ವಿಡಿಯೋ; ಉಕ್ರೇನ್‌ನಲ್ಲಿ ಸಿಲುಕಿದ ಮಂಗಳೂರಿನ ವಿದ್ಯಾರ್ಥಿ ಕರೆ
ಮಂಗಳೂರು, ಫೆಬ್ರವರಿ 24; ಉಕ್ರೇನ್ ವಿರುದ್ಧ ರಷ್ಯಾ ಸಮರ ಸಾರಿದೆ. ಇದರಿಂದಾಗಿ ಉಕ್ರೇನ್‌ನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಭಾರತ ಸರ್ಕಾರ ಮುಂದಾಗಿದೆ. ರಾಜ್ಯದ ಹಲವು ಭಾಗದ ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿರುವ ಬಗ್ಗೆ ಮಾಹಿತಿ ಸರ್ಕಾರಕ್ಕೆ ಲಭ್ಯವಾಗಿದೆ.
ಮಂಗಳೂರಿನ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಸಿಲುಕಿರುವ ಮಾಹಿತಿ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಲಭ್ಯವಾಗಿದೆ. ಮಂಗಳೂರಿನ ದೇರಬೈಲ್ ನಿವಾಸಿ ಅನೈನಾ ಮತ್ತು ಪಡೀಲ್‌ನ ಶಾಂತಿನಗರ ನಿವಾಸಿ ಕ್ಲಾಟನ್ ಸಿಲುಕಿದ್ದಾರೆ.
ದೇರಬೈಲ್ ನಿವಾಸಿ ಸಂಧ್ಯಾ ಪುತ್ರಿ ಅನೈನಾ ಉಕ್ರೇನ್‌ನಲ್ಲಿ ಅಂತಿಮ ಎಂಬಿಬಿಎಸ್ ಪದವಿ ವಿದ್ಯಾರ್ಥಿಯಾಗಿದ್ದು, ಕ್ಲಾಟನ್ ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ. ಕ್ಲಾಟನ್ ಕಳೆದ 90 ದಿನಗಳ ಹಿಂದೆ ಉಕ್ರೇನ್‌ಗೆ ಉನ್ನತ ಶಿಕ್ಷಣಕ್ಕಾಗಿ ತೆರಳಿದ್ದಾನೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಕ್ಲಾಟನ್ ಅವರ ತಾಯಿ ಓಲಿನ್, "ಕ್ಲಾಟನ್ ಸದ್ಯ ಉಕ್ರೇನ್‌ನ ರಾಜಧಾನಿಯಾದ ಕೀವ್ ನಗರದಲ್ಲಿ ವಾಸವಾಗಿದ್ದಾನೆ. ಪ್ರತಿ ಹದಿನೈದು ನಿಮಿಷಗಳಿಗೊಮ್ಮೆ ಕರೆ ಮಾಡುತ್ತಿದ್ದೇನೆ. ಬೆಳಗ್ಗೆ ಅವನು ಅಷ್ಟು ಆತಂಕಗೊಂಡಿರಲಿಲ್ಲ" ಎಂದರು.
"ಆದರೆ ಈಗ ಸ್ವಲ್ಪ ಭಯದಲ್ಲಿ ಇದ್ದಾನೆ. ಬೆಳಗ್ಗೆ 9 ಗಂಟೆಯಿಂದ ಪ್ರತಿ ಅರ್ಧ ಗಂಟೆಗೊಮ್ಮೆ ಅವನು ನಮ್ಮ ಜೊತೆ ಮಾತನಾಡುತ್ತಿದ್ದಾನೆ. ಈಗ ಅವರ ಹತ್ತಿರದಲ್ಲಿ ಒಂದು ವಿಮಾನ ನಿಲ್ದಾಣದಲ್ಲಿ ಮಿಸೈಲ್ ದಾಳಿ ಆಗಿದೆ. ಅಂಗಡಿಗಳಲ್ಲಿಯೂ ಜನರು ಆತಂಕಗೊಂಡಿದ್ದಾರೆ ಎಂಬ ಮಾಹಿತಿ ಹಂಚಿಕೊಂಡಿದ್ದಾರೆ" ಎಂದು ಹೇಳಿದರು.
