ಮಂಗಳೂರು ಚಲೋ : ಸಂಘ ಪರಿವಾರದ ಸಂಘಟನೆಗಳ ಪ್ರವೇಶ
ಮಂಗಳೂರು, ಸೆಪ್ಟೆಂಬರ್ 05 : ಬಿಜೆಪಿ ಯುವಮೋರ್ಚಾ ಸೆಪ್ಟೆಂಬರ್ 7 ರಂದು ಆಯೋಜಿಸಿರುವ ಮಂಗಳೂರು ಚಲೋಗೆ ಪೊಲೀಸ್ ಇಲಾಖೆ ನಿರ್ಭಂದ ಹೇರಿದೆ. ಇದು ಸಂಘಪರಿವಾರದ ಸಂಘಟನೆಗಳನ್ನು ಕೆರಳಿಸಿದೆ.
In Pics : ಬಿಜೆಪಿಯಿಂದ ಮಂಗಳೂರು ಚಲೋ ಬೈಕ್ ರ‍್ಯಾಲಿ
ರಾಜ್ಯ ಸರ್ಕಾರ ಮಂಗಳೂರು ಚಲೋ ಜಾಥಾಕ್ಕೆ ಅನುಮತಿ ನಿರಾಕರಿಸಿರುವುದನ್ನು ವಿರೋಧಿಸಿ ಬಜರಂಗದಳ ಹಾಗು ವಿಶ್ವ ಹಿಂದು ಪರಿಷತ್ ಫೀಲ್ಡಿಗಿಳಿಯಲು ತೀರ್ಮಾನಿಸಿವೆ. ಈ ನಿಟ್ಟಿನಲ್ಲಿ ಬಜರಂಗದಳ ಹಾಗು ವಿಎಚ್‌ಪಿ ಮುಖಂಡರ ಬೈಟಕ್ ಅನ್ನು ಮಂಗಳೂರಿನಲ್ಲಿ ಇಂದು ಕರೆಯಲಾಗಿದೆ.

ರಾಜ್ಯದ 5 ಭಾಗಳಿಂದ ಮಂಗಳೂರು ಚಲೋ ಬೈಕ್ ಜಾಥಾ ಇಂದಿನದಿನಿಂದ ಆರಂಭಗೊಳ್ಳಲಿದೆ. ಬೆಂಗಳೂರು, ಹುಬ್ಬಳ್ಳಿ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಮೈಸೂರಿನಿಂದ ಜಾಥಾ ಹೊರಡಲಿದ್ದು ನಾಳೆ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶ ಮಾಡಲಿದೆ. ಆದರೆ, ಜಾಥಾಕ್ಕೆ ರಾಜ್ಯ ದೆಲ್ಲೆಡೆ ನಿರ್ಭಂಧ ಹೇರಲಾಗಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮಂತ್ರಕ್ಕೆ ಬಿಜೆಪಿ ತಿರು ಮಂತ್ರ ರೂಪಿಸಿದೆ. ಮಂಗಳೂರಿಗೆ ಆಗಮಿಸುವ ಯುವ ಮೋರ್ಚಾದ ಕಾರ್ಯಕರ್ತರಿಗೆ ಎಲ್ಲಾ ವ್ಯವಸ್ಥೆ ಮಾಡಿರುವ ಬಗ್ಗೆ ಮಾಹಿತಿ ರವಾನಿಸಲಾಗಿದೆ. ಬಲ ಪ್ರಯೋಗದ ಮೂಲಕ ಜಾಥಾ ತಡೆಯಲು ಪ್ರಯತ್ನಿಸಿದರೆ ರಸ್ತೆಯಲ್ಲೆ ಪ್ರತಿಭಟನಾ ಧರಣಿ ನಡೆಸಲು ಸೂಚನೆ ನೀಡಲಾಗಿದೆ.
ಮಂಗಳೂರು ಚಲೋ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 7ರಂದು ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಆದರೆ, ಈ ಕಾರ್ಯಕ್ರಮದಿಂದ ಮಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗಲಿದೆ ಹಾಗೂ ನಗರದಲ್ಲಿ ಶಾಂತಿ ಕದಡುವ ಆತಂಕವಿದೆ ಎಂದು ಬೈಕ್ ಜಾಥಾ ನಗರ ಪ್ರವೇಶಕ್ಕೆ ಮಂಗಳೂರು ಪೋಲಿಸ್ ಆಯುಕ್ತರು ನಿಷೇಧ ಹೇರಿದ್ದಾರೆ.
ವಿವಿಧ ಕಡೆಗಳಿಂದ ಬರುವ ಈ ಬೈಕ್ ಜಾಥಾಕ್ಕೆ ಈಗಾಗಲೇ 10,000ಕ್ಕೂ ಅಧಿಕ ಕಾರ್ಯಕರ್ತರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಮಂಗಳೂರಿಗೆ ಬರುವ ಕಾರ್ಯಕರ್ತರಿಗೆ ತಂಗಲು ಜಿಲ್ಲೆಯ ಹಲವೆಡೆ ವ್ಯವಸ್ಥೆ ಮಾಡಲಾಗಿದ್ದು ಪ್ರತಿಭಟನಾ ಸಭೆಗಾಗಿ ಈಗಾಗಲೇ ಸಿದ್ಧತೆಗಳನ್ನು ಪೂರ್ಣಗೊಳಿಸಲಾಗಿದೆ.
ಒಂದು ವೇಳೆ ಜಾಥಾವನ್ನು ರಾಜ್ಯ ಸರ್ಕಾರ ತಡೆಯಲು ಯತ್ನಿಸಿದರೆ ಸಂಘಪರಿವಾರದ ಸಂಘಟನೆಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿವೆ. ಸಂಘ ಪರಿವಾರದ ಸಂಘಟನೆಗಳ ಈ ನಡೆ ರಾಜ್ಯ ಸರಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸುವ ಸಾಧ್ಯತೆ ಇದೆ.












Click it and Unblock the Notifications