ಮಂಗಳೂರು ಕೊಂಕಣ ರೈಲ್ವೆಗೆ ಸೇರ್ಪಡೆಯಾಗುವುದೇ?
ಮಂಗಳೂರು, ಜೂನ್ 20: ಮಾಜಿ ಮುಖ್ಯಮಂತ್ರಿ, ನೂತನ ರೈಲ್ವೆ ಸಚಿವ ಡಿವಿ ಸದಾನಂದ ಗೌಡರು ಕೇಂದ್ರದಲ್ಲಿ ತಮ್ಮ ಚೊಚ್ಚಲ ರೈಲ್ವೆ ಬಜೆಟ್ ಮಂಡಿಸಲು ಸಕಲ ಸಿದ್ಧತೆ ನಡೆಸಿದ್ದಾರೆ. ಈ ಮಧ್ಯೆ, ಸದಾನಂದ ಗೌಡರು ರಾಜ್ಯಕ್ಕೆ ಏನೆಲ್ಲಾ ಕೊಡುಗೆ ನೀಡಬಹುದು ಎಂಬ ಸಹಜ ಕುತೂಹಲ ಮನೆ ಮಾಡಿದೆ.
ಅದರಲ್ಲೂ ತಮ್ಮ ಜಿಲ್ಲೆಯವರಾದ ಸದಾನಂದ ಗೌಡರಿಂದ ಮಂಗಳೂರು ಭಾಗದ ಜನತೆ ಹೆಚ್ಚು ಆಕಾಂಕ್ಷೆಗಳನ್ನು ಹೊಂದಿದ್ದಾರೆ. ಮುಖ್ಯವಾಗಿ ಮಂಗಳೂರಿಗೆ ಪ್ರತ್ಯೇಕ ರೈಲ್ವೆ ವಿಭಾಗ ಬೇಕೆಂಬ ಪುರಾತನ ಬೇಡಿಕೆಗೆ ಮತ್ತೆ ಜೀವ ಬಂದಿದೆ.
ಆದರೆ ಮಂಗಳೂರಿಗೆ ಪ್ರತ್ಯೇಕ ರೈಲ್ವೆ ವಿಭಾಗ ಕಲ್ಪಿಸುವುದಕ್ಕಿಂತ ಅದನ್ನು ಕೊಂಕಣ ರೈಲ್ವೆ ನಿಗಮಕ್ಕೆ (KRCL) ಸೇರ್ಪಡೆ ಮಾಡುವ ಆಲೋಚನೆಯೂ ಗರಿಗೆದರಿದೆ.

ಈ ಹಿಂದಿನ ಬಜೆಟ್ಟಿನಲ್ಲಿ ಅಂದಿನ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಗುಲ್ಬರ್ಗ ವಲಯ ಸ್ಥಾಪನೆಗೆ ಅಸ್ತು ಅಂದಿದ್ದರು. ಹಾಗಾಗಿ ಅಕ್ಕಪಕ್ಕದಲ್ಲೇ ವರ್ಷದ ಅಂತದಲ್ಲಿ ಮತ್ತೊಂದು ವಿಭಾಗವನ್ನು ಸ್ಥಾಪಿಸುವುದು (ಅಂದರೆ ಮಂಗಳೂರು ವಿಭಾಗ ಸ್ಥಾಪಿಸುವುದು) ದೂರದ ಮಾತಾಗಿದೆ.
ಏಕೆಂದರೆ ಹೊಸ ರೈಲ್ವೆ ವಿಭಾಗ ಸ್ಥಾಪಿಸುವುದುದೆಂದರೆ ಅದು ಅಂದಾಜು 500 ಕೋಟಿ ರೂ ಹೂಡಿಕೆಯ ಮಾತು. ರೈಲ್ವೆಯ ಆರ್ಥಿಕ ಪರಿಸ್ಥಿತಿ ಸದ್ಯಕ್ಕೆ ಅಷ್ಟೊಂದು ಪೂರಕವಾಗಿಲ್ಲ. ಹಾಗಾಗಿ 1990ರಲ್ಲಿ ಅಸ್ತಿತ್ವಕ್ಕೆ ಬಂದ KRCLಗೆ ಮಂಗಳೂರನ್ನು ಸೇರ್ಪಡೆ ಮಾಡುವುದು ಹೆಚ್ಚು ಸಮಂಜಸವಾದೀತು ಅನ್ನುತ್ತಾರೆ ಈ ಭಾಗದ ರೈಲ್ವೆ ಪರಿಣತರು. (ಇಷ್ಟಕ್ಕೂ ದ.ಕ.ಗೆ ಖಾದರ್ ರೈಲ್ವೆ ಆಲೋಚನೆಗಳೇನು?)
