ನಮ್ಮನ್ನು ಸಾಯಿಸುವ ಷಡ್ಯಂತ್ರ ಮಾಡಬೇಡಿ: ಚೇತನ್ ವಿರುದ್ಧ ಗುಡುಗಿದ ದೈವಾರಾಧಕರು
ತುಳುನಾಡಿನ ದೈವಾರಾಧಕರಿಗೆ ಸರ್ಕಾರದ ಮಾಸಾಶಾನ ನೀಡುವ ಆದೇಶವನ್ನು ದೈವರಾಧನೆ ಮಾಡುವ ಸಮುದಾಯ ಸ್ವಾಗತಿಸಿದೆ. 60 ವಯಸ್ಸು ಮೇಲ್ಪಟ್ಟ ದೈವಾರಾಧಕರಿಗೆ ಸರ್ಕಾರ ಮಾಸಿಕ ಎರಡು ಸಾವಿರ ರೂಪಾಯಿ ನೀಡುವ ಚಿಂತನೆಗೆ ಸಮುದಾಯದ ಮುಖಂಡರು ಹರ್ಷ ವ್ಯಕ್ತ ಪಡಿಸಿದ್ದಾರೆ. ಇದರ ಜೊತೆಗೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿದ್ದಾರೆ.
ಈ ಬಗ್ಗೆ ಮಂಗಳೂರಿನಲ್ಲಿ ನಲಿಕೆ ಸಮುದಾಯದ ಮುಖಂಡರಾದ ಪಾಂಡುರಂಗ ನಲಿಕೆ, ಪರವ ಸಮುದಾಯದ ಡಾ.ರವೀಶ್ ಪರವ ಮತ್ತು ಪಂಬದ ಸಮುದಾಯದ ಮುಖಂಡರಾದ ದಯಾನಂದ ಜಿ ಕತ್ತಲೆಸಾರ್ ಜಂಟಿ ಸುದ್ದಿಗೋಷ್ಠಿ ನಡೆಸಿ ಕೆಲ ಬೇಡಿಕೆಗಳನ್ನು ಸರ್ಕಾರದ ಮುಂದೆ ಇರಿಸಿದ್ದಾರೆ.
ತುಳು ನಾಡಿನ ದೈವಾರಾಧನೆಗೆ ಸಹಸ್ರ ಸಹಸ್ರ ವರ್ಷಗಳ ಇತಿಹಾಸವಿದೆ. ದೈವ ನರ್ತಕರ ಪಟ್ಟಿಯನ್ನು ಮಾಡಿದಾಗ 60 ವಯಸ್ಸು ಮೇಲ್ಪಟ್ಟ ದೈವ ನರ್ತಕರ ಸಂಖ್ಯೆ ಬಹಳ ಕಡಿಮೆವಿದೆ. ಸರ್ಕಾರದ ಮಾಸಾಶಾನ ಅನುಭವಿಸೋಕೂ 60 ವಯಸ್ಸು ಮೇಲ್ಪಟ್ಟ ಕಲಾವಿದರು ಕಡಿಮೆ ಇದ್ದಾರೆ. ಸರ್ಕಾರ 60ರ ವಯಸ್ಸಿನ ಗಡುವನ್ನು 55 ಅಥವಾ 50 ವಯಸ್ಸಿಗೆ ಇಳಿಸಬೇಕೆಂದು ದಯಾನಂದ ಜಿ ಕತ್ತಲೆಸಾರ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಮಾಸಾಶಾನ ನೀಡುವಾಗ ವೃದ್ಯಾಪವೇತನ ಬಗ್ಗೆ ಗಮನ ಹರಿಸಬೇಕು
ಕೇವಲ ದೈವನರ್ತಕರಿಗೆ ಮಾತ್ರವಲ್ಲದೇ ದೈವದ ಬೇರೆ ಚಾಕರಿಗಳನ್ನು ಮಾಡುವವರು, ಗಡಿ ಹಿಡಿದವರು, ದರ್ಶನ ಪಾತ್ರಿ, ದೀವಿಟಿಗೆ ಹಿಡಿದವರಿಗೂ ಮಾಸಾಶಾನ ವಿಸ್ತರಣೆ ಮಾಡಬೇಕು. ಸರ್ಕಾರ ದೈವ ನರ್ತಕ ಸೇರಿದಂತೆ ಬೇರೆ ವಿಭಾಗಗಳನ್ನು ಪರಿಗಣಿಸಬೇಕು, 58 ವಯಸ್ಸು ದಾಟಿದವರಿಗೆ ಈಗಾಗಲೇ ಸರ್ಕಾರದ ಒಂದು ಸಾವಿರ ರೂಪಾಯಿ ವೃದ್ಯಾಪವೇತನ ಸಿಗುತ್ತಿದೆ. ಮಾಸಾಶಾನಕ್ಕೆ ಅರ್ಜಿ ಹಾಕುವಾಗ ವೃದ್ಯಾಪವೇತನ ಇದ್ದವರನ್ನು ಕೈ ಬಿಟ್ಟರೆ ಹಲವು ಮಂದಿ ಸಂತ್ರಸ್ತರಾಗುತ್ತಾರೆ. ಹೀಗಾಗಿ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಅಂತಾ ಕತ್ತಲೆಸಾರ್ ವಿನಂತಿ ಮಾಡಿದ್ದಾರೆ.

