ಮಂಗಳೂರು ಜೈಲಿಗೆ ಬಂತು ಸಿಸಿಟಿವಿ ಸೌಲಭ್ಯ
ಮಂಗಳೂರು: ಮಂಗಳೂರು ಕೇಂದ್ರ ಕಾರಾಗೃಹಕ್ಕೆ ಸಿಸಿಟಿವಿ ಸೌಲಭ್ಯ ಬಂದಿದ್ದು, ಇನ್ನು ಜೈಲಿನ ಎಲ್ಲಾ ಆಗು ಹೋಗುಗಳ ಬಗ್ಗೆ ವಿಡಿಯೋ ದಾಖಲೆಗಳು ಪೊಲೀಸ್ ಇಲಾಖೆಗೆ ಸಿಗಲಿವೆ.
ಆದರೆ ಇದೀಗ ರಾಜ್ಯ ಕಾರಾಗೃಹ ಇಲಾಖೆ ಹಾಗೂ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಾಜ್ಯದ ಎಲ್ಲಾ ಸೆಂಟ್ರಲ್ ಮತ್ತು ಜಿಲ್ಲಾ ಕಾರಾಗೃಹದಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆಗೆ ನಿರ್ಧರಿಸಿದ್ದು, ಈ ಮುಖಾಂತರ ರಾಜ್ಯದ 8 ಸೆಂಟ್ರಲ್ ಜೈಲು ಮತ್ತು 20 ಜಿಲ್ಲಾ ಜೈಲುಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಪ್ರಕ್ರಿಯೆ ಪೂರ್ಣವಾಗಿದೆ. ಅದರಂತೆ, ಮಂಗಳೂರು ಜೈಲಿಗೂ ಸಿಸಿಟಿವಿ ಕ್ಯಾಮೆರಾ ಸೌಲಭ್ಯ ಬಂದಿದೆ.

ಇದರಿಂದಾಗಿ, ಜೈಲುಗಳ ಒಳ ಆವರಣಗಳಲ್ಲಿ ನಡೆಯುವ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಸಾಧ್ಯವಾಗಲಿದೆ.
ಈ ಮುಂಚೆ ರಾಜ್ಯದ ಸೆಂಟ್ರಲ್ ಜೈಲ್ ಗಳಾದ ಬೆಂಗಳೂರು, ಬೆಳಗಾವಿ , ಬಳ್ಳಾರಿ , ವಿಜಾಪುರ, ಗುಲ್ಬರ್ಗಾ, ಮೈಸೂರು, ಧಾರವಾಡ ಹಾಗೂ ತುಮಕೂರಿನಲ್ಲಿ 445 ಸಿಸಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಲಾಗಿತ್ತು.

ಇದರ ಮುಂದಿನ ಭಾಗವಾಗಿ ಜಿಲ್ಲಾ ಕಾರಾಗೃಹಗಳಾದ ತುಮಕೂರು, ಬೀದರ್, ಮಡಿಕೇರಿ, ಕಾರವಾರ, ಮಂಗಳೂರು, ರಾಯಚೂರು, ಶಿವಮೊಗ್ಗ, ಚಿತ್ರದುರ್ಗ, ಬಾಗಲಕೋಟೆ, ಚಾಮರಾಜನಗರ, ಹಾವೇರಿ, ಚಿಕ್ಕಬಳ್ಳಾಪುರ , ಉಡುಪಿ, ಕೊಪ್ಪಳ, ಚಿಕ್ಕಮಗಳೂರು,ಹಾಸನ ಕೋಲಾರ,ಮಂಡ್ಯ ಜಿಲ್ಲೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಪೂರ್ಣವಾಗಿದ್ದು, ಕಾರ್ಯನಿರ್ವಹಿಸಲು ಆರಂಭಿಸಿದೆ.

ಈಗಾಗಲೇ ಮಂಗಳೂರು ಕಾರಾಗೃಹ ಒಂದಿಲ್ಲೊಂದು ಸುದ್ದಿಯಲ್ಲಿ ಇರುತ್ತದೆ. ಜೈಲಿನಲ್ಲಿ ಕೊಲೆ, ಗೋಡೆ ಹಾರಿ ಖೈದಿ ಪರಾರಿ ಹೀಗೆ ನಾನಾ ರೀತಿಯ ಚಟುವಟಿಕೆಗಳನ್ನು ತಡೆಯಲು ಈ ಸಿಸಿ ಕ್ಯಾಮೆರಾ ಅಳವಡಿಕೆ ಸಹಾಯ ಮಾಡಲಿದೆ. ಜೈಲಿನ ಭದ್ರತೆ, ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ಇಡಲು ಕೂಡಾ ಸಹಾಯ ಮಾಡಲಿದೆ.

ರೊಟೇಷನ್ ಮಾದರಿ ಕ್ಯಾಮೆರಾಗಳು: ಸೆಂಟ್ರಲ್ ಹಾಗೂ ಜಿಲ್ಲಾ ಜೈಲುಗಳಲ್ಲಿ ಆಧುನಿಕ ಗುಣಮಟ್ಟದ ಕ್ಯಾಮೆರಾ ಅಳವಡಿಸಲಾಗಿದ್ದು, ಕೆಲವು ಕ್ಯಾಮೆರಾ ರೊಟೇಷನ್ ಮಾದರಿಯ ಕ್ಯಾಮೆರಾಗಳಾಗಿದ್ದು, ಜೈಲಿನ ಬಹುತೇಕ ಹೊರಾಂಗಣವನ್ನು ದೂರದಿಂದಲೇ ಸೆರೆಹಿಡಿಯುವ ಸಾಮರ್ಥ್ಯ ಹೊಂದಿದೆ.

ಇದಲ್ಲದೆ ಸೆಂಟ್ರಲ್ ಮತ್ತು ಜಿಲ್ಲಾ ಜೈಲುಗಳಲ್ಲಿ ಅಳವಡಿಸಲಾದ ಕ್ಯಾಮೆರಾದ ವೀಕ್ಷಣೆಗೆ ಸೂಪರಿಟೆಂಡೆಂಟ್ ಚೇಂಬರ್ ನಲ್ಲಿ ದೊಡ್ಡ ಟಿವಿ ಸ್ಕ್ರಿನ್ ಹಾಕಿ ವ್ಯವಸ್ಥೆ ಮಾಡಲಾಗಿದ್ದು, ಬೆಂಗಳೂರು ಬಂಧೀಖಾನೆಯ ಕಂಟ್ರೋಲ್ ರೂಮ್ ಕೇಂದ್ರೀಕೃತವಾಗಿ ಸಿಸಿ ಟಿವಿ ಗಳು ಕಾರ್ಯನಿರ್ವಹಿಸುತ್ತಿದೆ.












Click it and Unblock the Notifications