ಮಂಗಳೂರಿಗೆ ಹೋಗುವಂತಿಲ್ಲ ಸಿದ್ದರಾಮಯ್ಯ, ಪೊಲೀಸರಿಂದ ನಿಷೇಧ
ಮಂಗಳೂರು, ಡಿಸೆಂಬರ್ 21: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಂಗಳೂರು ಪ್ರವೇಶಿಸದಂತೆ ಪೊಲೀಸರು ನಿಷೇಧ ಹೇರಿದ್ದಾರೆ.
ಈ ಬಗ್ಗೆ ಸಿದ್ದರಾಮಯ್ಯ ಅವರಿಗೆ ನೊಟೀಸ್ ಜಾರಿ ಮಾಡಿರುವ ಮಂಗಳೂರು ಪೊಲೀಸ್ ಕಮೀಷನರ್, ಡಿಸೆಂಬರ್ 22 ರವರೆಗೆ ನೀವು (ಸಿದ್ದರಾಮಯ್ಯ) ರೈಲು, ವಾಹನ, ವಿಮಾನ ಯಾವುದರ ಮೂಲಕವೂ ಮಂಗಳೂರು ಪ್ರವೇಶಿಸುವಂತಿಲ್ಲ' ಎಂದು ನೊಟೀಸ್‌ನಲ್ಲಿ ಸೂಚಿಸಲಾಗಿದೆ.
ಸಿದ್ದರಾಮಯ್ಯ ಅವರು ನಿನ್ನೆಯೇ ಮಂಗಳೂರು ಭೇಟಿ ನೀಡಬೇಕಿತ್ತು. ಆದರೆ ಕಾರ್ಯಕ್ರಮ ರದ್ದಾಗಿ ಇಂದು ಮಂಗಳೂರಿಗೆ ಸಿದ್ದರಾಮಯ್ಯ ಹೋಗುವ ಕಾರ್ಯಕ್ರಮ ಇತ್ತು. ಆದರೆ ಪೊಲೀಸರು ನೊಟೀಸ್ ಜಾರಿ ಮಾಡಿರುವ ಕಾರಣ ಸಿದ್ದರಾಮಯ್ಯ ಮಂಗಳೂರು ಭೇಟಿ ಸಾಧ್ಯವಾಗುವಂತಿಲ್ಲ.

19 ನೇ ತಾರೀಖು ನಡೆದ ಪ್ರತಿಭಟನೆಯಲ್ಲಿ ಹಿಂಸಾಚಾರ ಸಂಭವಿಸಿದ್ದು, ಸಿದ್ದರಾಮಯ್ಯ ಮಂಗಳೂರಿಗೆ ಭೇಟಿ ನೀಡಿದರೆ ಪ್ರತಿಭಟನೆ ಹೆಚ್ಚಾಗುವಾ ಸಾಧ್ಯತೆ ಇರುವ ಕಾರಣ ಐಪಿಸಿ 144(2) ಅನ್ವಯ ಸಿದ್ದರಾಮಯ್ಯ ಮಂಗಳೂರು ಭೇಟಿಗೆ ನಿಷೇಧ ಹೇರಿರುವುದಾಗಿ ಮಂಗಳೂರು ಪೊಲೀಸ್ ಆಯುಕ್ತ ನೊಟೀಸ್‌ನಲ್ಲಿ ಹೇಳಿದ್ದಾರೆ.
ಮಂಗಳೂರು ಪೊಲೀಸರು ನೀಡಿರುವ ನೊಟೀಸ್ ಅನ್ನು ವಿರೋಧಿಸಿರುವ ಸಿದ್ದರಾಮಯ್ಯ, ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಸಿದ್ದರಾಮಯ್ಯ ''ವಾಹನ, ರೈಲು, ವಿಮಾನ ಯಾವುದರ ಮೂಲಕವೂ ನಾನು ಮಂಗಳೂರು ಪ್ರವೇಶ ಮಾಡಬಾರದೆಂದು ಪೊಲೀಸರು ಆದೇಶ ಹೊರಡಿಸಿದ್ದಾರೆ. ಯಡಿಯೂರಪ್ಪ ಅವರೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೇಳಿ ತುರ್ತುಪರಿಸ್ಥಿತಿ ಹೇರಿ ನಮ್ಮನ್ನೆಲ್ಲ ಜೈಲಿಗೆ ಹಾಕಿ, ನಿಮ್ಮ ಮನಸೋಇಚ್ಛೆ ರಾಜ್ಯಭಾರ ಮಾಡಿ. ನಮ್ಮ ಜನರನ್ನು ನಾವು ಭೇಟಿಯಾಗದಂತೆ ನಿಷೇಧಿಸಿ ಹಿಂಸಿಸಬೇಡಿ'' ಎಂದು ಮನವಿ ಮಾಡಿದ್ದಾರೆ.
ನಿನ್ನೆ ಮಂಗಳೂರಿಗೆ ಭೇಟಿ ನೀಡಿದ್ದ ಕಾಂಗ್ರೆಸ್ ಹಿರಿಯ ಶಾಸಕರು, ಮಾಜಿ ಸಚಿವರುಗಳಾದ ರಮೇಶ್ ಕುಮಾರ್, ಎಂ.ಬಿ.ಪಾಟೀಲ್ ಹಾಗೂ ಇನ್ನೂ ಹಲವು ಮುಖಂಡರನ್ನು ವಿಮಾನ ನಿಲ್ದಾಣದಲ್ಲಿಯೇ ಪೊಲೀಸರು ಬಂಧಿಸಿದ್ದರು.












Click it and Unblock the Notifications