ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುನ್ನೂರು ಗ್ರಾಮದ ಗೌಜಿ ಗಮ್ಮತ್ತು ಚಿತ್ರಗಳು

|
Google Oneindia Kannada News

ಮಂಗಳೂರು. ನ.12 : ಅಲ್ಲಿ ಹತ್ತೂರ ಜನರು ಸೇರಿದ್ದರು. ಎಲ್ಲರೂ ಒಂದಾಗಿ ಸೇರಿ ಕೆಸರಿನಲ್ಲಿ ಆಡಿ ನಕ್ಕು-ನಲಿದರು. ತಮ್ಮವರು ಕೆಸರು ನೀರಿನಲ್ಲಿ ಕಷ್ಟಪಡುವಾಗ ದೂರದಲ್ಲಿ ನಿಂತು ನಗುತ್ತಿದ್ದವರೂ ನಂತರ ಕೆಸರಿಗಿಳಿದದರು. ಮಕ್ಕಳು, ವೃದ್ಧರು, ಯುವಕರು, ಯುವತಿಯರು ಹೀಗೆ ಎಲ್ಲರೂ ಗೌಜಿ ಗಮ್ಮತ್ತಿನಲ್ಲಿ ಪಾಲ್ಗೊಂಡಿದ್ದರು.

ಮಂಗಳೂರಿನ ಕುತ್ತಾರ್ ಸಮೀಪದ ಮುನ್ನೂರು ಗ್ರಾಮ ಭಾನುವಾರ ಗೌಜಿ ಗಮ್ಮತ್ತಿಗೆ ಸಾಕ್ಷಿಯಾಗಿತ್ತು. 'ಮುನ್ನೂರು ಗ್ರಾಮಡೊಂಜಿ ಗೌಜಿ' ಹೆಸರಿನಲ್ಲಿ ತುಳುನಾಡಿನ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕೆಸರಿನಲ್ಲಿ ಇಳಿದು ಮೈ, ಕೈಗೆ ಮಣ್ಣು ಬಳಿದುಕೊಂಡು ಜನರು ಆಟದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

ಸೌಹಾರ್ದ ಕಲಾವಿದರು ಕುತ್ತಾರು ಹಾಗೂ ಶ್ರೀ ಜೈ ಹನುಮಾನ್ ಕ್ರೀಡಾಮಂಡಳಿ ಬಟ್ಟೆದಡಿ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಮುನ್ನೂರು ಗ್ರಾಮಡೊಂಜಿ ಗೌಜಿಯು ದೆಪ್ಪೆಲಿಮಾರುಗದ್ದೆಯಲ್ಲಿ ನಡೆಯಿತು. ಹತ್ತೂರ ತುಳುವರು ಒಂದೆಡೆ ಸೇರಿ ತುಳುನಾಡಿನ ಕ್ರೀಡೆ, ಕಲಾಪ್ರಕಾರಗಳನ್ನು ಸ್ವತ: ಅನುಭವಿಸಿದರು.

ಕೆಸರು, ಮಣ್ಣಿನಿಂದ ದೂರ ಓಡುವ ಇಂದಿನ ಯುವಕ ಯುವತಿಯರು, ಕೆಸರಿನ ಗದ್ದೆಗಿಳಿದು ಸಂಭ್ರಮ ಪಟ್ಟರು. ಬಿಳಿಬಟ್ಟೆ ಹಾಕಿಕೊಂಡು ಬಂದವರು ಕ್ರೀಡಾಕೂಟದಿಂದ ಮನೆಗೆ ಮರಳುವಾಗ ಕೆಸರಿನಲ್ಲಿ ಮಿಂದೆದ್ದು, ಕೆಂಪಾಗಿದ್ದರು.

ಮಡಕೆ ಒಡೆಯುವ ಸ್ಪರ್ಧೆ, ಕೆಸರಿನಲ್ಲಿ ಹಗ್ಗಜಗ್ಗಾಟ, ಥ್ರೋಬಾಲ್, ತೆಪ್ಪಂಗಾಯಿ, ಅಡಿಕೆ ಮಡಲಿನಲ್ಲಿ ಕುಳ್ಳಿರಿಸಿ ಎಳೆಯುವುದು, ಓಟ ಮುಂತಾದ ಆಟಗಳು ನಡೆದವು.

ಕೆಸರಿನಲ್ಲಿನ ಆಟಗಳ ಜೊತೆ ಅಕ್ಕಿಮುಡಿ ಕಟ್ಟುವುದು, ತೆಂಗಿನ ಗರಿಯಿಂದ ಆಕೃತಿ ರಚನೆ, ಮಣ್ಣಿನಿಂದ ಆಕೃತಿ ರಚನೆ, ಬುಟ್ಟಿ ಹೆಣೆಯುವುದು, ತೆಂಗಿನಗರಿ ಹೆಣೆಯುವುದು ಮುಂತಾದ ಸ್ಪರ್ಧೆಗಳು ನಡೆದವು.

ಕೆಸರಿನಲ್ಲಿ ಆಡಿ ದಣಿದವರಿಗೆ ಮಧ್ಯಾಹ್ನ ಏರ್ಪಡಿಸಿದ್ದ ಊಟ ಶಕ್ತಿ ನೀಡಿತು. ತಿಮರೆ ಚಟ್ನಿ, ಬಲ್ಯಾರ್ ಬಜ್ಜಿ, ಅರ್ತಿಕಾಯಿ, ಉಪ್ಪಡ್ ಪಚ್ಚಿರ್, ಕಡ್ಲೆ ಸುಕ್ಕ, ಗೋಧಿ ಪಾಯಸ, ಅನ್ನ, ಸಾಂಬಾರು ತಿಂದವರು ಮಧ್ಯಾಹ್ನದ ನಂತರ ನಡೆಯುವ ಆಟದಲ್ಲಿ ಪಾಲ್ಗೊಳ್ಳಲು ಸಿದ್ಧವಾದರು.

ಮುನ್ನೂರು ಗ್ರಾಮದಲ್ಲಿ ಬೆಳಗ್ಗೆಯಿಂದ ನಡೆದ ಕೆಸರಿನ ಆಟದಲ್ಲಿ ಪಾಲ್ಗೊಂಡಿದ್ದ ಜನರು ಸಂಜೆ ಸೂರ್ಯ ಮುಳುಗುವ ಹೊತ್ತಿಗೆ ಕೆಸರು ಗದ್ದೆಯಿಂದ ಮೇಲೆ ಬಂದು ಮನೆಯತ್ತ ಹೆಜ್ಜೆ ಹಾಕಿದರು. [ಚಿತ್ರಗಳು : ಐಸಾಕ್ ರಿರ್ಚರ್ಡ್, ಮಂಗಳೂರು]

village
English summary
Mangaluru : 'Gramoda Gouji' a programme village celebration and the traditional games of Tulunaldu held on November 9. Gramoda Gouji celebration in Pics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X