ನಮ್ಮನ್ನು ಸಾಯಿಸುವ ಷಡ್ಯಂತ್ರ ಬೇಡ ಎಂದ ದೈವ ನರ್ತಕರು
ಇನ್ನು ನಟ ಚೇತನ್ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ದಯಾನಂದ ಜಿ ಕತ್ತಲೆಸಾರ್, ನಾವು ದೈವಾರಾಧಕರು. ನಾವು ಹಿಂದೂ ಧರ್ಮದವರು. ಸಂವಿಧಾನದಲ್ಲೇ ನಮ್ಮದು ಹಿಂದೂ ಧರ್ಮ ಅಂತಾ ಉಲ್ಲೇಖ ಇದೆ. ನಾವು ಮಾತ್ರವಲ್ಲದೇ ದೈವಾರಾಧನೆಯ ಹದಿನಾರು ವರ್ಗದವರೂ ಹಿಂದೂಗಳೇ. ನಾವು ಹಿಂದೂ ಸಾಗರದ ಮೀನುಗಳು, ಈ ಸಾಗರದಿಂದ ಹೊರತೆಗೆದು ನಮ್ಮನ್ನು ಸಾಯಿಸುವ ಷಡ್ಯಂತ್ರ ಬೇಡ ಎಂದು ಕತ್ತಲೆಸಾರ್ ಹೇಳಿದ್ದಾರೆ.

ನಟ ಚೇತನ್ ವಿರುದ್ಧ ಕಾನೂನು ಹೋರಾಟ
ಇನ್ನು ಪರವ ಸಮುದಾಯ ಮುಖಂಡ ಡಾ.ರವೀಶ್ ಪರವ ಮಾತನಾಡಿ, "ದೈವಾರಾಧನೆಯ ಹದಿನಾರು ವರ್ಗದವರು ಆರ್ಥಿಕವಾದ ಸಧೃಡರಲ್ಲ. ಕೊಲಿ ಕೆಲಸ ಮಾಡುವವರು ಅನೇಕರಿದ್ದಾರೆ. ದೈವ ನರ್ತಕರು ಹಿಂದೂಗಳಲ್ಲ ಎಂಬ ಷಡ್ಯಂತ್ರವನ್ನು ಪರವ ಸಮುದಾಯ ಖಂಡಿಸುತ್ತದೆ. ಈ ಹೇಳಿಕೆ ನೀಡಿದವರಿಗೆ ದೈವಾರಾಧನೆಯ ಬಗ್ಗೆ ಮಾಹಿತಿ ಇಲ್ಲ. ಹದಿನಾರು ವರ್ಗ ಸೇರಿದರೆ ಮಾತ್ರ ದೈವಾರಾಧನೆಯಾಗುತ್ತದೆ. ನಟ ಚೇತನ್, ಹೇಳಿಕೆಯನ್ನು ವಾಪಸ್ ತೆಗೆದುಕೊಳ್ಳಬೇಕು. ಕ್ಷಮೆಯಾಚನೆ ಮಾಡಬೇಕು. ಮಾಡದಿದ್ದರೆ ಕಾನೂನು ಹೋರಾಟ ಮಾಡುವುದಾಗಿ," ಎಚ್ಚರಿಕೆ ನೀಡಿದ್ದಾರೆ.

ಸರ್ಕಾರ ಬಳಿ ಬೇಡಿಕೆ ಇಟ್ಟ ನಲಿಕೆ ಸಮಾಜ
ಇನ್ನು ನಲಿಕೆ ಸಮಾಜದ ಉಡುಪಿ ಜಿಲ್ಲಾಧ್ಯಕ್ಷ ಪಾಂಡುರಂಗ ನಲಿಕೆ ಮಾತನಾಡಿ, "ಮಾಸಾಶಾನ ಎಲ್ಲರಿಗೂ ನೀಡಬೇಕು. ಕೆಲವರಿಗೆ ಊಟಕ್ಕೆ ಗತಿಯಿಲ್ಲ. ಅಂತಹವರಿಗೆ ಮಾಸಾಶಾನ ಸಿಕ್ಕಿದರೆ ಉಪಕಾರವಾಗುತ್ತದೆ. 50 ವರ್ಷದ ಮೇಲೆ ಚಾಕರಿ ಮಾಡುವವರು ಕಡಿಮೆ ಇದ್ದಾರೆ .ಅಸ್ರಣ್ಣ, ಕೊರಗ, ಮಡಿವಾಖ, ಗಾಣಿಗ, ಬಿಲ್ಲವ, ಬಂಟ, ಗೌಡ್ರು, ಮೊಗವೀರ, ಮುಂಡಾಲ, ಬ್ಯಾರಿ ಸಮುದಾಯ ಸೇರಿದಂತೆ ಹದಿನಾರು ವರ್ಗ ದೈವಾರಾಧನೆಯ ಕ್ಷೇತ್ರದಲ್ಲಿ ದುಡಿಯುತ್ತಿದೆ. ಅವರಿಗೂ ಸರ್ಕಾರ ಮಾಸಾಶಾನ ನೀಡಬೇಕು," ಎಂದು ಪಾಂಡುರಂಗ ನಲಿಕೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.












Click it and Unblock the Notifications