ಮಂಗಳೂರು ರೈಲ್ವೆ ಸಿಬ್ಬಂದಿಗಳ ಗೋಳು ಕೇಳುವವರಾರು?
ಮಂಗಳೂರು, ಜುಲೈ 28 : ರಸ್ತೆ ಮೇಲೆ ಹರಿಯುತ್ತಿರುವ ಕೊಳಚೆ ನೀರು, ರಸ್ತೆ ಬದಿಯಲ್ಲಿ ಸಂಗ್ರಹವಾಗಿರುವ ಕಸ, ಮನೆಯ ಹಿಂಬದಿಯೇ ಕೊಳಕು ನೀರು ನಿಂತು ಉತ್ಪತ್ತಿಯಾಗುವ ಸೊಳ್ಳೆಗಳು. ಇದು ಎಲ್ಲೋ ಹಳ್ಳಿಗಾಡಿನ ಸ್ಥಿತಿಯಲ್ಲ, ಮಂಗಳೂರು ನಗರದ ಹೃದಯ ಭಾಗದ ಪರಿಸ್ಥಿತಿ.
ಮಂಗಳೂರಿನ ಸೆಂಟ್ರಲ್ ರೈಲ್ವೆ ನಿಲ್ದಾಣದ ಬಳಿ ಇಂತಹ ದುಸ್ಥಿತಿ ಇದೆ. ರೈಲ್ವೆ ನೌಕರರ ವಸತಿ ನಿಲಯಗಳ ಮುಂದೆ ವೆನ್ಲಾಕ್ ಮತ್ತು ಮಹಾನಗರ ಪಾಲಿಕೆಯ ಒಳಚರಂಡಿ ನೀರು ರಸ್ತೆಯ ಮೇಲೆ ಹರಿದು ಹೋಗುತ್ತದೆ. ಇದರಿಂದ ರೋಗ ಹರಡುತ್ತಿದ್ದು, ಇಲ್ಲಿನ ನಿವಾಸಿಗಳು ವೆನ್ಲಾಕ್ ಆಸ್ಪತ್ರೆ ಸೇರುವಂತಾಗಿದೆ. [ಬೆಂಗಳೂರು ರೈಲು ನಿಲ್ದಾಣದ ವೆಬ್ ಸೈಟ್ ನೋಡಿ]

ಸ್ಥಳೀಯರು ಹೇಳುವಂತೆ ಜೋರಾಗಿ ಮಳೆ ಬಂದರೆ ಒಳಚರಂಡಿ ಕಟ್ಟಿಕೊಂಡು ನೀರು ಮನೆಯೊಳಕ್ಕೆ ನುಗ್ಗುತ್ತದೆ. ಆಗ ನಿದ್ದೆ, ಊಟ ಎಲ್ಲವನ್ನು ಬಿಟ್ಟು ಕುಳಿತುಕೊಳ್ಳಬೇಕಾಗುತ್ತದೆ. ಮನೆಯ ಹೊರಗೂ ಹೋಗಲಾಗದೆ, ಮನೆಯಲ್ಲೂ ಇರಲಾರದ ಸ್ಥಿತಿ ನಿರ್ಮಾಣ ವಾಗುತ್ತದೆ.
ಇತ್ತ ಬಾರದ ಪಾಲಿಕೆ ಅಧಿಕಾರಿಗಳು : ರೈಲ್ವೆ ನೌಕರರ ವಸತಿ ನಿಲಯಗಳ ಮುಂದಿನ ಈ ಸಮಸ್ಯೆ ಹೊಸದೇನಲ್ಲ. ಹಲವಾರು ವರ್ಷಗಳಿಂದ ಇಲ್ಲಿ ಹೀಗೆ ನೀರು ಹರಿದು ಹೋಗುತ್ತಿದೆ. ಈ ಬಗ್ಗೆ ಸಾಕಷ್ಟು ಬಾರಿ ಮಂಗಳೂರು ಮಹಾನಗರ ಪಾಲಿಕೆಗೆ ದೂರು ನೀಡಿದರೂ ಅಧಿಕಾರಿಗಳು ಮಾತ್ರ ಇತ್ತ ಬಂದಿಲ್ಲ.

ಅಧಿಕಾರಿಗಳ ವಿಳಂಬ ನೀತಿಯಿಂದ ಆಕ್ರೋಶಗೊಂಡಿರುವ ಇಲ್ಲಿನ ನಿವಾಸಿಗಳು ಒಳಚರಂಡಿಗೆ ಮಣ್ಣು ತುಂಬಿ ಅದನ್ನು ಮುಚ್ಚಿ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ. ಮಂಗಳೂರು ನಗರದ ಹೃದಯ ಭಾಗದಲ್ಲೇ ಆಗಿರುವ ಇಂತಹ ಅವಾಂತರವನ್ನು ಸರಿಪಡಿಸುವವರು ಯಾರು?.













Click it and Unblock the Notifications