್ರಹ್ಮ ಬೈದರ್ಕಳ ಗರೊಡಿ ಅಧ್ಯಕ್ಷ ಕೆ.ಚಿತ್ತರಂಜನ್ ಕಂಬಳ ಉದ್ಘಾಟಿಸಲಿದೆ. ಮಂಗಳೂರು ಮೇಯರ್ ಭಾಸ್ಕರ್ ಕೆ.ಅಧ್ಯಕ್ಷತೆ ವಹಿಸಲಿದ್ದಾರೆ. ಹಲವು ಗಣ್ಯರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಜನವರಿ 13 ರಂದು ಸಾಯಂಕಾಲ ಸಭಾ ಕಾರ್ಯಕ್ರಮ ನಡೆಯಲಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲು, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಶಾಸಕರು, ವಿಧಾನ ಪರಿಷತ್ ಸದಸ್ಯರು, ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿಗಳು, ಸೇರಿದಂತೆ ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.












Click it and Unblock the Notifications