Vande Bharat; ಮಂಗಳೂರಿಗೆ ಬಂತು ವಂದೇ ಭಾರತ್ ರೈಲು, ವಿವರ
ಮಂಗಳೂರು, ನವೆಂಬರ್ 08; ಕರ್ನಾಟಕ ಕರಾವಳಿಯ ಪ್ರಮುಖ ನಗರವಾದ ಮಂಗಳೂರಿಗೆ ಸೆಮಿ-ಹೈ ಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್ ಓಡಿಸಬೇಕು ಎಂಬ ಬೇಡಿಕೆ ಹಲವು ದಿನಗಳಿಂದ ಕೇಳಿ ಬರುತ್ತಿದೆ. ಈ ರೈಲು ನಿರ್ವಹಣೆ ಮಾಡಲು ಬೇಕಾದ ವ್ಯವಸ್ಥೆಗಳನ್ನು ಸಹ ಮಂಗಳೂರು ನಿಲ್ದಾಣದಲ್ಲಿ ಮಾಡಲಾಗುತ್ತಿದೆ.
ಕರಾವಳಿ ಭಾಗದ ಜನರ ಬೇಡಿಕೆಗೆ ಭಾರತೀಯ ರೈಲ್ವೆ ಒಪ್ಪಿಗೆ ನೀಡಿದೆ. ಶೀಘ್ರವೇ ಮಂಗಳೂರು ನಗರಕ್ಕೆ ವಂದೇ ಭಾರತ್ ರೈಲು ಸಂಪರ್ಕ ದೊರೆಯಲಿದೆ. ಈ ಕುರಿತು ದಕ್ಷಿಣ ಕನ್ನಡದ ಸಂಸದ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

ಸಂಸದರ ಟ್ವೀಟ್; ನಳಿನ್ ಕುಮಾರ್ ಕಟೀಲ್ ತಮ್ಮ ಟ್ವೀಟ್‌ನಲ್ಲಿ, 'ಮಂಗಳೂರು-ಮಡಗಾಂ ವಂದೇ ಭಾರತ್ ರೈಲು ಓಡಾಟಕ್ಕೆ ಸರ್ವಸನ್ನದ್ಧವಾಗಿದ್ದು, ವೇಳಾಪಟ್ಟಿ ಯಾವುದೇ ಕ್ಷಣದಲ್ಲಿಯೂ ಬಿಡುಗಡೆಯಾಗಲಿದೆ' ಎಂದು ಹೇಳಿದ್ದಾರೆ.
'ಇನ್ನು ಮಂಗಳೂರು-ಬೆಂಗಳೂರು ವಂದೇ ಭಾರತ್ ರೈಲಿಗಾಗಿ ಮಾಡಿದ ಮನವಿ ಫಲಪ್ರದವಾಗಿದ್ದು, ಶೀಘ್ರದಲ್ಲಿ ಅದು ಕೂಡ ಈಡೇರಲಿದೆ. ಈ ಸಿಹಿಸುದ್ದಿಗಾಗಿ ಜಿಲ್ಲೆಯ ನಾಗರಿಕರ ಪರವಾಗಿ ಕೇಂದ್ರ ಸರಕಾರಕ್ಕೆ ಧನ್ಯವಾದಗಳು' ಎಂದು ಕಟೀಲ್ ಟ್ವೀಟ್ ಮಾಡಿದ್ದಾರೆ.
ಕೆಲವು ತಿಂಗಳ ಹಿಂದೆ ಪಾಲಕ್ಕಾಡ್ ರೈಲ್ವೆ ವಿಭಾಗ ಕೇರಳದಲ್ಲಿ ಸಂಚಾರ ನಡೆಸುವ ವಂದೇ ಭಾರತ್ ರೈಲನ್ನು ಮಂಗಳೂರು ತನಕ ವಿಸ್ತರಣೆ ಮಾಡಲು ಚಿಂತನೆ ನಡೆಸಿತ್ತು. ಅಲ್ಲದೇ ರೈಲ್ವೆ ಇಲಾಖೆಯ ಮುಂದೆ ಮಂಗಳೂರು-ಮಡಗಾಂವ್, ಮಂಗಳೂರು-ಎರ್ನಾಕುಲಂ ನಡುವೆ ವಂದೇ ಭಾರತ್ ರೈಲು ಸಂಚಾರ ನಡೆಸುವ ಪ್ರಸ್ತಾವನೆ ಇತ್ತು.
ಈಗ ಸಂಸದರು ಮಾಡಿರುವ ಟ್ವೀಟ್ ಅನ್ವಯ ಮಡಗಾಂವ್-ಮಂಗಳೂರು ನಡುವೆ ಹೊಸ ವಂದೇ ಭಾರತ್ ರೈಲು ಸಂಚಾರ ಶೀಘ್ರವೇ ಆರಂಭವಾಗಲಿದೆ. ಮಂಗಳೂರು-ಬೆಂಗಳೂರು ನಡುವೆ ವಂದೇ ಭಾರತ್ ರೈಲು ಓಡಿಸಬೇಕು ಎಂದು ಸಹ ಕರಾವಳಿ ಭಾಗದ ಜನರು ಬೇಡಿಕೆ ಇಟ್ಟಿದ್ದಾರೆ.
