ಮೋದಿ, ಯೋಗಿ ಅಲೆ ಫಿನಿಷ್; ಕರ್ನಾಟಕದಲ್ಲಿನ್ನು ರಾಹುಲ್ ಹವಾ: ಖಾದರ್
ಮಂಗಳೂರು, ಮಾರ್ಚ್ 15: ಉತ್ತರ ಪ್ರದೇಶದಲ್ಲಿಯೇ ಲೆಕ್ಕಕ್ಕಿಲ್ಲದ ಯೋಗಿ ಆದಿತ್ಯನಾಥ್ ಅವರನ್ನು ಬಿಜೆಪಿಯವರು ಇಲ್ಲಿಗೆ ಕರೆತಂದು ಚುನಾವಣೆ ಪ್ರಚಾರ ಮಾಡುತ್ತಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ವ್ಯಂಗ್ಯವಾಡಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಉತ್ತರ ಪ್ರದೇಶ ಮತ್ತು ಬಿಹಾರ ದಲ್ಲಿ ನಡೆದ ಉಪಚುನಾವಣೆಯ ಫಲಿತಾಂಶ ಮೋದಿ , ಯೋಗಿ ಅಲೆ ಮುಗಿದಿರುವ ಸಂಕೇತ ಎಂದು ಅವರು ಹೇಳಿದರು. ಇನ್ನು ಏನಿದ್ದರೂ ಕರ್ನಾಟಕದಲ್ಲಿ ರಾಹುಲ್ ಹವಾ ಎಂದು ಅವರು ತಿಳಿಸಿದರು.

ಇದೇ ಬರುವ ಮಾರ್ಚ್ 20 ರಂದು ಎಐಸಿಸಿ ಅಧ್ಯಕ ರಾಹುಲ್ ಗಾಂಧಿ ಮಂಗಳೂರು ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಹೇಳಿದ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಹುಲ್ ಗಾಂಧಿ ಅಲೆ ಆರಂಭವಾಗಿದೆ ಎಂದು ತಿಳಿಸಿದರು. ಈ ರಾಹುಲ್ ಅಲೆಯಲ್ಲಿ ಯಾರು ಕೊಚ್ಚಿ ಹೋಗುತ್ತಾರೋ ಗೊತ್ತಿಲ್ಲ ಎಂದು ಅವರು ಅಣಕವಾಡಿದರು.
ರಾಹುಲ್ ಗಾಂಧಿ ಪ್ರವಾಸ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಹೇಳಿದ ಅವರು, ರಾಹುಲ್ ಗಾಂಧಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೋಡ್ ಶೋ ಸೇರಿದಂತೆ ಸಮಾವೇಶಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.
ರಾಜ್ಯದ ಪ್ರಥಮ ಹೋಬಳಿ ಮಟ್ಟದ ಇಂದಿರಾ ಕ್ಯಾಂಟೀನ್ ಉಳ್ಳಾಲದಲ್ಲಿ ಆರಂಭವಾಗಲಿದೆ ಎಂದು ಅವರು ಹೇಳಿದರು. ಇದೇ ಬರುವ ಮಾರ್ಚ್ 23 ರಂದು ಈ ಇಂದಿರಾ ಕ್ಯಾಂಟೀನ್ ಉದ್ಘಾಟನೆಗೊಳ್ಳಲಿದ್ದು ಮುಂಬರುವ ದಿನಗಳಲ್ಲಿ ರಾಜ್ಯದ ಇತರ ಜಿಲ್ಲೆಗಳ ಹೋಬಳಿ ಮಟ್ಟದಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲಾಗುವುದೆಂದು ಅವರು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದಿರಾ ಕ್ಯಾಂಟೀನ್ ಸಮಯ ಬದಲಾವಣೆಗೆ ಚಿಂತನೆ ನಡೆಸಲಾಗಿದ್ದು, ಬೆಳಿಗ್ಗೆ 8 ಗಂಟೆಯ ಬದಲಿಗೆ 7 ಗಂಟೆಗೆ ಕ್ಯಾಂಟೀನ್ ಆರಂಭಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಹೇಳಿದರು. ಕರಾವಳಿ ಜನರ ಆಹಾರ ಪದ್ದತಿಯ ಆಧಾರದ ಮೇಲೆ ಕ್ಯಾಂಟೀನ್ ಮೆನು ರಚಿಸಲು ಚಿಂತಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.












Click it and Unblock the Notifications