ರಿಯಾದ್ ನಲ್ಲಿ ಮಂಗಳೂರು ಮೂಲದ ವ್ಯಕ್ತಿ ನಿಧನ
ರಿಯಾದ್ (ಸೌದಿ ಅರೇಬಿಯಾ), ಸೆಪ್ಟೆಂಬರ್ 19: ಮಂಗಳೂರು ಸಮೀಪದ ನಾಟೆಕಲ್ ಉರುಮಣೆ ನಿವಾಸಿ ಅಶ್ರಫ್ (38) ಎನ್ನುವರು ಸೌದಿ ಅರೇಬಿಯಾದ ಗೊರ್ನಾತ ಎಂಬಲ್ಲಿ ಹೃದಾಯಘಾತದಿಂದ ಮೃತಪಟ್ಟಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ರಿಯಾದ್ ಪ್ರಾಂತ್ಯದ ಗೊರ್ನಾತ ಎಂಬಲ್ಲಿನ ಸೂಪರ್ ಮಾರ್ಕೆಟ್ ವೊಂದರಲ್ಲಿ ಸೇಲ್ಸ್ ಮನ್ ಆಗಿದ್ದ ಅಶ್ರಫ್ ಸೋಮವಾರ ಬೆಳಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರ ಅಂತ್ಯ ಕ್ರಿಯೆಯನ್ನು ಇಲ್ಲಿನ ನಸೀಂ ಸಾರ್ವಜನಿಕ ದಫನ ಭೂಮಿಯಲ್ಲಿ ನಡೆಸಲಾಗಿದೆ.

ಈ ಕುರಿತಂತೆ ಮೃತರ ಮಿತ್ರರು ಸ್ಥಳೀಯ ಕೆಸಿಎಫ್ ಕಾರ್ಯಕರ್ತರಿಗೆ ಸುದ್ದಿ ಮುಟ್ಟಿಸಿದ್ದಾರೆ, ಕೂಡಲೇ ಇದಕ್ಕೆ ಸ್ಪಂದಿಸಿದ ಕೆಸಿಎಫ್ ರಿಯಾದ್ ಝೋನಲ್ ನ ಸಾಂತ್ವನ ವಿಭಾಗದ ತಂಡವು ಮೃತರ ಪಾರ್ಥಿವ ಶರೀರವನ್ನು ಇರಿಸಲಾಗಿದ್ದ ಶುಮೇಶಿ ಆಸ್ಪತ್ರೆಗೆ ತೆರಳಿ ಕುಟುಂಬಕ್ಕೆ ಹಾಗೂ ಮಿತ್ರರಿಗೆ ಸಾಂತ್ವನ ಹೇಳಿದೆ.
ತದನಂತರ ಮೃತರ ಮರಣೋತ್ತರ ಕ್ರಿಯೆಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳಿಂದ ದೊರೆಯಬೇಕಾಗಿದ್ದ ಕಾಗದಪತ್ರಗಳನ್ನು ಸಂಗ್ರಹಿಸಲು ಹಾಗೂ ಊರಿನ ಕುಟುಂಬ ವರ್ಗದಿಂದ ಅನುಮತಿ ಪತ್ರ ಪಡೆಯಲು ಕೆಸಿಎಫ್ ರಿಯಾದ್ ಝೋನಲ್ ಸಾಂತ್ವನ ವಿಭಾಗದ ಅಧ್ಯಕ್ಷ ರಮೀಝ್ ಕುಳಾಯಿ ಅವರಿಗೆ ಮುಖಂಡರಾದ ಹಂಝ ಮೈಂದಾಳ ,ಮಜೀದ್ ವಿಟ್ಲ ಹಾಗೂ ಮೃತರ ಸಂಬಂಧಿ ಹಸೈನಾರ್ ಅರ್ಕಾನ ಸಹಕರಿಸಿದ್ದರು.
ಕಳೆದ ಒಂದು ವರ್ಷದ ಹಿಂದೆಯಷ್ಟೆ ಊರಿಗೆ ಹೋಗಿ ಮದುವೆಯಾಗಿ ಬಂದಿದ್ದ ಅಶ್ರಫ್ ರವರು ಮಂದಿನ ಅಕ್ಟೋಬರ್ 6ಕ್ಕೆ ರಜೆಯ ಮೇಲೆ ತೆರಳಲು ಟಿಕೆಟ್ ಖರೀದಿಸಿದ್ದರು ಎನ್ನಲಾಗಿದೆ.












Click it and Unblock the Notifications