ವಂದೇ ಭಾರತ್ ರೈಲುಗಳ ನಿರ್ವಹಣೆಗಾಗಿಯೇ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಮೂಲ ಸೌಲಭ್ಯವನ್ನು ಕಲ್ಪಿಸಲಾಗುತ್ತಿದೆ. ಸುಮಾರು 60 ಲಕ್ಷ ವೆಚ್ಚದಲ್ಲಿ ಹೊಸದಾಗಿ ಪಿಟ್‌ಲೈನ್ ನಿರ್ಮಾಣ ಮಾಡಲಾಗಿದೆ. ಹೊಸ ಪಿಟ್‌ಲೈನ್‌ಗೆ Over Head equipment(OHE) ಲೈನ್ ಅಳವಡಿಕೆ ಮಾಡಲಾಗಿದೆ. ಸಾಮಾನ್ಯ ರೈಲುಗಳ ನಿರ್ವಹಣೆ ಮಾಡುವ ಪಿಟ್‌ಲೈನ್‌ಗಳಿಗೆ ವಿದ್ಯುತ್ ಚಾಲಿನ ಓಹೆಚ್‌ಇ ಸಂಪರ್ಕ ನೀಡುವುದಿಲ್ಲ. ಆದರೆ ವಂದೇ ಭಾರತ್ ರೈಲುಗಳ ನಿರ್ವಹಣೆಗೆ ಇದು ಅಗತ್ಯವಾಗಿದೆ.
ವಂದೇ ಭಾರತ್ ರೈಲು ಒಮ್ಮೆ ಸಂಚಾರ ಪೂರ್ಣಗೊಳಿಸಿದ ಬಳಿಕ ರೈಲುಗಳ ಸ್ವಚ್ಚತೆ, ಮೆಕಾನಿಕಲ್ ಮತ್ತು ಎಲೆಕ್ಟ್ರಿಕ್ ಪರಿಶೀಲನೆ ಕಡ್ಡಾಯವಾಗಿದೆ. ಆದ್ದರಿಂದ ವಂದೇ ಭಾರತ್ ರೈಲುಗಳನ್ನು ಓಡಿಸುವ ಮೊದಲು ಅದರ ನಿರ್ವಹಣೆಗೆ ಮೂಲ ಸೌಲಭ್ಯಗಳು ಇವೆಯೇ? ಎಂದು ಭಾರತೀಯ ರೈಲ್ವೆ ಪರಿಶೀಲನೆ ನಡೆಸುತ್ತದೆ.
ಕರ್ನಾಟಕದಲ್ಲಿ ಸದ್ಯ ಮೂರು ವಂದೇ ಭಾರತ್ ರೈಲುಗಳು ಸಂಚಾರ ನಡೆಸುತ್ತಿವೆ. 2022ರಲ್ಲಿ ಮೈಸೂರು-ಬೆಂಗಳೂರು-ಚೆನ್ನೈ ನಡುವೆ ಮೊದಲ ರೈಲು ಸಂಚಾರ ಆರಂಭವಾಗಿತ್ತು. 2023ರಲ್ಲಿ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ಮತ್ತು ಯಶವಂತಪುರ-ಕಾಚಿಗುಡ ನಡುವೆ ರೈಲು ಸಂಚಾರ ಆರಂಭಿಸಲಾಗಿದೆ.
ರಾಜ್ಯದ ವಿವಿಧ ಮಾರ್ಗದಲ್ಲಿ ವಂದೇ ಭಾರತ್ ರೈಲು ಓಡಿಸಬೇಕು ಎಂಬ ಬೇಡಿಕೆ ಇದೆ. ಇವುಗಳಲ್ಲಿ ಬೆಂಗಳೂರು-ಬೆಳಗಾವಿ, ಬೆಂಗಳೂರು-ಹೊಸಪೇಟೆ, ಬೆಂಗಳೂರು-ಕೊಯಮತ್ತೂರು, ಬೆಂಗಳೂರು-ತಿರುಪತಿ, ಬೆಂಗಳೂರು-ಮುಧುರೈ, ಬೆಂಗಳೂರು-ಪುದುಚೇರಿ, ಬೆಂಗಳೂರು-ಕಲಬುರಗಿ, ಬೆಂಗಳೂರು-ಶಿವಮೊಗ್ಗ ಮತ್ತು ಬೀದರ್-ಹುಬ್ಬಳ್ಳಿ ಮಾರ್ಗಗಳು ಸೇರಿವೆ.
ಸದ್ಯ ಬೆಂಗಳೂರು-ಧಾರವಾಡ ವಯಾ ಹುಬ್ಬಳ್ಳಿ ನಡುವೆ ಸಂಚಾರ ನಡೆಸುತ್ತಿರುವ ವಂದೇ ಭಾರತ್ ರೈಲನ್ನು ಬೆಳಗಾವಿ ತನಕ ವಿಸ್ತರಣೆ ಮಾಡಬೇಕು ಎಂಬ ಬೇಡಿಕೆ ಇದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ಗೆ ಪತ್ರವನ್ನು ಬರೆದಿದ್ದಾರೆ.
ರಾಜಧಾನಿ ಬೆಂಗಳೂರು ಮತ್ತು ಮಂಗಳೂರು ನಡುವೆ ಸಾವಿರಾರು ಜನರು ಸಂಚಾರ ನಡೆಸುತ್ತಾರೆ. ಆದ್ದರಿಂದ ಉಭಯ ನಗರಗಳ ನಡುವೆ ವಂದೇ ಭಾರತ್ ರೈಲು ಓಡಿಸಬೇಕು ಎಂದು ಬೇಡಿಕೆ ಇಡಲಾಗಿದೆ. ಈಗ ಬೆಂಗಳೂರು-ಮಂಗಳೂರು ನಡುವಿನ ಸಾಮಾನ್ಯ ರೈಲುಗಳು ತುಂಬಿ ತುಳುಕುತ್ತಿವೆ. ಹೊಸ ರೈಲು ಸೇವೆ ಆರಂಭಿಸಬೇಕು ಎಂದು ಸಹ ಪ್ರಯಾಣಿಕರು ಆಗ್ರಹಿಸಿದ್ದಾರೆ.












Click it and Unblock the Notifications