Mangaluru drugs Case: ಹೈಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ ವಕೀಲರು; ಪೊಲೀಸ್ ಕಮಿಷನರ್ ವಿರುದ್ಧ ಆಕ್ರೋಶ ಏಕೆ?
ಮಂಗಳೂರು, ಜನವರಿ, 24: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೀವ್ರ ಸಂಚಲನ ಸೃಷ್ಟಿಸಿದ ಮಂಗಳೂರು ನಗರದ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳ ಡ್ರಗ್ಸ್ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಈ ಪ್ರಕರಣದಲ್ಲಿ ಪೊಲೀಸರು ಕರ್ತವ್ಯ ಲೋಪ ಎಸಗಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಸರಿಯಾಗಿ ತನಿಖೆ ನಡೆಸದೆ ವೈದ್ಯಕೀಯ ವಿದ್ಯಾರ್ಥಿಗಳು, ವೈದ್ಯರನ್ನು ಬಂಧಿಸಿರುವ ಪೊಲೀಸ್ ಆಯುಕ್ತರ ವಿರುದ್ಧ ಫಾರೆನ್ಸಿಕ್ ತಜ್ಞ ಹಾಗೂ ವಕೀಲ ಸೇರಿ ಜಂಟಿಯಾಗಿ ಹೈಕೋರ್ಟ್ ಮೆಟ್ಟಿಲೇರುವ ನಿರ್ಧಾರ ಕೈಗೊಂಡಿದ್ದಾರೆ.
ನಗರದ ಖ್ಯಾತ ವಕೀಲ, ಮಂಗಳೂರು ವಕೀಲರ ಸಂಘದ ಉಪಾಧ್ಯಕ್ಷ ಮನೋರಾಜ್ ಆರ್. ಹಾಗೂ ಫಾರೆನ್ಸಿಕ್ ತಜ್ಞ ಪ್ರೊ.ಡಾ. ಮಹಾಬಲ ಶೆಟ್ಟಿಯವರು ಪೊಲೀಸ್ ಇಲಾಖೆಯ ನಡೆಯನ್ನು ವಿರೋಧಿಸಿದ್ದಾರೆ. ಪೊಲೀಸರು ಸರಿಯಾಗಿ ತನಿಖೆ ನಡೆಸಿಲ್ಲ. ಈ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸದೆ ವೈದ್ಯರನ್ನು, ವೈದ್ಯಕೀಯ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಗಾಂಜಾ ಸೇವನೆ ಮಾಡುವವರನ್ನು ಗಾಂಜಾ ಪೆಡ್ಲರ್‌ಗಳೆಂದು ಬಿಂಬಿಸಿ, ಅವರ ಭವಿಷ್ಯಕ್ಕೇ ಕೊಳ್ಳಿ ಇಡಲಾಗಿದೆ ಎಂದು ಆರೋಪಿಸಿದ್ದಾರೆ.
ಮಂಗಳೂರಿನ 783 ಮಂದಿಗೆ ರೌಡಿಶೀಟರ್ ಪಟ್ಟದಿಂದ ಮುಕ್ತಿ
ಆರೋಪಿಗಳನ್ನು ನೇರವಾಗಿ ಬಂಧಿಸುವಂತಿಲ್ಲ
ಪೊಲೀಸರು ಪ್ರಕರಣದಲ್ಲಿ ಪ್ರಾಥಮಿಕ ಸ್ಕ್ರೀನಿಂಗ್ ತಪಾಸಣೆ ಮಾಡಿ ಗಾಂಜಾ ಸೇವನೆ ಮಾಡಿರುವ ಆರೋಪ ಮಾಡಿದ್ದಾರೆ. ಆದರೆ ಎಫ್ಎಸ್ಎಲ್ ತಪಾಸಣೆ ಮಾಡಿ ಡ್ರಗ್ಸ್ ಸೇವನೆಯ ಬಗ್ಗೆ ಖಚಿತಪಡಿಸಿಲ್ಲ. ಎನ್‌ಡಿಪಿಎಸ್ ಕಾಯ್ದೆ 64ಎ ಪ್ರಕಾರ ಡ್ರಗ್ಸ್ ಸೇವಿಸಿರುವ ಆರೋಪಿಗಳನ್ನು