ರಸ್ತೆ ಮರು ನಾಮಕರಣಕ್ಕೆ 'ಅಲೋಶಿಯಸ್' ಹಳೆ ವಿದ್ಯಾರ್ಥಿಗಳ ವಿರೋಧ
ಮಂಗಳೂರು, ಜುಲೈ 28: ಮಂಗಳೂರಿನ ಕ್ಯಾಥೋಲಿಕ್ ಕ್ಲಬ್ ನಿಂದ ಅಂಬೇಡ್ಕರ್ ವೃತ್ತದವರೆಗಿನ "ಸಂತ ಅಲೋಶಿಯಸ್ ಕಾಲೇಜು ರಸ್ತೆ"ಯನ್ನು ಮೂಲ್ಕಿ ಸುಂದರರಾಮ ಶೆಟ್ಟಿ ರಸ್ತೆಎಂದು ಪುನರ್ ನಾಮಕರಣ ಮಾಡುವ ಪ್ರಕ್ರಿಯೆಗೆ 'ಸಂತ ಅಲೋಶಿಯಸ್ ಕಾಲೇಜು ಹಳೆ ವಿದ್ಯಾರ್ಥಿಗಳ ಸಂಘಟನೆ' ತೀವ್ರ ವಿರೋಧ ವ್ಯಕ್ತಪಡಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಹಳೆ ವಿದ್ಯಾರ್ಥಿ ಸಂಘ, "ಪುನರ್ ನಾಮಕರಣ ಮಾಡುವ ಪ್ರಕ್ರಿಯೆಗೆ ಸಂತ ಅಲೋಶಿಯಸ್ ಕಾಲೇಜು ತೀವ್ರ ವಿರೋಧ ವ್ಯಕ್ತ ಪಡಿಸಿ ಪ್ರತಿಭಟನೆ ಮಾಡಿದಾಗ ರಾಜ್ಯ ಸರಕಾರ ಪುನರ್ ನಾಮಕರಣಕ್ಕೆ 1-07-2017 ರಂದು ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಜಿಲ್ಲಾಉಸ್ತುವಾರಿ ಸಚಿವರ ನೇತೃತ್ವದಲ್ಲಿ ವಿಜಯಾ ಬ್ಯಾಂಕ್ ನೌಕರರ ಸಂಘ ಹಾಗೂ ಸಂತ ಅಲೋಶಿಯಸ್ ಕಾಲೇಜಿನ ಆಡಳಿತ ಮಂಡಳಿ ಜೊತೆ ಮಾತುಕತೆ ನಡೆಸಿ ಸೌಹಾರ್ದಯುತವಾದ ಪರಿಹಾರ ಕಂಡುಕೊಳ್ಳಲು ಪ್ರಯತ್ನ ನಡೆಸಲಾಗುತ್ತಿದೆ. ಇದಕ್ಕೆ ಕಾಲೇಜಿನ ಕಡೆಯಿಂದ ಸಂಪೂರ್ಣ ಸಹಕಾರ ನೀಡಲಾಗಿದೆ," ಎಂದು ಹೇಳಿದೆ.

"ಆದಾಗ್ಯೂ ಕೆಲವು ಸಂಘಟನೆಗಳು ಮುಖ್ಯವಾಗಿ ಬಂಟರಯಾನೆ ನಾಡವರ ಸಂಘ ಅವ್ಯಾಹತವಾಗಿ ಸಂತ ಅಲೋಶಿಯಸ್ ಕಾಲೇಜಿನ ವಿರುದ್ಧ, ಜವಾಬ್ದಾರಿಯುತ ಶಾಸಕರುಗಳ ವಿರುದ್ಧ ಜಾತಿ ರಾಜಕಾರಣ ಮುಂತಾದ ಅಸಂಬದ್ಧ ಆರೋಪಗಳನ್ನು ಮಾಡುತ್ತಾ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡುತ್ತಾ ಮಾತುಕತೆಗೆ ಸಹಕರಿಸುವ ಬದಲಾಗಿ ಸಂಘರ್ಷದ ವಾತಾವರಣ ನಿರ್ಮಾಣ ಮಾಡುತ್ತಿವೆ," ಎಂದು ಹಳೆ ವಿದ್ಯಾರ್ಥಿಗಳ ಸಂಘ ಆರೋಪಿಸಿದೆ.
"ಅಲೋಶಿಯಸ್ ಸಂಸ್ಥೆ ಎಲ್ಲಾ ಸಮುದಾಯಗಳಿಗೆ ಸೇರಿದ ಸಂಸ್ಥೆ. ಅಲ್ಲಿರುವುದು ಸೌಹಾರ್ದತೆಯ ಅಲೋಶಿಯಸ್ ಸಮುದಾಯ ಮಾತ್ರ. ಯಾವತೂ ಜಾತಿ, ಧರ್ಮದ ಹೆಸರಿನಲ್ಲಿ ಭೇದ ಭಾವತೋರಿಲ್ಲ. ರಾಜಕಾರಣ ಮಾಡಿಲ್ಲ. ಇಲ್ಲ ಸಲ್ಲದ ಆಪಾದನೆಗಳನ್ನು ಮಾಡುವುದು ನೋವಿನ ಸಂಗತಿ," ಎಂದು ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಜತೆಗೆ, "ಕಳೆದ 137 ವರ್ಷಗಳಿಂದ ಸಂತ ಅಲೋಶಿಯಸ್ ಕಾಲೇಜು ತಂದಿರುವ ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಪರಿವರ್ತನೆ, ವಿಶ್ವದ್ಯಾಂತ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಪ್ರವಾಸಿ ಕೇಂದ್ರವಾಗಿ (ಹೆರಿಟೇಜ್ ವಿಭಾಗ) ಹಾಗೂ ಸಲ್ಲಿಸಿರುವ ಗಣನೀಯ ಸೇವೆಯನ್ನು ಪರಿಗಣಿಸಿ ನಗರ ಹೆಮ್ಮೆ ಪಡಬಹುದಾದ ಸಂಸ್ಥೆಗೆ ಗೌರವ ತೋರಿಸುವ ಸೌಜನ್ಯದ ದೃಷ್ಟಿಯಿಂದ 'ಸಂತ ಅಲೋಶಿಯಸ್ ರಸ್ತೆ'ನಾಮಕರಣವನ್ನು ಮುಂದುವರೆಸಬೇಕೆಂದು," ಸಂಘವು ಆಗ್ರಹಿಸಿದೆ.
ಇದರೊಂದಿಗೆ ರಸ್ತೆ ನಾಮಕರಣದ ಕುರಿತು ತೀರ್ಮಾನ ತೆಗೆದುಕೊಳ್ಳಲು, ಹಳೆ ವಿದ್ಯಾರ್ಥಿಗಳ ಸಂಘಟನೆ ನೇತೃತ್ವದಲ್ಲಿ ಈಗ ಕಲಿಯುತ್ತಿರುವ ವಿದ್ಯಾರ್ಥಿಗಳು, ಅಲೋಶಿಯಸ್ ಸಂಸ್ಥೆಯ ಅಭಿಮಾನಿಗಳು, ಹಿತೈಷಿಗಳು, ನಗರದಗಣ್ಯ ನಾಗರೀಕರನ್ನು ಒಟ್ಟುಗೂಡಿಸಿ ವಿಶಾಲ ವ್ಯಾಪ್ತಿಯ ಕ್ರಿಯಾ ಸಮಿತಿಯನ್ನು ರಚಿಸಲಾಗಿದೆ.












Click it and Unblock the Notifications