ಇಲ್ಲಿ ಗಮನಿಸಬೇಕಾದ ಅಂಶವೆಂದರೆ KRCL ಸ್ವಾಯತ್ತ ಸಂಸ್ಥೆ. ಈ ಸಂಸ್ಥೆಯ ಆಸ್ತಿಪಾಸ್ತಿ ಮತ್ತು ಖರ್ಚು ಬಾಬತ್ತಿನ ಮೇಲೆ ಭಾರತೀಯ ರೈಲ್ವೆಗೆ ಅಧಿಕಾರ ಇರುವುದಿಲ್ಲ. build-operate-transfer (BOT) ಒಪ್ಪಂದದಡಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯು BOT ಒಪ್ಪಂದದ ಅವಧಿ ಮುಗಿದ ಬಳಿಕ ಭಾರತೀಯ ರೈಲ್ವೆಗೆ ಅಧೀನಕ್ಕೆ ಬರುತ್ತದೆ. ಹಾಗಾಗಿ ಮಂಗಳೂರನ್ನು KRCLಗೆ ಸೇರ್ಪಡೆ ಮಾಡುವುದು ಭಾರತೀಯ ರೈಲ್ವೆಗೆ ತ್ರಾಸದಾಯವೇನೂ ಆಗಲಾರದು.
ಕರ್ನಾಟಕ, ಕೇರಳ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳು ಜತೆಗೆ ಕೇಂದ್ರ ರೈಲ್ವೆ ಸಚಿವಾಲಯ KRCL ನಿಗಮದ ಪಾಲುದಾರರು. ಅಂದಹಾಗೆ KRCL ಹಳಿ ವ್ಯಾಪ್ತಿಯು ಕರ್ನಾಟಕದ ಮಂಗಳೂರಿನಿಂದ (ನೇತ್ರಾವತಿ) ಮಹಾರಾಷ್ಟ್ರದ ರೋಹಾವರೆಗೂ ಹರಿದಿದೆ. KRCL ಸಂಸ್ಥೆಯ ಮೊದಲ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಈ ಶ್ರೀಧರನ್ ಅವರು ಆರಂಭದಲ್ಲೆ ಮಂಗಳೂರನ್ನು KRCLಗೆ ಸೇರ್ಪಡೆ ಮಾಡುವ ಮಾತನ್ನಾಡಿದ್ದರು. ಆದರೆ ಆಗ KRCL ವ್ಯಾಪ್ತಿ ಬಲವಂತವಾಗಿ ಥೋಕೂರು ಬಳಿಗೆ ನಿಲುಗಡೆ ಮಾಡಿಸಲಾಯಿತು.
ನವಿ ಮುಂಬೈನಲ್ಲಿ ಪ್ರಧಾನ ಕಚೇರಿ ಹೊಂದಿರುವ 760 ಕಿಮೀ ದೂರದ ಈಗಿನ KRCL ವ್ಯಾಪ್ತಿಯಲ್ಲಿ ರತ್ನಗಿರಿ ಮತ್ತು ಕಾರವಾರ ಎಂಬ ಎರಡು ಭಾಗಗಳಿವೆ ಆದರೆ ವಿಭಾಗಗಳಿಲ್ಲ. ಈಗ ಹೊಸದಾಗಿ ಮಂಗಳೂರನ್ನು KRCLಗೆ ಸೇರ್ಪಡೆ ಮಾಡಿದರೆ ಮುಕ್ತಾಯದ ನಿಲ್ದಾಣವಾಗಿ ಮಂಗಳೂರು ಸ್ಥಾನ ಪಡೆಯುತ್ತದೆ. ಇದರಿಂದ ಈಗಿರುವ ಸ್ಥಾನಮಾನವನ್ನು ಕಾರವಾರ ಕಳೆದುಕೊಳ್ಳಬೇಕಾಗುತ್ತದೆ. (ಸದಾನಂದ ಗೌಡರಿಗೆ ಬೇಡಿಕೆಯ ಪಟ್ಟಿ ರವಾನಿಸಿದ ಶೆಟ್ಟರ್)
ಮೆಟ್ರೋ ಪಿತಾಮಹ ಶ್ರೀಧರನ್ ಅವರು ಈಗಾಗಲೇ ರೈಲ್ವೆ ಸಚಿವ ಡಿವಿ ಸದಾನಂದ ಗೌಡರಿಗೆ ಸಲಹೆಗಳನ್ನು ನೀಡುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಸೋ, ಶ್ರೀಧರನ್ ತಮ್ಮ ಈ ಹಿಂದಿನ ಸಲಹೆಯನ್ನು ಅಂದರೆ ಮಂಗಳೂರನ್ನು KRCLಗೆ ಸೇರ್ಪಡೆ ಮಾಡುವುದಕ್ಕೆ ಅನುವಾಗುತ್ತಾರಾ? ಕಾದುನೋಡಬೇಕಿದೆ.












Click it and Unblock the Notifications