"ಕ್ಲಾಟನ್ ಡಿಸೆಂಬರ್ ಮೊದಲ ವಾರ ಅಲ್ಲಿಗೆ ಹೋಗಿದ್ದಾನೆ. ಇಲ್ಲಿನ ಮಾಧ್ಯಮಗಳಲ್ಲಿ ಯುದ್ದ ಪರಿಸ್ಥಿತಿ ಬಗ್ಗೆ ಬರುತ್ತಿತ್ತು. ಆದರೆ ಅವನು ಹಾಗೆ ಇಲ್ಲ ಅಂದಿದ್ದ. ಈಗ ಮಿಸೈಲ್ ದಾಳಿ ಆದ ಜಾಗ ಕ್ಲಾಟನ್ ಇರುವ ಪ್ರದೇಶದ 200 ಕಿ.ಮೀ. ದೂರದಲ್ಲಿ ಇದೆ. ದಿನನಿತ್ಯ ಚಟುವಟಿಕೆ ಬಂದ್ ಆಗುತ್ತದೆ ಅನ್ನೋ ಭಯದಲ್ಲಿ ಅವರು ಇದ್ದಾರೆ. ಭಾರತೀಯ ರಾಯಭಾರಿ ಕಚೇರಿ ಅವರ ಸಂಪರ್ಕದಲ್ಲಿ ಇದೆ. ಆದಷ್ಟು ಶೀಘ್ರ ಬೇರೆ ಕಡೆ ಕರೆದುಕೊಂಡು ಹೋಗುವ ಭರವಸೆ ನೀಡಿದ್ದಾರೆ" ಎಂದು ಓಲಿನ್ ಹೇಳಿದ್ದಾರೆ.
"ಸದ್ಯ ಅಷ್ಟು ಆತಂಕ ಇಲ್ಲವಾದರೂ ಯಾವುದೇ ಕ್ಷಣದಲ್ಲಿ ಪರಿಸ್ಥಿತಿ ಕೈ ಮೀರಬಹುದು. ಸರ್ಕಾರ ದಯವಿಟ್ಟು ಆದಷ್ಟು ಬೇಗ ನಮ್ಮ ಮಗನನ್ನು ಕರೆ ತರಲಿ. ಜಿಲ್ಲಾಧಿಕಾರಿಗಳಿಗೆ ಸಂಪರ್ಕ ಮಾಡಿದ್ದೇವೆ, ದಯವಿಟ್ಟು ಇಲ್ಲಿಗೆ ಕರೆದು ಕೊಂಡು ಬನ್ನಿ ಎಂದು ವಿನಂತಿಸಿಕೊಂಡಿದ್ದೇವೆ" ಎಂದರು.
ಉಕ್ರೇನ್ ಯುದ್ಧ ಸಂದರ್ಭದಲ್ಲೂ ಕ್ಲಾಟನ್ ಮನೆಯವರ ಜೊತೆ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದಾರೆ. ತಾಯಿ ಮತ್ತು ತಂದೆಯ ಜೊತೆ ಮಾತನಾಡಿದ್ದು, "ಸದ್ಯ ಇಲ್ಲಿ ನಾನು ಸುರಕ್ಷಿತವಾಗಿ ಇದ್ದೇನೆ, ಯಾವುದೇ ಸಮಸ್ಯೆ ಇಲ್ಲ. ಇಂಡಿಯನ್ ಎಂಬೆಸ್ಸಿ ಕೂಡ ನಮ್ಮ ಸಂಪರ್ಕದಲ್ಲಿ ಇದೆ. ದೂರದಲ್ಲಿ ಮಿಸೈಲ್ ದಾಳಿಯಾದ ಬಗ್ಗೆ ಸುದ್ದಿ ಬರ್ತಾ ಇದೆ" ಎಂದು ಕ್ಲಾಟನ್ ಹೇಳಿದ್ದಾರೆ.












Click it and Unblock the Notifications