ನೇರವಾಗಿ ಬಂಧಿಸುವಂತಿಲ್ಲ. ಕೇಂದ್ರ ಸರ್ಕಾರದ ಸೂಚನೆಯ ಮೇರೆಗೆ ಡ್ರಗ್ಸ್ ವ್ಯಸನಿಗಳ ಪುನರ್ವಸತಿ ಕೇಂದ್ರಕ್ಕೆ ಸೇರಿಸಬೇಕಿತ್ತು. ಈ ಪ್ರಕರಣದಲ್ಲಿ ಸಿಕ್ಕಿಬಿದ್ದವರು ಡ್ರಗ್ಸ್ ಸೇವನೆ ಮಾಡುವವರೇ ಹೊರತು, ಡ್ರಗ್ಸ್ ಪೆಡ್ಲರ್‌ಗಳಲ್ಲ ಎಂದು ಆರೋಪಿಸಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಲಿದ್ದಾರೆ. ಅಲ್ಲದೆ ಹೈಕೋರ್ಟ್ ನ್ಯಾಯಮೂರ್ತಿಗಳ ಮೂಲಕ ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಸಿಬಿಐ ತನಿಖೆಗೆ ವಹಿಸಬೇಕು
ಜೈಲಿನಲ್ಲಿ ಹೋಗಿ ಮಾತನಾಡಿದಾಗ ವಿದ್ಯಾರ್ಥಿಗಳಲ್ಲಿ ಕೆಲವರು ನಾವು ಪೆಡ್ಲರ್‌ಗಳಲ್ಲ, ಡ್ರಗ್ ಸೇವಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ಮಕ್ಕಳು ಆರೋಪಿಗಳಲ್ಲ, ವ್ಯವಸ್ಥೆಯಲ್ಲಿ ಸಂತ್ರಸ್ಥರಷ್ಟೇ. ಪೊಲೀಸರು ಯೂರಿನ್ ಮಾದರಿ ತೆಗೆದುಕೊಂಡು ಹೋಗಿ ಟೆಸ್ಟ್ ಮಾಡಿಸಿಕೊಂಡು ತಂದಿದ್ದಾರೆ. ಈ ವೇಳೆ ಪೊಲೀಸರು ಚೈನ್ ಆಫ್ ಕಸ್ಟಡಿ ಪಾಲನೆ ಮಾಡಿಲ್ಲ. ನಾವು ಅಧಿಕಾರಿಗಳನ್ನು ಭೇಟಿಯಾದಾಗ ಚಾರ್ಜ್ ಶೀಟ್‌ನಲ್ಲಿ ಹೆಸರು ತೆಗಿಯಬಹುದಲ್ಲವಾ ಎಂದು ಹೇಳಿದ್ದಾರೆ. ಈ ಪ್ರಕರಣವನ್ನು ಹೈಕೋರ್ಟ್ ನ್ಯಾಯಮೂರ್ತಿಗಳ ಮೂಲಕ ಸಿಬಿಐ ತನಿಖೆಗೆ ವಹಿಸಬೇಕು ಎಂದು ಮಂಗಳೂರು ವಕೀಲರ ಸಂಘದ ಉಪಾಧ್ಯಕ್ಷ ಮನೋರಾಜ್ ರಾಜೀವ ಹೇಳಿದ್ದಾರೆ.

ಏನಿದು ಪ್ರಕರಣ?
ನಗರದಲ್ಲಿ ಬಿಡಿಎಸ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ, ಯುಕೆ ಪ್ರಜೆಯನ್ನು ಜನವರಿ 7ರಂದು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿ ಎರಡು ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದರು. ವಿಚಾರಣೆ ವೇಳೆ ಆತ ಗಾಂಜಾ ವ್ಯಸನಿ ಹಾಗೂ ಪೆಡ್ಲರ್ ಎಂಬುದು ತಿಳಿದುಬಂದಿತ್ತು. ಈತ ನೀಡಿರುವ ಮಾಹಿತಿಯಂತೆ ಸಿಸಿಬಿ ಪೊಲೀಸರು ಇದುವರೆಗೆ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಸೇರಿದಂತೆ 24 ಜನರನ್ನು ಬಂಧಿಸಿದ್ದಾರೆ.