ತೊಕ್ಕುಟ್ಟು ಬಳಿ ವ್ಯಕ್ತಿಯ ಬರ್ಬರ ಹತ್ಯೆ; ಕುಟುಂಬ ಕಲಹ ಶಂಕೆ
ಮಂಗಳೂರು, ಜುಲೈ 4: ಮಂಗಳೂರು ಹೊರವಲಯದ ತೊಕ್ಕೊಟ್ಟು ಎಂಬಲ್ಲಿ ವ್ಯಕ್ತಿಯೊಬ್ಬನನ್ನು ಭೀಕರವಾಗಿ ಕೊಲೆ ಮಾಡಿದ ಘಟನೆ ನಿನ್ನೆ ರಾತ್ರಿ ನಡೆದಿದೆ. ಉಳ್ಳಾಲ ಸಮೀಪದ ತೊಕ್ಕೊಟ್ಟು ಎಂಬಲ್ಲಿನ ಚೆಂಬುಗುಡ್ಡೆ ಬಳಿಯ ಮನೆಯೊಂದರಲ್ಲಿ ಈ ಘಟನೆ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ನಾರಾಯಣ (46) ಎಂದು ಗುರುತಿಸಲಾಗಿದೆ. ಕುಟುಂಬ ಕಲಹದ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎಂದು ಹೇಳಲಾಗಿದೆ. ಕೊಲೆ ನಡೆದ ಸ್ಥಳಕ್ಕೆ ಉಳ್ಳಾಲ ಪೊಲೀಸರು ತೆರಳಿ ತನಿಖೆ ನಡೆಸಿದ್ದು, ರಾಜೇಶ್ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ.
ಸ್ಥಳೀಯ ನಿವಾಸಿ ಲಲಿತಾ ಎಂಬುವರ ಮನೆಯಲ್ಲಿ ಅವರ ಅಣ್ಣನ ಮಗನಾದ ನಾರಾಯಣ ಉಳಿದುಕೊಳ್ಳುತ್ತಿದ್ದ. ಲಲಿತಾ ಅವರ ಮಗ ರಾಜೇಶ್ (35) ಕೊಲೆ ಆರೋಪಿ.

ಲಲಿತಾ ಅವರ ಎರಡನೆಯ ಮಗ ರಮೇಶ್ ಮೂಡುಬಿದಿರೆಯಲ್ಲಿ ವಾಸವಾಗಿದ್ದಾನೆ. ಆರೋಪಿ ರಾಜೇಶ್ ಗುಜರಾತ್ ನಲ್ಲಿ ಕೆಲಸ ಮಾಡುತ್ತಿದ್ದು, ಪ್ರತಿ ಮೂರು ತಿಂಗಳಿಗೊಮ್ಮೆ ಇಲ್ಲಿಗೆ ಬರುತ್ತಿದ್ದ. ಈ ಬಾರಿಯೂ ಊರಿಗೆ ಬಂದವನು, ರಜೆಯ ಮೇಲೆ ಊರಿನಲ್ಲಿದ್ದ. ನಾರಾಯಣ ಕೂಲಿ ಕೆಲಸ ಮಾಡುತ್ತಿದ್ದ. ಕೌಟುಂಬಿಕ ಕಲಹದಿಂದ ಮಾತಿನ ಚಕಮಕಿ ನಡೆದು ಕೊಲೆ ನಡೆದಿರಬೇಕು ಎಂದು ಸಂಶಯಿಸಲಾಗಿದೆ.
ನಾರಾಯಣ ಅವರನ್ನು ಕತ್ತಿಯಿಂದ ಭೀಕರವಾಗಿ ಕೊಲೆ ಮಾಡಿದ ಬಳಿಕ ಕೊಲೆಗೆ ಬಳಸಿದ ಕತ್ತಿಯನ್ನು ತೊಳೆದು ಕೊಲೆಯಾದ ನಾರಾಯಣನ ಕೈಯಲ್ಲಿ ಇಟ್ಟಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.











Click it and Unblock the Notifications