ಮಂಜುಗಡ್ಡೆ ಪೆಟ್ಟಿಗೆಯೊಳಗೆ ದೀಪಕ್ ಸಾಹಸ ನೋಡಿ
ಮಂಗಳೂರು, ಫೆ. 25 : 20 ನಿಮಿಷ ಮಂಜುಗೆಡ್ಡೆ ತುಂಬಿದ ಗಾಜಿಯ ಪೆಟ್ಟಿಗೆಯೊಳಗೆ ಮಲಗಿದ್ದು, ನಂತರ ಹೊರಬಂದ ಯುವಕ ಸಾಗರ್ ಸಾಹಸಕ್ಕೆ ನೂರಾರು ಜನರು ಸಾಕ್ಷಿಯಾದರು. 'ಬರೀಡ್ ಅಲೈವ್' ಸಾಹಸ ಅತ್ಯಂತ ಕುತೂಹಲಕಾರಿ ಮತ್ತು ಅಪಾಯಕಾರಿಯಾದದ್ದು.
ಮಂಗಳಾ ಮ್ಯಾಜಿಕ್ ಸರ್ಕಲ್ ವತಿಯಿಂದ ವಿಶ್ವ ಜಾದೂಗಾರರ ದಿನಾಚರಣೆ ಅಂಗವಾಗಿ ಸೋಮವಾರ ಸಂಜೆ ಮಂಗಳೂರಿನಲ್ಲಿ ಏರ್ಪಡಿಸಿದ್ದ ವಿವಿಧ ಜಾದೂ ಕಾರ್ಯಕ್ರಮಗಳ ಪೈಕಿ, ಸಾಗರ್ ಅವರು ಮಾಡಿದ 'ಬರೀಡ್ ಅಲೈವ್' ಸಾಹಸವೂ ಒಂದಾಗಿತ್ತು.

ಕೆಲವು ನಿಮಿಷ ಮಂಜುಗಡ್ಡೆಯ ಒಳಗೆ ಮಲಗಿದರೆ ವ್ಯಕ್ತಿಯ ಹೃದಯ ಬಡಿತ ಕಡಿಮೆಯಾಗುತ್ತದೆ. ರಕ್ತ ಹೆಪ್ಟುಗಟ್ಟಲಾರಂಭಿಸುತ್ತದೆ. ಮಿದುಳು ನಿಷ್ಕ್ರಿಯವಾಗುತ್ತದೆ ಅಂಥದ್ದರಲ್ಲಿ 20 ನಿಮಿಷಗಳ ವರೆಗೆ ಮಂಜುಗಡ್ಡೆ ರಾಶಿಯೊಳಗೆ ಮಲಗಿ ಸಾಗರ್ ಸಾಹಸ ಮಾಡಿದ್ದಾರೆ. [ಉಡುಪಿಯಲ್ಲಿ ಡೀನ್ ಗುನರ್ಸನ್ ಸಾಹಸ ಮೆಚ್ಚಿದ ಜನರು]
ಹೇಗಿತ್ತು ಸಾಹಸ : ಆರು ಅಡಿ ಉದ್ದದ ಗಾಜಿನ ಪೆಟ್ಟಿಗೆಯೊಳಗೆ ಅರ್ಧ ಭಾಗದಷ್ಟು ಐಸ್ ತುಂಬಿದ ಬಳಿಕ 30 ಅಡಿ ಉದ್ದದ ಸರಪಳಿಯಯಿಂದ ಸಾಗರ್ ಅವರನ್ನು ಬಂಧಿಸಿ 12 ಬೀಗಗಳನ್ನು ಹಾಕಿ ರಾತ್ರಿ 7.10ರ ವೇಳೆಗೆ ಪೆಟ್ಟಿಗೆಯೊಳಗೆ ಮಲಗಿಸಲಾಯಿತು.
ತಲೆಭಾಗದಲ್ಲಿ ಉಸಿರಾಟಕ್ಕೆ ಸ್ವಲ್ಪ ಜಾಗ ಬಿಟ್ಟು ಕಾಲಿಂದ ಕತ್ತಿನವರೆಗೆ ಐಸ್ ತುಂಬಿಸಿದ ಮೇಲೆ 7.15ರಿಂದ ಟೈಮ್ ಕೌಂಟ್ ಮಾಡಲಾಯಿತು. ಸುಮಾರು 7.30ರ ವೇಳೆಗೆ ಸಾಗರ್, ಬಂಧನ ಕಳಚಿ ಹೊರಬಂದರು. ಪೆಟ್ಟಿಗೆಯಿಂದ ಹೊರ ಬಂದ ಬಳಿಕ ನಡುಗುತ್ತಿದ್ದ ಸಾಗರ್ ಅವರಿಗೆ ಶಾಖದ ವ್ಯವಸ್ಥೆ ಮಾಡಲಾಯಿತು.
ಈ ಸಾಹಸ ಪ್ರದರ್ಶನ ವೀಕ್ಷಿಸಲು ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿಜಯ ವಿಠಲನಾಥ ಶೆಟ್ಟಿ ಅವರು ಸಾಗರ್ ಅವರಿಗೆ ಕೈಗಳಿಗೆ ಕೋಳ ತೊಡಿಸಿದರು. ಹಿರಿಯ ಪತ್ರಕರ್ತ ಮನೋಹರ ಪ್ರಸಾದ್, ಚಿತ್ರನಟ ಅವಿನಾಶ್ ಶೆಟ್ಟಿ, ಕಾರ್ಪೊರೇಟರ್ ರೂಪ ಡಿ.ಬಂಗೇರ ಸಾಹಸದ ಕ್ಷಣಕ್ಕೆ ಸಾಕ್ಷಿಯಾಗಿದ್ದರು.
ವೈದ್ಯಕೀಯ ವ್ಯವಸ್ಥೆ ಸಜ್ಜಾಗಿತ್ತು : ಮಂಗಳಾ ಆಸ್ಪತ್ರೆಯ ಆ್ಯಂಬುಲೆನ್ಸ್ , ವೈದ್ಯರ ತಂಡ ಸಾಹಸ ಸ್ಥಳದಲ್ಲಿ ಅಪಘಾತ ಸಂಭವಿಸಿದರೆ ಚಿಕಿತ್ಸೆ ನೀಡಲು ಸಜ್ಜಾಗಿ ನಿಂತಿತ್ತು. ಪೆಟ್ಟಿಗೆಯಿಂದ ಹೊರ ಬಂದ ಸ್ವಲ್ಪ ಹೊತ್ತಿನ ಬಳಿಕ ಅವರ ದೇಹಸ್ಥಿತಿ ಸಮಸ್ಥಿತಿಗೆ ಬಂದಿತು ಎಂದು ವೈದ್ಯರು ತಿಳಿಸಿದರು.












Click it and Unblock the Notifications