ಉಳ್ಳಾಲ ಪೊಲೀಸ್ ಠಾಣೆ ಹತ್ತಿರವೇ 10 ಲಕ್ಷ ದರೋಡೆ

ಗುರುವಾರ ಮುಂಜಾನೆ ವಿದ್ಯಾರಣ್ಯನಗರದ ಉಳ್ಳಾಲ ಪೊಲೀಸ್ ಠಾಣೆ ಹಿಂಭಾಗದಲ್ಲಿನ ವಾಸಿಸುತ್ತಿರುವ ಕಮಲೇಶ್ ಪಟೇಲ್ ಎಂಬುವವರ ಮನೆಗೆ ನುಗ್ಗಿದ ಕಳ್ಳರು ಹಣ, ಆಭರಣ ಸೇರಿದಂತೆ 10 ಲಕ್ಷ ಮೌಲ್ಯದ ವಸ್ತುಗಳನ್ನು ದೋಚಿದ್ದಾರೆ.
ಗುಜರಾತ್ ಮೂಲದವರಾದ ಕಮಲೇಶ್ ಪಟೇಲ್ ಕಳೆದ 40 ವರ್ಷಗಳಿಂದ ಉಳ್ಳಾಲದಲ್ಲಿ ವಾಸಿಸುತ್ತಿದ್ದಾರೆ. ನಗರದಲ್ಲಿ ಕಳೆದ ವಾರದಿಂದ ಸರಣಿ ಮನೆಗಳ್ಳತನ ಪ್ರಕರಣಗಳು ನಡೆಯುತ್ತಿವೆ. ಸದ್ಯ ಪೊಲೀಸ್ ಠಾಣೆಯ ಪಕ್ಕದಲ್ಲೇ ಕಳ್ಳರು ಕೈಚಳಕ ತೋರಿದ್ದಾರೆ.
ನಾಯಿ ಪ್ರಜ್ಞೆ ತಪ್ಪಿಸಿದರು : ಕಮಲೇಶ್ ಮನೆಯ ಹಿಂಬಾಗಿಲು ಮುರಿದು ನುಗ್ಗಿದ ಕಳ್ಳರು. ಮನೆಯಲ್ಲಿದ್ದ ನಾಯಿಗೆ ಮತ್ತು ಬರುವ ಔಷಧ ಹಾಕಿ ಅದರ ಪ್ರಜ್ಞೆ ತಪ್ಪಿಸಿದ್ದಾರೆ. ನಂತರ ಮನೆಯೊಳಗೆ ನುಗ್ಗಿದ್ದಾರೆ. ನಾಯಿ ಬೊಗಳದ್ದರಿಂದ ಮನೆಯವರಿಗೆ ಕಳ್ಳರು ಆಗಮಿಸಿದ ಬಗ್ಗೆ ತಿಳಿದಿಲ್ಲ.
ಕಮಲೇಶ್ ತಂದೆ-ತಾಯಿ ಮಲಗಿದ್ದ ಕೊಠಡಿಗೂ ಔಷಧ ಸಿಂಪಡಿಸಿದ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಕಮಲೇಶ್ ತಂದೆ-ತಾಯಿಗೆ ಮೂಗು ಮತ್ತು ಗಂಟಲಿನಲ್ಲಿ ಸೋಂಕು ಕಂಡುಬಂದಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಿರಿಯ ಪೊಲೀಸ್ ಅಧಿಕಾರಿಗಳು ಕಮಲೇಶ್ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಮಲೇಶ್ ಕಳ್ಳತನದ ಕುರಿತು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.












Click it and Unblock the Notifications