ಮಂಗಳೂರು: ಅ.28ಕ್ಕೆ ಕುದ್ರೋಳಿಯಲ್ಲಿ ಗೂಡು ದೀಪ ಸ್ಪರ್ಧೆ
ಮಂಗಳೂರು, ಅಕ್ಟೋಬರ್, 26: ದೀಪಗಳ ಹಬ್ಬ ದೀಪಾವಳಿ ಪ್ರಯುಕ್ತ ನಮ್ಮ ಕುಡ್ಲ ಸುದ್ದಿವಾಹಿನಿ ವತಿಯಿಂದ ಕಳೆದ 17 ವರ್ಷಗಳಿಂದ ಗೂಡುದೀಪ ಸ್ಪರ್ಧೆ ಆಯೋಜಿಸಲಾಗುತ್ತಿದೆ.
ಈ ಬಾರಿಯೂ 17ನೇ ವರ್ಷದ ಗೂಡುದೀಪ ಸ್ಪರ್ಧೆ ಅ. 28ರಂದು ಸಂಜೆ ನಾಲ್ಕು ಗಂಟೆಗೆ ಕುದ್ರೋಳಿ ಶ್ರೀಗೋಕರ್ಣಾಥೇಶ್ವರ ಕ್ಷೇತ್ರದಲ್ಲಿ ನಡೆಯಲಿದೆ ಎಂದು ನಮ್ಮ ಕುಡ್ಲ ಚಾನೆಲ್ ನಿರ್ದೇಶಕ ಹರೀಶ್ ಬಿ. ಕರ್ಕೇರಾ ಹೇಳಿದರು.

ಸಾಂಪ್ರದಾಯಿಕ, ಆಧುನಿಕ ಹಾಗೂ ವಿಶೇಷ ಮಾದರಿ ಹೀಗೆ ಮೂರು ವಿಭಾಗಗಳಲ್ಲಿ ಗೂಡುದೀಪ ಸ್ಪರ್ಧೆ ನಡೆಯಲಿದೆ.
ಮೂರು ವಿಭಾಗಗಳಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆದವರಿಗೆ ಚಿನ್ನದ ಪದಕಗಳನ್ನು ನೀಡಲಾಗುತ್ತಿದ್ದು, ತೃತೀಯ ಸ್ಥಾನ ಪಡೆದವರಿಗೆ ಬೆಳ್ಳಿಯ ಪದಕ ನೀಡಲಾಗುವುದು. ಹಾಗೆಯೇ ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೂ ಸ್ಮರಣಿಕೆ ಹಾಗೂ ಸಿಹಿತಿಂಡಿ ನೀಡಲಾಗುವುದು ಎಂದು ಕರ್ಕೇರಾ ಹೇಳಿದರು.

ಜಾತಿ ಮತ ಭೇದ ಭಾವವಿಲ್ಲದೆ ಸೌಹಾರ್ದ ಸಂದೇಶವನ್ನು ಸಾರುವ ದೀಪಗಳ ಹಬ್ಬ ದೀಪಾವಳಿಯನ್ನು ಸಡಗರದಿಂದ ಆಚರಿಸಲು ಸಕಲ ಸಿದ್ದತೆಗಳನ್ನು ಮಾಡಿರುವುದಾಗಿ ಹಾಗೆಯೇ ಗೂಡುದೀಪ ಸ್ಪರ್ಧೆಯಲ್ಲಿ ಅತೀ ಹೆಚ್ಚು ಗೂಡುದೀಪ ತರುವ ಸಂಸ್ಥೆಗಳಿಗೆ ವಿಶೇಷ ಬಹುಮಾನ ನೀಡಲಾಗುವುದು ಎಂದರು.
ತುಳುನಾಡಿನಲ್ಲಿ ಹುಟ್ಟಿದ ವಿಶೇಷ ಸಾಧಕರಿಗೆ 'ನಮ್ಮ ತುಳುವೇರ್' ಪ್ರಶಸ್ತಿ ಹಾಗೂ ಸಾಹಿತ್ಯ ಕಲೆ ಮತ್ತು ಸಾಂಸ್ಕೃತಿಕ ರಂಗದಲ್ಲಿ ವಿಶೇಷ ಸೇವೆ ಸಲ್ಲಿಸಿದವರಿಗೆ ನಮ್ಮ ಕುಡ್ಲ ಪ್ರಶಸ್ತಿ ಹಾಗೂ ನಮ್ಮ ಕುಡ್ಲ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದು ತಿಳಿಸಿದರು.












Click it and Unblock the Notifications