ಮಂಗಳೂರಿನಲ್ಲಿ ಅಕ್ರಮ ಗಾಂಜಾ ಮಾರಾಟ: ಓರ್ವನ ಬಂಧನ
ಮಂಗಳೂರು, ಜುಲೈ 22: ಕೇರಳದಿಂದ ಗಾಂಜಾವನ್ನು ಅಕ್ರಮವಾಗಿ ತಂದು ಮಂಗಳೂರಿನಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯೋರ್ವನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಗಾಂಜಾ ಸಾಗಾಟಕ್ಕೆ ಬಳಸಲಾಗುತ್ತಿದ್ದ ಕಾರು ಹಾಗು ಕಾರ್ ನ ಡಿಕ್ಕಿಯಲ್ಲಿ ಅಡಗಿಸಿ ಇಡಲಾಗಿದ್ದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ಮಂಗಳೂರು ಹೊರವಲಯದ ಕಾಟಿಪಳ್ಳ ನಿವಾಸಿ ಕೇಶವ ಸನಿಲ್ (47) ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿ ಕೇಶವ ಸನೀಲ್ ನಗರಕ್ಕೆ ಕೇರಳದಿಂದ ಅಕ್ರಮವಾಗಿ ಗಾಂಜಾವನ್ನು ತಂದು ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪೊಲೀಸರಿಗೆ ದೊರೆತಿತ್ತು.

ಈ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರ ತಂಡ ಉಳ್ಳಾಲ ಬಳಿಯ ತಲಪಾಡಿ ಟೋಲ್ ಗೇಟ್ ಬಳಿ ಹುಂಡೈ ಇಯಾನ್ ಕಾರನ್ನು ತಡೆದು ನಿಲ್ಲಿಸಿ ಪರಿಶೀಲನೆ ನಡೆಸಿದಾಗ ಅಕ್ರಮ ಗಾಂಜಾ ಪತ್ತೆಯಾಗಿದೆ.
ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ. 2,85,500 ಎಂದು ಅಂದಾಜಿಸಲಾಗಿದೆ. ಬಂಧಿತ ಆರೋಪಿ ಕೇಶವ ಸನಿಲ್ ವಿರುದ್ಧ ಈ ಹಿಂದೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಒಂದು ಕೊಲೆ , ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಗಾಂಜಾ ಮಾರಾಟಕ್ಕೆ ಸಂಬಂಧಪಟ್ಟಂತೆ ಒಟ್ಟು 12 ಪ್ರಕರಣ, ಪಣಂಬೂರು ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ, ಉಡುಪಿ ಜಿಲ್ಲೆಯ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಗಾಂಜಾ ಪ್ರಕರಣ, ಹೀಗೆ ಒಟ್ಟು 15 ಪ್ರಕರಣ ದಾಖಲಾಗಿವೆ.












Click it and Unblock the Notifications